ಭಟ್ಕಳ: ಕಳೆದ ಆ.1ಮತ್ತು 2ರಂದು ಸುರಿದ ಭೀಕರ ಮಳೆಗೆ ಪುರಸಭಾ ವ್ಯಾಪ್ತಿಯಲ್ಲಿ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟೂ 4483 ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿ ಸಂಭವಿಸಿದೆ ಎಂದು ನೆರೆಹಾವಳಿ ಪರಿಶೀಲನಾ ಸಭೆಯಲ್ಲಿ ತಿಳಿಸಲಾಯಿತು.
ಇಲ್ಲಿನ ತಾಲೂಕಾ ಆಡಳಿತ ಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೆರೆಹಾವಳಿ ಪ್ರಗತಿ ಪರಿಶೀಲನೆ ಮತ್ತು ಪರಿಹಾರ ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 21 ಮನೆಗಳು ಪೂರ್ಣ ಹಾನಿಯಾಗಿವೆ, 32 ಮನೆಗಳಿಗೆ ತೀವ್ರ ಹಾನಿಯಾಗಿದೆ, 88 ಮನೆಗಳಿಗೆ ಭಾಗಶ ಹಾನಿಯಾಗಿದೆ, ಜಾನುವಾರು ಹಾಗೂ ಕೋಳಿಗಳಿಗೆ ಹಾನಿಯಾಗಿದೆ ಎಂದೂ ತಿಳಿಸಲಾಯಿತು. ಗ್ರಾಮಾಂತರ ಭಾಗದಲ್ಲಿ 16 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 9 ಪಂಚಾಯತ್ ವ್ಯಾಪ್ತಿಯಲ್ಲಿ 126 ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಒಟ್ಟೂ ರೂ.95,27,000 ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. 3395 ಮನೆಗಳಿಗೆ ನೀರು ನುಗ್ಗಿದ್ದು ತಲಾ 10 ಸಾವಿರ ರೂಪಾಯಿಗಳ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 6 ಮನೆಗಳು ಪೂರ್ಣ ಹಾನಿಯಾಗಿವೆ, 26 ಭಾಗಶ: ಹಾನಿಯಾಗಿವೆ, ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದೇವಸ್ಥಾನಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿರುವುದಕ್ಕೆ ಪ್ರತ್ಯೇಕವಾಗಿ ಅಂದಾಜು ತಯಾರಿಸಿ ಸರಕಾರಕ್ಕೆ ಕಳುಹಿಸಬೇಕು. ವಿಶೇಷ ಪ್ರಕರಣ ಎಂದು ಮಂಜೂರಿ ಮಾಡಲು ಮುಖ್ಯ ಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.
ಮಳೆಯಿಂದ ಒಮ್ಮೆ ನೀರು ನುಗ್ಗಿದರೆ ಮಣ್ಣುಗೋಡೆಯ ಹಾಗೂ ಕಚ್ಚಾ ಮನೆಗಳು ಯಾವ ಸಮಯದಲ್ಲಿ ಬೀಳುತ್ತವೆ ಎಂದು ಹೇಳಲಾಗದು. ನೀರು ನಿಂತು ಹತ್ತು ಹದಿನೈದು ದಿನದ ನಂತರವೂ ಬೀಳುವ ಸಾಧ್ಯತೆ ಇದೆ ಕಾರಣ ಪರಿಹಾರದ ಅರ್ಜಿಗಳನ್ನು ತೆಗೆದುಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಿ ಯಾರೇ ಬಂದರೂ ಕೂಡಆ ಇಲ್ಲ ಎಂದು ಹೇಳುವಂತಿಲ್ಲ ಎಂದರು.
ತಾಲೂಕಿನಲ್ಲಿ ವಿವಿಧ ಇಲಾಖೆಯ ಅಡಿಯಲ್ಲಿ ಆಗಿರುವ ಹಾನಿಯನ್ನು ತಹಸೀಲ್ದಾರ್ ಅವರು ಆಯಾ ಇಲಾಖೆ ಮುಖ್ಯಸ್ಥರಿಂದ ತರಿಸಿಕೊಂಡು ಕ್ರೋಢೀಕರಿಸಿ ಕೊಡಲು ಸೂಚಿಸಿದ ಅವರು ಶಾಸಕ ಸುನಿಲ್ ನಾಯ್ಕ ಅವರು ಕೋಳಿಗಳಿಗೆ ಈಗಿನ ಮಾನದಂಡದಂತೆ ಕೇವಲ 50 ರೂಪಾಯಿ ಕೊಡಲಾಗುತ್ತಿದ್ದು ಕನಿಷ್ಟ 500 ಮಾಡಬೇಕು ಎಂದು ಮಾಡಿದ ಮನವಿಯನ್ನು ಪರಿಶೀಲುಸುವುದಾಗಿ ತಿಳಿಸಿದರು. ಹಾಗೂ ತೋಟಗಾರಿಕಾ ಪ್ರದೇಶ ಹಾನಿಗೆ ಹೆಕ್ಟೇರ್ ಗೆ ನೀಡುವ ಪರಿಹಾರ ಅತ್ಯಂತ ಕಡಿಮೆಯಾಗಿದ್ದು ಪರಿಶೀಲಿಸುವಂತೆಯೂ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.