Advertisement

11 ಎಕರೆಯಲ್ಲಿ 17 ಬೆಳೆ ಬೆಳೆಯುವ ರೈತ

07:57 PM Jul 09, 2021 | Team Udayavani |

ವರದಿ: ಮಂಜುನಾಥ ಮಹಾಲಿಂಗಪುರ

Advertisement

ಕುಷ್ಟಗಿ: ತಾಲೂಕಿನ ಹಂಚಿನಾಳ ವ್ಯಾಪ್ತಿಯಲ್ಲಿರುವ ರೈತ ದೊಡ್ಡಪ್ಪ ರಸರಡ್ಡಿ ಅವರು 11 ಎಕರೆ ಜಮೀನಿನಲ್ಲಿ ಪ್ರತಿ ವರ್ಷವೂ ಪ್ರತಿ ಹಂಗಾಮಿಗೆ 16ರಿಂದ 17 ಬೆಳೆ ಬೆಳೆಯುತ್ತಿದ್ದು, ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಏಕ ಬೆಳೆಯ ಬದಲಿಗೆ, ಬಹು ಬೆಳೆ ಪದ್ಧತಿಯ ಸಮಗ್ರ ಕೃಷಿ ಪದ್ಧತಿಯನ್ನು ಅಕ್ಷರಶಃ ಅಳವಡಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಹೆಸರು 1 ಎಕರೆ, ಈರುಳ್ಳಿ-2, ಹತ್ತಿ-2, ಗರ್ಕಿನ್‌ (ಮಿಡಿ ಸವತೆ)-1, ಟೊಮ್ಯಾಟೋ-2, ಬದನೆ-1, ಬೆಂಡೆ-1, ಎಳ್ಳು ಅರ್ಧ ಎಕರೆ ಸೇರಿದಂತೆ ಮೆಣಸಿನಕಾಯಿ, ಉದ್ದು ಇತ್ಯಾದಿ  ಬೆಳೆ ಬೆಳೆದಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಗೋಧಿ, ಶೇಂಗಾ, ಅಲಸಂದಿ, ಸೂರ್ಯಕಾಂತಿ ಬೆಳೆಯುತ್ತಿದ್ದಾರೆ. ಒಂದು ಬೆಳೆ ಕೊಯ್ಲು ನಂತರ ಇನ್ನೊಂದು ಬೆಳೆ ನಾಟಿಗೆ ಸಿದ್ಧವಾಗಿರುತ್ತದೆ.

ಇವರ ಹೊಲದಲ್ಲಿ ಇನ್ನೊಂದು ಗಮನಾರ್ಹ ಅಂಶ ಏನೆಂದರೆ ಬೆಳೆಗಳ ಪರಿವರ್ತನೆ ಮಾಡುತ್ತಾರೆ. ಇದರಿಂದ ಇಳುವರಿ ನಿರೀಕ್ಷೆಯಂತೆ ಬರುತ್ತಿದೆ. ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಟೊಮ್ಯಾಟೋ ಉತ್ತಮ ಇಳುವರಿ ಇದ್ದರೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಆದಾಯ ತಂದು ಕೊಡಲಿಲ್ಲ. ಆದರೂ ಧೃತಿಗೆಡದ ರೈತ ಕುಟುಂಬ ಯಾವುದೇ ಕಾರಣಕ್ಕೂ ಜಮೀನು ಖಾಲಿ ಬಿಟ್ಟಿರುವ ಉದಾಹರಣೆ ಇಲ್ಲ. ಈ ನಡುವೆಯೂ ಜಾನುವಾರುಗಳ ಸಾಕಾಣಿಕೆಗೆ ಮೇವು ಸಹ ನಾಟಿ ಮಾಡಿದ್ದಾರೆ. ಪ್ರತಿ ವರ್ಷ ಸರಾಸರಿ 9ರಿಂದ 10 ಲಕ್ಷ ರೂ. ಆದಾಯ ಗಳಿಸುವ ಈ ರೈತ ಮನೆಗೆ ಬೇಕಾದ ಆಹಾರಧಾನ್ಯ, ತರಕಾರಿಯನ್ನೂ ಬೆಳೆಯುತ್ತಾನೆ.

