ಶ್ರೀರಂಗಪಟ್ಟಣ: ಕಲ್ಲು ಗಣಿಗಾರಿಕೆ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ರಾತ್ರಿ ಹೊತ್ತಿನಲ್ಲಿ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ಯಮ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳುತ್ತಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳು ಪರೋಕ್ಷವಾಗಿ ಅಕ್ರಮ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ವಿವಿಧ ಗ್ರಾಮಸ್ಥರು ಆರೋಪಿಸಿ, ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಡಿ. ನಾಗೇಶ್ ಹಾಗೂ ಕಿರಿಯ ಭೂಜ್ಞಾನಿ ನಾಗೇಶ್‌ರನ್ನು ಪ್ರಶ್ನಿಸಿದರು. ನಿಷೇಧಾಜ್ಞೆ ಉಲ್ಲಂಘಿಸಿದರೂ ಕ್ರಮ ಜರುಗಿಸದೆ ಸಾರ್ವಜನಿಕ ಸಂಪತ್ತಿನ ಲೂಟಿಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಕೋಡಿಶೆಟ್ಟಿಪುರ ತೇಜಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಿಷೇಧಾಜ್ಞೆ ನಡುವೆಯೂ ಹಂಗರಹಳ್ಳಿ, ಕೋಡಿಶೆಟ್ಟಿಪುರ, ಚನ್ನನಕೆರೆ, ಮುಂಡುಗದೊರೆ, ಶ್ರೀರಾಂಪುರ, ಕಾಳೇನಹಳ್ಳಿ ಗ್ರಾಮಗಳ ಆಸುಪಾಸಿನಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಜಲ್ಲಿ ಕ್ರಷರ್ ಉದ್ಯಮ ಹಗಲು ರಾತ್ರಿ ನಿರಾತಂಕವಾಗಿ ನಡೆಯುತ್ತಿದೆ. ಅರಣ್ಯ, ಕಂದಾಯ, ಗಣಿ ಮತ್ತು ಭೂಜ್ಞಾನ ಹಾಗೂ ಪೊಲೀಸರಿಗೆ ಅಕ್ರಮ ದಂಧೆ ಗೊತ್ತಿದ್ದರೂ ಯಾವುದೇ ಕ್ರಮ ಜರುಗಿಸತ್ತಿಲ್ಲ ಎಂದು ರಾಮಲಿಂಗೇಗೌಡ, ಮುರಳಿ, ಮಧು ಇತರರು ತಹಶೀಲ್ದಾರ್‌ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.
ಕಲ್ಲು ಗಣಿಗಾರಿಕೆಯಂದಾಗಿ ಕೋಡಿಶೆಟ್ಟಿಪುರದಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಮುಚ್ಚುವ ಸ್ಥಿತಿ ಬಂದಿದೆ. ನೀರು, ಜಾನುವಾರುಗಳ ಮೇವಿನ ಮೇಲೆ ಅಪಾಯಕಾರಿ ದೂಳು ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಹೇಳಿದರು.
ಅಹವಾಲು ಆಲಿಸಿದ ತಹಶೀಲ್ದಾರ್ ಡಿ. ನಾಗೇಶ್, ನಿಷೇಧಾಜ್ಞೆ ಜಾರಿಗೊಳಿಸಿದ ಬಳಿಕ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಕಳುಹಿಸಿ ಅಕ್ರಮ ಗಣಿಗಾರಿಕೆ ತಡೆಗೆ ಕ್ರಮ ವಹಿಸುತ್ತೇನೆ ಎಂದು ತಹಶೀಲ್ದಾರರು ಭರವಸೆ ನೀಡಿದರು.
ರೈತಸಂಘ ದೂರು: ಶ್ರೀರಂಗಪಟ್ಟಣದಲ್ಲಿ ತಾಲೂಕಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸರ್ಕಾರಕ್ಕೆ ಹತ್ತಾರು ಕೋಟಿ ರೂಪಾಯಿ ನಷ್ಟ ಉಂಟಾಗುತ್ತಿದೆ. ರಾಜಕಾರಣಿಗಳೇ ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಮಂಜೇಶ್‌ಗೌಡ ತಿಳಿಸಿದ್ದಾರೆ.