Advertisement

Use of plastic: ಜಿಲ್ಲಾ ಕೇಂದ್ರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ರಾಜಾರೋಷ

03:54 PM Sep 02, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿಯೆ ನಿಷೇಧಿತ ಪ್ಲಾಸ್ಟಿಕ್‌ ಹೇರಳವಾಗಿ ಎಗ್ಗಿಲ್ಲದೇ ಬಳಕೆ ಆಗುತ್ತಿದ್ದರೂ ಸ್ಥಳೀಯ ನಗರಸಭೆ ಎಚ್ಚೆತ್ತಿಕೊಳ್ಳದ ಪರಿಣಾಮ ಜಿಲ್ಲಾಡಳಿತ ಆರಂಭಿಸಿರುವ ಕ್ಲೀನ್‌ ಸಿಟಿ, ಗ್ರೀಮ್‌ ಸಿಟಿ ಅಭಿಯಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

Advertisement

ಹೌದು, ಜಿಲ್ಲಾದ್ಯಂತ ಪರಿಸರ ಮಾಲಿನ್ಯಕ್ಕೆ ಕಾರಣ ವಾಗಿರುವ ಅದರಲ್ಲೂ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್‌ ಬಳಕೆಯನ್ನು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿಷೇಧಿಸಿದರೂ ಸಾರ್ವಜನಿಕರು ಹಾಗೂ ಅಂಗಡಿ ವರ್ತಕರು ಕದ್ದು ಮುಚ್ಚಿ ಪ್ಲಾಸ್ಟಿಕ್‌ ಬಳಕೆ ನಡೆಯುತ್ತಲೇ ಇರುವುದು ಎದ್ದು ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದ್ದು ಅದರಲ್ಲೂ ಪ್ಲಾಸ್ಟಿಕ್‌ ಬಳಕೆಯ ಪರಿಣಾಮ ನಗರ ಸ್ಥಳೀಯ ಸಂಸ್ಥೆಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ. ಆದರೆ ಪ್ಲಾಸ್ಟಿಕ್‌ ನಿಷೇಧ ಬಗ್ಗೆ ನಗರ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ವಿಫ‌ಲವಾಗಿರುವ ಪರಿಣಾಮ ಪ್ಲಾಸ್ಟಿಕ್‌ ನಿಷೇಧ ಅಭಿಯಾನ ಸಾರ್ವಜನಿಕ ವಲಯದಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿ ಆಗುವಂತೆ ಮಾಡುತ್ತಿದೆ. ಜಿಲ್ಲೆಯ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿಯೆ ನಿಷೇಧಿತ ಪ್ಲಾಸ್ಟಿಕ್‌ ಕೈ ಚೀಲಗಳು ಕೇಕೆ ಹಾಕುತ್ತಿದ್ದರೂ ನಗರಸಭೆ ಅಧಿಕಾರಿಗಳು ನೋಡಿ ನೋಡದಂತೆ ಇರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಎಲ್ಲಿ ನೋಡಿದರೂ ರಾಶಿ ರಾಶಿ ಪ್ಲಾಸ್ಟಿಕ್‌: ಜಿಲ್ಲಾ ಕೇಂದ್ರದಲ್ಲಿ ಸ್ವತ್ಛತೆ, ನೈರ್ಮಲ್ಯದ ವಿಚಾರದಲ್ಲಿ ಸಾಕಷ್ಟು ಹಿಂದೆ ಬಿದ್ದಿರುವ ನಗರಸಭೆ, ನಿಷೇಧಿತ ಪ್ಲಾಸ್ಟಿಕ್‌ ಬಳಕೆ ವಿರುದ್ದ ಕಠಿಣ ಕ್ರಮವಹಿಸುವಲ್ಲಿ ವಿಫ‌ಲವಾಗಿದೆ. ಆ ಕಾರಣಕ್ಕಾಗಿಯೇ ನಗರದ ಮುಖ್ಯ ರಸ್ತೆಗಳು, ಖಾಲಿ ನಿವೇಶನ ಸ್ಥಳ ಹಾಗೂ ಬಡಾವಣೆಗಳ ನಿರ್ಜನ ಪ್ರದೇಶಗಳಲ್ಲಿ ರಾಶಿ ರಾಶಿ ನಿಷೇಧಿತ ಪ್ಲಾಸ್ಟಿಕ್‌ ಬಿದ್ದಿರುವುದು ಎದ್ದು ಕಾಣುತ್ತಿದೆ. ಸಾರ್ವಜನಿಕರು ಬಳಸಿದ ಪ್ಲಾಸ್ಟಿಕ್‌ ಕೈ ಚೀಲಗಳು ಸೇರಿದಂತೆ ಅಪಾಯಕಾರಿ ಪ್ಲಾಸ್ಟಿಕ್‌ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

ಹೆಸರಿಗಷ್ಟೇ ಕ್ಲೀನ್‌ ಸಿಟಿ, ಗ್ರೀನ್‌ ಸಿಟಿ!: ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಡಾ.ಎಂ.ಸಿ.ಸುಧಾಕರ್‌ ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ನಮ್ಮ ಆದ್ಯತೆ, ಸ್ವತ್ಛತೆ ಹಾಗೂ ಹಸಿರೀಕರಣಕ್ಕೆ ನಮ್ಮ ಮೊದಲ ಆದ್ಯತೆ ಎಂದು ಹೇಳಿ ಸದ್ಯದಲೇ ಜಿಲ್ಲಾದ್ಯಂತ ಪ್ಲಾಸ್ಟಿಕ್‌ ನಿಷೇಧ ಹೇರುವುದಾಗಿ ಹೇಳಿದ್ದರು. ಆದರೆ ಜಿಲ್ಲಾಡಳಿತ ಇನ್ನೂ ಪ್ಲಾಸ್ಟಿಕ್‌ ನಿಷೇಧ ಅಭಿಯಾನ ಕೈಗೊಳ್ಳುವ ಬಗ್ಗೆ ಇನ್ನೂ ದೃಢ ನಿರ್ಧಾರ ಕೈಗೊಳ್ಳದ ಪರಿಣಾಮ ಜಿಲ್ಲಾದ್ಯಂತ ಸಾರ್ವಜನಿಕ ವಲಯದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ರಾಜರೋಷವಾಗಿ ಸಾಗಿದ್ದರೂ ಹೇಳುವವರು ಕೇಳುವವರು ಇಲ್ಲದಂತಾಗಿದೆ. -ಕಾಗತಿ ನಾಗರಾಜಪ್ಪ.

Advertisement

Udayavani is now on Telegram. Click here to join our channel and stay updated with the latest news.

Next