Advertisement

ಜಾತ್ರೆಗಳಲ್ಲಿ ಮಕ್ಕಳ ಎಸೆಯುವುದನ್ನು ನಿಷೇಧಿಸಿ

03:10 PM Mar 30, 2019 | pallavi |

ವಿಜಯಪುರ: ಜಾತ್ರೆಗಳಲ್ಲಿ ಚಿಕ್ಕ ಮಕ್ಕಳನ್ನು ರಥ ಹಾಗೂ ದೇವಸ್ಥಾನಗಳ ಮೇಲಿನಿಂದ ಕೆಳಕ್ಕೆ ಎಸೆಯುವ ಅನಿಷ್ಟ ಹಾಗೂ ಅಪಾಯಕಾರಿ ಪದ್ದತಿ ತಡೆಗಟ್ಟಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವ ಸೇನಾ ಜಿಲ್ಲಾ ಘಟಕದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾದ್ಯಕ್ಷ ಡಾ| ರವಿಕುಮಾರ ಬಿರಾದಾರ, ಇಂಥ ಕಂದಾಚಾರ, ಮೂಢ ಆಚಾರಗಳನ್ನು 12ನೇ ಶತಮಾನದಲ್ಲೇ ಬಸವಾದಿ ಶರಣರು ವೈಚಾರಿಕತೆ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದರು.

ಆದರೆ ಇಂಥ ಜಾಗೃತಿ ಮೂಡಿಸಿದ ಬಸವೇಶ್ವರರು ಜನ್ಮ ತಳೆದ ನೆಲದಲ್ಲೇ ಮಕ್ಕಳನ್ನು ಎಸೆಯುವ ಮೂಢ ಆಚರಣೆ ಇನ್ನೂ ಜೀವಂತವಾಗಿರುವುದು ಅತ್ಯಂತ ಕಳವಳಕಾರಿ ಸಂಗತಿ. ಇಂಥ ಆಚರಣೆಗಳು ಕರ್ನಾಟಕ ಮೌಡ್ಯ ನಿಷೇಧ ಕಾಯ್ದೆ 2017ರ ಪ್ರಕಾರ ಶಿಕ್ಷಾರ್ಹ ಅಪರಾಧ. ಹೀಗಾಗಿ ಮುಗ್ದ ಮಕ್ಕಳ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ತಡೆಯಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷದ ಕೊಲ್ಹಾರ ದಿಗಂಬರೇಶ್ವರ ಜಾತ್ರೆ, ಸಿಂದಗಿ ತಾಲೂಕಿನ ವಿಭೂತಿಹಳ್ಳಿ ಶರಣಬಸವೇಶ್ವರ ಜಾತ್ರೆಯಲ್ಲಿ ಚಿಕ್ಕ ಮಕ್ಕಳನ್ನು ಸುಮಾರು 20 ಅಡಿ ಮೇಲಿನಿಂದ ಕೆಳಗೆ ಎಸೆದಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆಗ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನಮ್ಮ ಸಂಘಟನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಈ ಬಾರಿ ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಅನಿಷ್ಟ ಪದ್ಧತಿಗೆ ಮುಕ್ತಾಯ ಹಾಡಬೇಕು ಎಂದು ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ, ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿ ಮೂಲಕ ಜಿಲ್ಲೆಯ ಎಲ್ಲ ಜಾತ್ರಾ ಸಮಿತಿಗಳಿಗೆ ಸೂಕ್ತ ನಿರ್ದೆಶನ ನೀಡಿ, ಮುಗ್ದ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯುವಂತೆ ಆಗ್ರಹಿಸಿದರು. ಸಂಘಟನೆಯ ನಿಂಗಪ್ಪ ಸಂಗಾಪುರ, ಶರಣಗೌಡ ಬಿರಾದಾರ, ಶಿವರಾಜ್‌ ಶಿಂಧೆ, ಕಲಮೇಶ ಗೋಕಾಕ, ಆನಂದ ಕ್ಷೀರಸಾಗರ, ಸುರೇಶ ಜಾಮಗೊಂಡ, ಯಲಗೊಂಡ ಬಿರಾದಾರ, ಸುರೇಶ ಆನಂದಿ, ವಿಜಯಕುಮಾರ ಜಾಬಾ, ಶಾಂತು ಅಳ್ಳಗಿ, ಗಿರೀಶ ಮದಭಾವಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next