Advertisement

ಆಮೆಗತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ

04:35 PM Jul 03, 2022 | Team Udayavani |

ಹಾಸನ: ರಾಷ್ಟ್ರೀಯ ಹೆದ್ದಾರಿ 75 ರ ಹಾಸನ – ಸಕಲೇಶಪುರ ನಡುವೆ ಚತುಷ್ಪಥ ರಸ್ತೆ ನಿರ್ಮಾಣದ ಅವ್ಯವಸ್ಥೆಯ ಬಗ್ಗೆ ಶಾಸಕರು, ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ವಿಳಂಬ ದಿಂದಾಗುವ ಅನಾಹುತಗಳಿಗೆ ಎನ್‌ಎಚ್‌ಎಐ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

Advertisement

ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಶನಿವಾರವೂ ಮುಂದುವರಿದ ಕೇಂದ್ರ ಪುರಸ್ಕೃತ ಯೋಜನೆಗಳ ಪಗ್ರತಿ ಪರಿಶೀಲನಾ ಸಭೆಯಲ್ಲಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾನ್‌ಬಾಜ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಳೆದ ಜನವರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೂನ್‌ ವೇಳೆಗೆ ಹಾಸನ – ಸಕಲೇಶಪುರ ನಡುವೆ ಒಂದು ಪಥ ನಿರ್ಮಾ ಣವನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದೀರಿ. ಆದರೆ, ಇನ್ನೂ 9 ಕಿ.ಮೀ. ನಿರ್ಮಾಣ ಬಾಕಿ ಇದೆ ಎಂದು ಹೇಳುತ್ತಿದ್ದೀರಿ. ಹೀಗಾದರೆ ಕಾಮಗಾರಿ ಮುಗಿಯುವುದು ಯಾವಾಗ ? ಈಗ ನಡೆಯುತ್ತಿರುವ ಕಾಮಗಾರಿಯೂ ಕಳಪೆ ಎಂಬ ದೂರುಗಳಿವೆ. ಈ ರಸ್ತೆ ಹತ್ತಾರುವರ್ಷ ಬಾಳಿಕೆ ಬರುತ್ತದೆಯೇ ಎಂದು ಪ್ರಜ್ವಲ್‌ ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿಗೆ ತ್ವರಿತಗೊಳಿಸಿ: ಒಟ್ಟು ಕಾಮಗಾರಿಯಲ್ಲಿ ಈವರೆಗೆ ಕೇವಲ ಶೇ. 48 ರಷ್ಟು ಮಾತ್ರ ಪ್ರಗತಿಯಾಗಿದ್ದು, ಪ್ರತಿ ಬಾರಿ ಸಭೆಯಲ್ಲಿ ವಿನಾಯ್ತಿ ಕೇಳುವುದು ಸಂಮಂಜಸವಲ್ಲ. ಜನರಿಗೆ ಉತ್ತರ ಹೇಳುವುದು ನಮಗೆ ಕಷ್ಟ. ಕನಿಷ್ಠ ಒಂದು ಪಥ ರಸ್ತೆಯನ್ನಾದರೂ ತ್ವರಿತವಾಗಿ ನಿರ್ಮಿಸಿ ಎಂದು ತಾಕೀತು ಮಾಡಿದರು. ರಸ್ತೆ ಸಮಸ್ಯೆಯಿದ ಅಪಘಾತಗಳಿಗೆ ಅಧಿಕಾರಿಗಳನ್ನ ಹೊಣೆಗಾರರನ್ನಾಗಿ ಮಾಡಿ ಎಂದು ಶಾಸಕರಾದ ಎಚ್‌.ಕೆ. ಕುಮಾರಸ್ವಾಮಿ ಇದೆ ವೇಳೆ ಒತ್ತಾಯಿಸಿದರು.

ಯಾಕೆ ಕ್ರಮ ಕೈಗೊಂಡಿಲ್ಲ ?: ಶಾಸಕ ಎ.ಟಿ.ರಾಮಸ್ವಾಮಿ ಅವರು ಮಾತನಾಡಿ, ಗುತ್ತಿಗೆ ದಾರರಿಗೆ ಸಾಮರ್ಥ್ಯ ಇಲ್ಲ ಎಂಬುದು ಈವರೆಗಿನ ಪ್ರಗತಿಯಿಂದ ಸಾಬೀತಾಗಿದೆ. ಆದರೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ? ಅಧಿಕಾರಿ ಗಳು ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಂದರು. ಗುತ್ತಿಗೆ ಸಂಸ್ಥೆ ಹೊಣೆ ಮಾಡಿ: ಶಾಸಕ ಎಚ್‌.ಡಿ. ರೇವಣ್ಣ ಅವರು ಮಾತನಾಡಿ, ಹಾಸನ – ಸಕಲೇಶಪುರ ರಸ್ತೆ ಕಾಮಗಾರಿ 24 ತಿಂಗಳಿನಲ್ಲಿ ಮುಗಿಯಬೇಕಾಗಿತ್ತು. ಆದರೆ ಕಾಮಗಾರಿ ಪ್ರಾರಂಭವಾಗಿ 8 ವರ್ಷಗಳಾದರೂ ಮುಗಿದಿಲ್ಲ. ಈ ಲೋಪಕ್ಕೆ ಗುತ್ತಿಗೆ ಸಂಸ್ಥೆ ಹೊಣೆ ಮಾಡಿ ಅವರಿಂದ ನಷ್ಟ ವಸೂಲಿ ಮಾಡಬೇಕು ಎಂದರು.

ಅದೇ ರಾಗ.. ಅದೇ ಹಾಡು: ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೆಶಕ ಜಾನ್‌ಬಾಜ್‌ ಅವರು, ಮುಂದಿನ ಜನವರಿ ವೇಳೆಗೆ ಒಂದು ಬದಿಯ ರಸ್ತೆ ಪೂರ್ಣಗೊಳಿಸಲಾಗುವುದು ಎಂದರು. ಅವರ ಹೇಳಿಕೆ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿ ನಿಮಗೆ ಏನು ಹೇಳಿದರೂ ಪ್ರಯೋಜನವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಜಿಪಂ ಸಿಇಒ ಕಾಂತರಾಜು, ಹೆಚ್ಚುವರಿ ಪೊಲೀಸ್‌ ಮುಖ್ಯಾಧಿಕಾರಿ ಬಿ.ಎನ್‌. ನಂದಿನಿ ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next