Advertisement

ಎರೆಹುಳು ಗೊಬ್ಬರ: ಕಳೆ, ಕಸ, ಕೊಯ್ಲು ನಂತರದ ತ್ಯಾಜ್ಯ ಸುಡಲ್ಲ. ಅದನ್ನು ಎರೆಹುಳು ಗೊಬ್ಬರಕ್ಕೆ ಬಳಸಲಾಗುತ್ತದೆ. ಕೀಟ ಬಾಧೆ ವಿಪರೀತವಾದಾಗ ಮಾತ್ರ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಕ್ರಿಮಿನಾಶಕ ಸಿಂಪಡಿಸುತ್ತಾರೆ.

ಹಂಚಿಕೊಂಡು ಕೆಲಸ: ಕೂಡಿ ಬಾಳ್ಳೋಣ, ಸೇರಿ ದುಡಿಯೋಣ ಎನ್ನುವ ಮಾತಿಗೆ ದೊಡ್ಡಪ್ಪ ರಸರಡ್ಡಿ ಅವರ ಅವಿಭಕ್ತ ಕುಟುಂಬ ಅನ್ವರ್ಥಕವಾಗಿದೆ. ಇವರ ಕುಟುಂಬ ಕೃಷಿ ಬಗ್ಗೆ ಅಪಾರ ಪ್ರೀತಿ ಹೊಂದಿದೆ. ಕೃಷಿ ಕಾರ್ಮಿಕರ ಸಮಸ್ಯೆ ನೀಗಿಸುವ ಹಿನ್ನೆಲೆಯಲ್ಲಿ ಮೂವರು ಸಹೋದರರು ಅವರ ಪರಿವಾರ ಒಟ್ಟಿಗೆ ವಾಸವಾಗಿದ್ದಾರೆ. ಪರಸ್ಪರ ಕೆಲಸ ಹಂಚಿಕೊಂಡು ನಿರ್ವಹಿಸುತ್ತಿದ್ದಾರೆ. ತಮ್ಮ ಕೃಷಿ ಚಟುವಟಿಕೆಗಳ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮರೆತಿಲ್ಲ. ಮಾರುಕಟ್ಟೆಗೆ ಕೃಷಿ ಉತ್ಪನ್ನ ಸಾಗಿಸಲು ಟಾಟಾ ಏಸ್‌ ವಾಹನ, ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್‌, ರಾಶಿ ಮಾಡಲು ಒಕ್ಕಣಿಕೆ ಯಂತ್ರವಿದ್ದು, ನಾಲ್ಕು ಎತ್ತು, ಹಸು, ಐದಾರು ಕುರಿಗಳನ್ನು ಸಾಕಿಕೊಂಡಿದ್ದಾರೆ. ಜಮೀನಿನ ದಡದಲ್ಲಿ ತೆಂಗು, ನಿಂಬೆ, ಹುಣಸೆ, ಕರಿಬೇವು ಇತ್ಯಾದಿ  ಗಿಡಗಳನ್ನೂ ಬೆಳೆಸಿಕೊಂಡಿದ್ದಾರೆ. ಎರಡು ಕೊಳವೆಬಾವಿ ಕೊರೆಯಿಸಿಕೊಂಡಿದ್ದು, ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಸಂಪೂರ್ಣ ನೀರಾವರಿ ಸಾಧ್ಯವಾಗಿಲ್ಲ.

ಹಳ್ಳ ಪಕ್ಕದಲ್ಲಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಜಿನಗು ನೀರು ಹಾಗೂ ಕೊಳವೆಬಾವಿ ನೀರು ತೆರೆದ ಬಾವಿಯಲ್ಲಿ ಸಂಗ್ರಹಿಸಿಕೊಂಡು ಅಗತ್ಯವೆನಿಸಿದಾಗ ಬಳಸಿಕೊಳ್ಳುತ್ತಾರೆ. ಮಳೆ ಅಭಾವವೆನಿಸಿದಾಗ ಸ್ಪಿಂಕ್ಲರ್‌ (ತುಂತುರು ನೀರಾವರಿ) ಸಾಂದರ್ಭಿಕವಾಗಿ ಬಳಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next