Advertisement

ಮುಖ್ಯಮಂತ್ರಿಗಳಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

04:20 PM May 29, 2020 | keerthan |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಜರುಗಿತು.

Advertisement

ಸಿ’ ವರ್ಗದ ಗಣಿಗುತ್ತಿಗೆಗಳನ್ನು ಸರ್ವೋಚ್ಛ ನ್ಯಾಯಾಲಯವು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಈ ಮೊದಲೇ ಗಣಿಗಾರಿಕೆ ಮಾಡಿರುವ ಸುಮಾರು 800 ಮಿಲಿಯನ್ ಟನ್ ಅದಿರು ಮಾರಾಟವಾಗದೇ ಉಳಿದುಕೊಂಡಿದ್ದು, ಇದನ್ನು ಮಾರಾಟ ಮಾಡಲು ಇರುವ ತಾಂತ್ರಿಕ ತೊಂದರೆಗಳ ನಿವಾರಣೆಗೆ ಮಹಾಲೇಖಪಾಲರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

ರಾಜ್ಯದಲ್ಲಿ ಖನಿಜ ಪರವಾನಗಿ ಇಲ್ಲದೆ, ಅಕ್ರಮ ಕಲ್ಲು ಗಣಿಗಾರಿಗೆ ಮಾಡುತ್ತಿರುವುದನ್ನು ತಡೆಗಟ್ಟಲು ಡ್ರೋನ್ ಸರ್ವೆಕೈಗೊಳ್ಳಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರಿನ ಖನಿಜಾನ್ವೇಷಣೆಗೆ  ಶೀಘ್ರವಾಗಿ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಖನಿಜಾನ್ವೇಷಣೆ ಕಾರ್ಯ ಕೈಗೊಳ್ಳುವಂತೆ ಅವರು ತಿಳಿಸಿದರು.

ಗಣೆಬಾಧಿತ ಪ್ರದೇಶಗಳ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಉತ್ತಮ ಪಡಿಸಲು ಗುತ್ತಿಗೆದಾರರಿಂದ ರಾಜಧನದ ಶೇಕಡಾ 10 ರಷ್ಟು ಮತ್ತು 30 ರಷ್ಟು ಅನ್ವಯವಾಗುವಂತೆ ಜಿಲ್ಲಾ ಪ್ರತಿಷ್ಠಾನ ನಿಧಿಗೆ ಈವರೆಗೆ ವಂತಿಗೆ 28 ಕೋಟಿ ರೂ ಸಂಗ್ರಹವಾಗಿದ್ದು, ಭಾರತ ಸರ್ಕಾರದ ನಿರ್ದೇಶನದಂತೆ ಕೋವಿಡ್ – 19ಕ್ಕೆ ಸೋಂಕು ತಡೆಗಟ್ಟಲು ಈ ಮೊತ್ತವನ್ನು ವಿನಿಯೋಗಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.

Advertisement

ರಾಜ್ಯದಲ್ಲಿ ಅಂದಾಜು 45 ದಶಲಕ್ಷ ಮೆಟ್ರಿಕ್ ಮರಳಿನ ಬೇಡಿಕೆ ಇದ್ದು, 38 ದಶಲಕ್ಷ ಮಟ್ರಿಕ್ ಟನ್ ಪೂರೈಕೆ ಮಾಡಲಾಗುತ್ತಿದೆ. ಹೊಸ ಮರಳು ನೀತಿಯ ಅನುಷ್ಠಾನದಿಂದ ಸರ್ಕಾರಕ್ಕೆ ಹೆಚ್ಚಿನ ರಾಜಧನ ಸಂಗ್ರಹವಾಗಲಿದೆ ಎಂದು ಸಚಿವರು ತಿಳಿಸಿದರು.

ಕೆಎಂಎಂಸಿಆರ್ ನಿಯಮಾವಳಿಗಳ ತಿದ್ದುಪಡಿ ನಂತರ ಬಾಕಿ ಇರುವ ಅರ್ಹ ಅರ್ಜಿಗಳಿಗೆ ಗಣಿಗುತ್ತಿಗೆಗಳ ಮಂಜೂರಾತಿ ಮತ್ತು ಹರಾಜು ಮೂಲಕ ಕಟ್ಟಡಕಲ್ಲು ಗಣಿಗುತ್ತಿಗೆಗೆಗಳ ಮಂಜೂರಾತಿ ನೀಡಲಾಗುವುದು.

ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮ 2020ರ ಜಾರಿಗೊಳಿಸಲು ಕ್ರಮವಹಿಸಲಾಗುತ್ತಿದ್ದು, ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಮತ್ತು ಪರವಾನಗಿ ವಿತರಣಾ ನಿಯಮಗಳ ಸರಳೀಕರಣ ಹಾಗೂ ಉಪ ಖನಿಜಗಳ ಮೇಲಿನ ರಾಜಧನ ಪರಿಷ್ಕರಣೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮಹೇಶ್ವರ ರಾವ್, ನಿರ್ದೇಶಕ ಶಿವಶಂಕರ್ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next