Advertisement

ಅಭಿವೃದ್ಧಿ ಮಾಡದ ಕಾಂಗ್ರೆಸ್‌ನಿಂದ ಅಪಪ್ರಚಾರ

12:16 AM Apr 08, 2019 | Team Udayavani |

ಬೆಂಗಳೂರು: ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದ ಕಾಂಗ್ರೆಸ್‌ನವರು ಅಪಪ್ರಚಾರದಲ್ಲಿ ತೊಡಗಿದ್ದು, ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಆರೋಪಿಸಿದರು.

Advertisement

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭೆ ಕ್ಷೇತ್ರದಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಲವು ದಶಕಗಳ ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದರೂ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿಯೇ ಅವರು ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪ ಮಾಡದೆ ಕೇವಲ ಟೀಕೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

“ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಸೇರಿದಂತೆ ಹಲವು ಕಾರ್ಯಗಳಲ್ಲಿ ನಾನು ಉತ್ತಮ ಸಂಸದ ಎಂದು ಬಿ-ಪ್ಯಾಕ್‌ ವರದಿಯಲ್ಲಿ ಉಲ್ಲೇಖೀಸಿದೆ. ಜತೆಗೆ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಬ್ಯಾಟರಾಯನಪುರ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರದ ಗ್ರಾಮಗಳನ್ನು ಸರ್ವತೋಮುಖವಾಗಿ ಅಭಿವೃದ್ಧಿಪಡಿಸಲಾಗಿದೆ’ ಎಂದು ಹೇಳಿದರು.

ದಾರಿ ತಪ್ಪಿಸುವ ಕೆಲಸ: “ನಾನು ವಾರ್ಡ್‌ಗಳಿಗೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಪಾಲಿಕೆ ಸದಸ್ಯರಿರುತ್ತಾರೆ. ನಾನು ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿದ್ದು, ಕೃಷ್ಣ ಬೈರೇಗೌಡರ ರೀತಿ ಬ್ಯಾಟರಾಯನಪುರಕ್ಕೆ ಮಾತ್ರ ಸೀಮಿತವಾಗಿಲ್ಲ.

ಯಾವುದೇ ಅಭಿವೃದ್ಧಿ ಕೆಲಸ ಮಾಡದ ಕೃಷ್ಣಬೈರೇಗೌಡರು ನನ್ನ ವಿರುದ್ಧ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು. ಬಳಿಕ ಟೆಂಪಲ್ಸ್‌ ಬೆಲ್‌ ಅಪಾರ್ಟ್‌ಮೆಂಟ್‌ಗಳಿಗೆ ತೆರಳಿ ಮತಯಾಚಿಸಿದ ಸದಾನಂದಗೌಡರು, “ರಾಜ್ಯ ಮತ್ತು ಕೇಂದ್ರದಲ್ಲಿ ಯಾವ ವಿದ್ಯಾಮಾನಗಳು ನಡೆಯುತ್ತಿವೆ ಎಂಬುದನ್ನು ವಿದ್ಯಾವಂತ ಮತದಾರರು ವಿಶ್ಲೇಷಿಸಬೇಕು.

Advertisement

ದೇಶದ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಬಿಜೆಪಿಯನ್ನು ಬೆಂಬಲಿಸಬೇಕು. ಕ್ಷೇತ್ರದ ಸಂಸದನಾಗಿ ಕಳೆದ ಐದು ವರ್ಷಗಳಲ್ಲಿ ಮಾಡಿದ ಕೆಲಸಗಳ ಪ್ರಗತಿ ವರದಿಯನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದು, ವರದಿ ಅವಲೋಕಿಸಿ ನನ್ನನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಪ್ರಚಾರ ವೇಳೆ ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಮಾಜಿ ಉಪಮೇಯರ್‌ ಎಸ್‌.ಹರೀಶ್‌, ಬಿಜೆಪಿ ಮುಖಂಡರಾದ ರಾಜೇಂದ್ರ ಕುಮಾರ್‌, ಪ್ರಸನ್ನ ಆನಂದ್‌, ಗಂಗಹನುಮಂತಯ್ಯ ಹಾಜರಿದ್ದರು.

ದೇಶದ ವಿಚಾರದಲ್ಲಿ ರಾಜಿಯಿಲ್ಲ: ದೇಶದ ರಕ್ಷಣೆ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಸದೃಢ ಭಾರತ ನಿರ್ಮಾಣಕ್ಕಾಗಿ ಮೋದಿ ಅವರು ಶ್ರಮಿಸುತ್ತಿದ್ದು, ವಿಶ್ವಮಟ್ಟದಲ್ಲಿ ಭಾರತ ಮುಂಚುಣಿಯಲ್ಲಿ ನಿಲ್ಲುವಂತೆ ಮಾಡಿದ್ದಾರೆ.

ಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಮೂಲಕ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಭಾರತವಿಂದು ಪ್ರಪಂಚದ ಐದು ಪ್ರಮುಖ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಮೋದಿ ಅವರು ಪುನಃ ಪ್ರಧಾನಿಯಾದರೆ ಭಾರತ ವಿಶ್ವದ ನಂ.1 ದೇಶವಾಗಲಿದೆ ಎಂದು ಸದಾನಂದಗೌಡರು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next