Advertisement

ಕಳಂಕಿತರಿಗೆ ನಿಷೇಧ ?ವಿಶೇಷ ಕೋರ್ಟ್ ಸ್ಥಾಪಿಸಿ; ಸುಪ್ರೀಂ

06:00 AM Nov 02, 2017 | Harsha Rao |

ಹೊಸದಿಲ್ಲಿ: ಆರೋಪ ಸಾಬೀತಾದ ರಾಜಕಾರಣಿಗಳ ಚುನಾವಣಾ ಸ್ಪರ್ಧೆಗೆ ಆಜೀವಪರ್ಯಂತ ನಿಷೇಧ ಹೇರ
ಬೇಕು ಎಂಬ ಪ್ರಸ್ತಾವ ಆಗಾಗ್ಗೆ ಸಾಮಾಜಿಕ ವಲಯಗಳಲ್ಲಿ ಕೇಳಿಬರುತ್ತಿತ್ತು. ಈಗ ಸ್ವತಃ ಚುನಾವಣಾ ಆಯೋಗವೇ ಸ್ಪಷ್ಟ ನಿಲುವು ತೆಗೆದುಕೊಂಡಿದೆ. ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಪ್ರಸ್ತಾವವನ್ನೂ ಸಲ್ಲಿಸಿದೆ. ಇನ್ನೊಂದೆಡೆ ಸಾವಿರಕ್ಕೂ ಹೆಚ್ಚು ಜನ ಪ್ರತಿನಿಧಿಗಳ ವಿರುದ್ಧ ದಾಖಲಾದ ಮೊಕ ದ್ದಮೆಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

Advertisement

ಸದ್ಯ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಲ್ಪಟ್ಟ ಜನಪ್ರತಿನಿಧಿಗಳನ್ನು ತತ್‌ಕ್ಷಣ ಅಮಾನತುಗೊಳಿಸುವ ಮತ್ತು ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸು ವುದರಿಂದ ಹೊರಗಿಡುವುದಕ್ಕೆ ಸಂಬಂಧಿಸಿ ದಂತೆ ಸುಪ್ರೀಂಕೋರ್ಟ್‌ 2013ರಲ್ಲಿ ತೀರ್ಪು ನೀಡಿತ್ತು. ಇದಕ್ಕೆ ಪೂರಕವಾಗಿ ಬಳಿಕ ಜನಪ್ರತಿನಿಧಿ ಕಾಯ್ದೆಯಲ್ಲೂ ಬದ ಲಾವಣೆ ಮಾಡಲಾಗಿದೆ. ಕೇಂದ್ರ ಸರಕಾರದ ಪರಿಗಣನೆಯಲ್ಲಿ ಈ ವಿಷಯವಿದೆ ಎಂದು ಸರಕಾರದ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆತ್ಮಾರಾಮ್‌ ನಾಡಕರ್ಣಿ ಹೇಳಿದ್ದಾರೆ.

ವಿಶೇಷ ನ್ಯಾಯಾಲಯ: 2014ರ ಅಂಕಿಅಂಶಗಳ ಪ್ರಕಾರ 1,581 ಶಾಸಕರು ಮತ್ತು ಸಂಸದರ ವಿರುದ್ಧ ದೂರುಗಳಿದ್ದು, ಇವುಗಳ ತ್ವರಿತ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ನ್ಯಾ| ರಂಜನ್‌ ಗೋಗೋಯ್‌ ಮತ್ತು ನವೀನ್‌ ಸಿನ್ಹಾ ನೇತೃತ್ವದ ನ್ಯಾಯ ಪೀಠ ಸೂಚಿಸಿದೆ. ಶಾಸಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಪೈಕಿ ಎಷ್ಟು ಪ್ರಕರಣಗಳನ್ನು ಒಂದು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ ಮತ್ತು 2014ರ ಅನಂತರ ಎಷ್ಟು ಜನಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್‌ ದೂರು ದಾಖಲಾಗಿದೆ ಎಂಬುದರ ವಿವರ ನೀಡುವಂತೆ ಕೇಂದ್ರ ಸರಕಾರಕ್ಕೆ ಕೋರ್ಟ್‌ ಸೂಚನೆ ನೀಡಿದೆ. ಈ ಬಗ್ಗೆ ಕೇಂದ್ರ ಸರಕಾರ ಕೂಡ, ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ ಎಂದಿದೆ.

