Advertisement

ಕಾಮಗಾರಿಗೆ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿ

03:15 PM Sep 08, 2020 | Suhan S |

ಚಾಮರಾಜನಗರ: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಚ್ಚುವರಿ ಅನುದಾನಕ್ಕಾಗಿ ಅಗತ್ಯ ಪ್ರಸ್ತಾವನೆ ಹಾಗೂ ಅಂದಾಜುಪಟ್ಟಿ ಸಲ್ಲಿಸುವಂತೆ ಪೌರಾಡಳಿತ ಸಚಿವ ಡಾ. ನಾರಾಯಣಗೌಡ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ, ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆ ಗಳು ಅನುಷ್ಠಾನಗೊಳಿಸಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮತ್ತು ರೇಷ್ಮೆ, ತೋಟಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಚಾಮರಾಜನಗರ ನಗರಸಭೆ ವತಿಯಿಂದ ಜಿಲ್ಲಾ ಕ್ರೀಡಾಂಗಣ, ಖಾಸಗಿ ಬಸ್‌ ನಿಲ್ದಾಣ, ರಂಗಮಂದಿರದ ಕಾಮಗಾರಿ ಹಾಗೂ ಕೋರ್ಟ್‌ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೋರ್ಟ್‌ ರಸ್ತೆಯ ಅಗಲೀಕರಣಕ್ಕಾಗಿ 8 ಕೋಟಿ ರೂ. ಗಳನ್ನು ಲೋಕೋಪಯೋಗಿ ಇಲಾಖೆ ನೀಡಲಾಗಿದ್ದು, ರಸ್ತೆಬದಿಯಲ್ಲಿನ ನಿವಾಸಿಗಳಿಗೆ ಈಗಾಗಲೇ 2.85 ಕೋಟಿ ರೂ. ಪರಿಹಾರ ನೀಡಲಾಗಿದೆ. ಹೆಚ್ಚು ವರಿ ಪರಿಹಾರದ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸುವಂತೆ ಸಚಿವ ನಾರಾಯಣಗೌಡ ತಿಳಿಸಿದರು.

ಪರಿಹಾರ ಒದಗಿಸಿ: ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕೋರ್ಟ್‌ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ರಸ್ತೆ ಬದಿಯ ನಿವಾಸಿಗಳಿಗೆ ಸೂಕ್ತ ಪರಿಹಾರ ಒದಗಿಸಿ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣಗೊಳಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ರಸ್ತೆ ಬದಿಯಲ್ಲಿ ಸರ್ಕಾರಿ ಜಾಗವಿದ್ದರೆ ಅದನ್ನು ತೆರವುಗೊಳಿಸಲು ನೋಟಿಸ್‌ ನೀಡುವ ಅಗತ್ಯವಿಲ್ಲ ಎಂದರು.

ಅನುದಾನ: ಶಾಸಕ ಎನ್‌. ಮಹೇಶ್‌ ಮಾತನಾಡಿ, ಕೊಳ್ಳೇಗಾಲದಲ್ಲಿ ಬಸ್‌ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಉಳಿದ ಕಾಮಗಾರಿಗಳಿಗಾಗಿ 10 ಕೋಟಿ ರೂ. ಹೆಚ್ಚುವರಿ ಅನುದಾನ ಅವಶ್ಯವಾಗಿದೆ. ಮಾದರಿ ಬಸ್‌ ನಿಲ್ದಾಣ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಬಿಡುಗಡೆ ಮಾಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

Advertisement

ರೇಷ್ಮೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 779 ರೇಷ್ಮೆ ನೇಕಾರರಿದ್ದು, ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 228 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದಕ್ಕಾಗಿ 67 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಯಾವುದೇ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಸಂಬಂಧಪಟ್ಟ ಆಯಾ ಭಾಗದ ಶಾಸಕರ ಗಮನಕ್ಕೂ ತರಬೇಕು ಎಂದು ಸಚಿವರು ತಿಳಿಸಿದರು.

ರೈತರ ಸಮಸ್ಯೆ ಅರಿಯಲು ಕ್ಷೇತ್ರ ಪ್ರವಾಸ ಕೈಗೊಳ್ಳಿ: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿಯಲ್ಲಿ ರೈತರ ಸಮಸ್ಯೆಗಳನ್ನು ಅರಿಯಲು ಅಧಿಕಾರಿಗಳು ಕ್ಷೇತ್ರಪ್ರವಾಸ ಮಾಡ ಬೇಕು. ಈ ಬಾರಿ ತೋಟಗಾರಿಕೆ ಬೆಳೆಹಾನಿಗೆ 70.85 ಲಕ್ಷ ರೂ. ಪರಿಹಾರ ನೀಡಲಾಗಿದೆ. ಹೂ ಬೆಳೆಗಾರರಿಗೂ ಪರಿಹಾರ ಒದಗಿಸಲಾಗಿದೆ. ಹಣ್ಣು ಬೆಳೆಗಾರರಿಗೆ 58 ಲಕ್ಷ ರೂ. ಬಿಡುಗಡೆಯಾಗಿದ್ದು, ಈಗಾಗಲೇ 607 ಜನರಿಗೆ ಪರಿಹಾರ ನೀಡಲಾಗಿದೆ. ಹನಿ ನೀರಾವರಿಗಾಗಿ ಜನರು ಮಧ್ಯವರ್ತಿಗಳನ್ನು ಅವಲಂಬಿಸದಂತೆ ಆದ್ಯತೆ ಮೇರೆಗೆ ಸಹಾಯಧನ ನೀಡಬೇಕು ಎಂದು ಸಚಿವರಾದ ನಾರಾಯಣಗೌಡ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಚಾಮರಾಜನಗರ ನಗರಸಭೆ ಪೌರಾಯುಕ್ತ ರಾಜಣ್ಣ, ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗ ಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಸುರೇಶ್‌, ಎಂಜಿನಿಯರ್‌ ರವಿ ಕುಮಾರ್‌, ರೇಷ್ಮೆ ಉಪನಿರ್ದೇಶಕ ವೃಷಭೇಂದ್ರಪ್ಪ, ತೋಟಗಾರಿಕಾ ಉಪನಿರ್ದೇಶಕ ಶಿವಪ್ರಸಾದ್‌ ಸೇರಿದಂತೆ ಪುರಸಭೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next