ಬೀದರ: ಸಮಾಜವಿದ್ರೋಹಿ ಕೃತ್ಯದಲ್ಲಿ ಭಾಗಿಯಾಗಿರುವ ಪಿಎಫ್‌ಐ ಮತ್ತು ಕೆಎಫ್‌ಡಿ ದೇಶದ್ರೋಹಿ ಸಂಘಟನೆಗಳಾಗಿದ್ದು, ರಾಜ್ಯದಲ್ಲಿ ಈ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಮತ್ತು ಮೋರ್ಚಾ ಜಿಲ್ಲಾಧ್ಯಕ್ಷ ಕಿರಣ ಪಾಟೀಲ ನೇತೃತ್ವದಲ್ಲಿ ನಗರದ ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. 2 ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ, ಹಲ್ಲೆ ಪ್ರಕರಣದಲ್ಲಿ ಪಿಎಫ್‌ಐ ಹಾಗೂ ಕೆಎಫ್‌ಡಿ ಸಂಘಟನೆ ನೇರವಾಗಿ ಭಾಗಿಯಾಗಿರುವುದು ರುಜುವಾತಾಗಿದೆ. ಈ ಸಂಘನೆಗಳು ನಿಷೇಧಿತ ಸಿಮಿ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದು, ನಿಷೇಧಿತ ಸಿಮಿ ಸಂಘಟನೆಯ ಪದಾಧಿಕಾರಿಗಳೇ ಈ ಸಂಘಟನೆಯಲ್ಲೂ ಪದಾಧಿ ಕಾರಿಗಳಾಗಿರುವುದು ಕಾನೂನಿಗೆ ಮಾಡಿರುವ ಅಣಕದಂತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ನಡೆದಿರುವ ಅನೇಕ ಕೊಲೆ, ಗಲಭೆಗಳಲ್ಲಿ ಭಾಗಿಯಾಗಿರುವ ಈ ಸಂಘಟನೆಗಳು ಮುಖ್ಯವಾಗಿ 2011 ಜೂನ್ 8ರಂದು ಮೈಸೂರಿನ ಮಹಾಜನ್ ಕಾಲೇಜಿನಲ್ಲಿ ಓದುತ್ತಿದ್ದ ಸುಧೀಂದ್ರ ಮತ್ತು ವಿಘ್ನೇಶ್ ಎಂಬ ಇಬ್ಬರು ಹಿಂದೂ ಯುವಕರನ್ನು ಅಪಹರಿಸಿ 5 ಕೋಟಿ ಬೇಡಿಕೆ ಇಟ್ಟು, ಆ ಇಬ್ಬರು ಯುವಕರನ್ನು ಅಮಾನುಷವಾಗಿ ಹತ್ಯೆಗೈದಿದ್ದರು. ಈ ಹಿಂದೆ ಮೈಸೂರಿನಲ್ಲಿ ನಡೆದ ಹಿಂದೂ ಯುವಕರ ಹತ್ಯೆಯ
ಸಮಯದಲ್ಲೂ ಈ ಸಂಘಟನೆಗಳನ್ನು ನಿಷೇಧಗೊಳಿಸುವ ಚಿಂತನೆ ನಡೆದಿತ್ತಾದರೂ ಮಾಡಿರಲಿಲ್ಲ. ಕೇರಳ ಸರ್ಕಾರ ಸ್ಥಳೀಯ ಹೈಕೋರ್ಟ್‌ಗೆ 2012ರಲ್ಲಿ ಸಲ್ಲಿಸಿದ ಅಫೀಡವಿಟ್‌ನಲ್ಲಿ ಪಿಎಫ್‌ಐ ಸಂಘಟನೆ ರಾಷ್ಟ್ರದ ಹಿತಕ್ಕೆ ಹಾನಿಕಾರಕ ಎಂದು ತಿಳಿಸಿದೆ. ಹಾಗಾಗಿ ಈ ಸಂಘಟನೆಗಳನ್ನು ನಿಷೇಧಿ ಸಬೇಕು. ಸಂಘನೆಗಳ ಬ್ಯಾಂಕ್ ಖಾತೆ ಹಾಗೂ ಚರಾಸ್ಥಿ- ಸ್ಥಿರಾಸ್ಥಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. 2008ರ ರಾಷ್ಟ್ರೀಯ ತನಿಖಾ ದಳ ಕಾಯ್ದೆಯ ಸೆಕ್ಷನ್ 6ರ ಅನ್ವಯ ರಾಜ್ಯದಲ್ಲಿ ಹಿಂದೂಗಳ ಮೇಲಾಗಿರುವ ಎಲ್ಲಾ ಹತ್ಯೆ ಮತ್ತು ಹಲ್ಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು. ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ರಮಾನಾಥ ರೈ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಗಿದೆ. ಬಿಜೆಪಿ ಪ್ರಮುಖರಾದ ಈಶ್ವರಸಿಂಗ್ ಠಾಕೂರ, ಜಯಕುಮಾರ ಕಾಂಗೆ, ಮನ್ಮಥ ಕಾಡವಾದ, ಗುರುನಾಥ ರಾಜಗೀರಾ, ವಿಜಯಕುಮಾರ ಮಂಠಾಳೆ, ಆಕಾಶ ಪಾಟೀಲ, ಯುವರಾಜ ಜಾಧವ, ಕಿರಣ ಹಣಮಶೆಟ್ಟಿ, ರತಿಕಾಂತ ಕೊಹಿನೂರ,
ಶ್ರೀನಿವಾಸರೆಡ್ಡಿ, ಬಸವರಾಜ ಭತಮುರ್ಗೆ, ಪೃಥ್ವಿ ಚಿನ್ನಪನೋರ, ನರಸಿಂಗ್ ತುಕಾರಾಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.