ವಿವರಣೆ ಬಯಸಿದ ಕೋರ್ಟ್‌: ಈಗಿರುವ ಸಿಬಿಐ ವಿಶೇಷ ನ್ಯಾಯಾಲಯದೊಂದಿಗೆ ಈ ವಿಶೇಷ ಕೋರ್ಟ್‌ಗಳನ್ನು ವಿಲೀನಗೊಳಿಸಬಾರದು ಎಂದೂ ಈ ವೇಳೆ ಕೋರ್ಟ್‌ ಹೇಳಿದೆ. ಈಗಾಗಲೇ ಪ್ರತಿ ನ್ಯಾಯಾಲಯದಲ್ಲಿ ಸುಮಾರು 4 ಸಾವಿರ ಪ್ರಕರಣಗಳಿದ್ದು, ಇತರ ಪ್ರಕರಣಗಳೊಂದಿಗೆ ವಿಚಾರಣೆ ನಡೆಸಿದರೆ ಪ್ರಕರಣ ಒಂದು ವರ್ಷದೊಳಗೆ ಮುಕ್ತಾಯಗೊಳ್ಳುವುದು ಅಸಾಧ್ಯ. ಅಲ್ಲದೆ ಜನಪ್ರತಿನಿಧಿಗಳ ಮೇಲಿನ ಪ್ರಕರಣಗಳ ಬಗ್ಗೆ ತ್ವರಿತ ತೀರ್ಪು ನೀಡುವುದು ರಾಷ್ಟ್ರೀಯ ಹಿತಾಸಕ್ತಿಯ ಸಂಗತಿಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ವಿಶೇಷ ಕೋರ್ಟ್‌ ಸ್ಥಾಪನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನೆ ಹಾಗೂ ಈ ಉದ್ದೇಶಕ್ಕಾಗಿ ಎಷ್ಟು ಹಣವನ್ನು ಮೀಸಲಿಡಬೇಕಾಗುತ್ತದೆ ಎಂಬ ಬಗ್ಗೆ ಯೋಜನೆ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದೆ. ಅಗತ್ಯವಿದ್ದರೆ ನ್ಯಾಯಾಂಗ ನೇಮಕಾತಿ, ವಕೀಲರು ಮತ್ತು ನ್ಯಾಯಾಲಯ ಸಿಬಂದಿ ಹಾಗೂ ಮೂಲಸೌಕರ್ಯವನ್ನೂ ನ್ಯಾಯಾಲಯ ಒದಗಿಸಲಿದೆ ಎಂದು ಪೀಠ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ನಾಡಕರ್ಣಿ ಆರು ವಾರಗಳ ಕಾಲಾವಕಾಶ ಕೇಳಿದ್ದು, ವಿಚಾರಣೆಯನ್ನು ಡಿಸೆಂಬರ್‌ 13ಕ್ಕೆ ಮುಂದೂಡಲಾಗಿದೆ.

ತೀರ್ಪು ಜಾರಿ ಅಸಮರ್ಪಕ: ಜನಪ್ರತಿನಿಧಿಗಳ ಮೇಲಿನ ಪ್ರಕರಣವನ್ನು ಒಂದು ವರ್ಷದೊಳಗೆ ಮುಕ್ತಾಯಗೊಳಿಸಬೇಕು ಎಂದು 2014ರ ಮಾರ್ಚ್‌ 10ರಂದು ಕೋರ್ಟ್‌ ತೀರ್ಪು ನೀಡಿತ್ತು. ಆದರೆ ಇದು ಈವರೆಗೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲದ ಹಿನ್ನೆಲೆಯಲ್ಲಿ ಕೋರ್ಟ್‌ ಈ ಆದೇಶ ನೀಡಿದೆ.

Advertisement

9 ಜನಪ್ರತಿನಿಧಿಗಳು ಅನರ್ಹ: 2013ರ ಜು. 10ರಂದು ಪ್ರಕಟಗೊಂಡ ಜನಪ್ರತಿನಿಧಿಗಳ ಅನರ್ಹತೆ ತೀರ್ಪಿನ ಅನಂತರದಲ್ಲಿ ಒಟ್ಟು 9 ಜನಪ್ರತಿನಿಧಿಗಳು ವಿವಿಧ ಪ್ರಕರಣಗಳಲ್ಲಿ ಅನರ್ಹರಾಗಿದ್ದಾರೆ. ಎರಡು ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೆ ಒಳಗಾದ ಜನಪ್ರತಿನಿಧಿಯನ್ನು ಅನರ್ಹಗೊಳಿಸಿದ್ದಲ್ಲದೆ, ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆಯೂ ಕೋರ್ಟ್‌ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಎಂಬಿಬಿಎಸ್‌ ಸೀಟ್‌ ಹಗರಣದಲ್ಲಿ 4 ವರ್ಷಗಳವರೆಗೆ ಶಿಕ್ಷೆಗೆ ಒಳಗಾದ ಕಾಂಗ್ರೆಸ್‌ ಮುಖಂಡ ರಶೀದ್‌ ಮಸೂದ್‌ (ಕಾಂಗ್ರೆಸ್‌), ಮೇವು ಹಗರಣದಲ್ಲಿ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ (ಆರ್‌ಜೆಡಿ), ಹಾಗೂ ಜಗದೀಶ್‌ ಶರ್ಮಾ (ಆರ್‌ಜೆಡಿ), ಇತರ ಪ್ರಕರಣಗಳಲ್ಲಿ ಮಹಾರಾಷ್ಟ್ರದ ಬಾಬನರಾವ್‌ ಘೋಲಪ್‌ (ಶಿವಸೇನೆ), ತಮಿಳುನಾಡಿನ ಟಿ.ಎಂ.ಸೆಲ್ವಗಣಪತಿ (ಡಿಎಂಕೆ), ಮಹಾರಾಷ್ಟ್ರದ ಸುರೇಶ್‌ ಹಲ್ವಣಕರ್‌ (ಬಿಜೆಪಿ), ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ (ಎಐಎಡಿಎಂಕೆ), ಮಧ್ಯಪ್ರದೇಶದ ಆಶಾ ರಾಣಿ (ಬಿಜೆಪಿ), ಜಾರ್ಖಂಡದ ಕಮಲ್‌ ಕಿಶರ್‌ ಭಗತ್‌ (ಜಾರ್ಖಂಡ ಸ್ಟೂಡೆಂಟ್ಸ್‌ ಯೂನಿಯನ್‌) ಅನರ್ಹಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next