ಕನಕಪುರ: ಕ್ಷೇತ್ರದ ಅಭಿವೃದ್ಧಿಯ ಹಾಗುಹೋಗುಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಪಾರ ದರ್ಶಕವಾಗಿ ಆಡಳಿತ ನಡೆಸಬೇಕಾದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಈ ಬಾರಿಯೂ ಮಾಧ್ಯಮದವರನ್ನು ಹೊರಗಿಟ್ಟು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ತಾಲೂಕಿನ ಹಾರೋಹಳ್ಳಿಯ ಪಪಂ ಕಚೇರಿ ಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ನೇತೃತ್ವದಲ್ಲಿ ತಹಶೀಲ್ದಾರ್ ವಿಶ್ವನಾಥ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಕರೆಯಲಾಗಿತ್ತು. ಶಾಸಕರು ಈ ಬಾರಿಯೂ ಮಾಧ್ಯಮದವರನ್ನು ಹೋರಗಿಟ್ಟು ಸಭೆ ನಡೆಸಿದರು.
ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಶಾಸಕರಾಗಿ ಆಯ್ಕೆಯಾದ ರಾಮ ನಗರ ವಿಧಾನಸಭಾ ಕ್ಷೇತ್ರದ ಭಾಗವಾದ ಹಾರೋಹಳ್ಳಿ, ಮರಳವಾಡಿ ಹೋಬಳಿಗಳ ಅಭಿವೃದ್ಧಿ ಬಗ್ಗೆ ತಿಳಿದುಕೊಳ್ಳುವ ಹಕ್ಕು ಕ್ಷೇತ್ರದ ಮತದಾರರಿಗಿದೆ. ಆದರೆ, ಶಾಸಕರು ಪ್ರತಿಬಾರಿಯೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಧ್ಯಮದವರನ್ನು ಹೊರಗಿಟ್ಟು ಗುಪ್ತವಾಗಿ ಸಭೆ ನಡೆಸುವ ಅಗತ್ಯವೇನಿದೆ. ಪಾರದರ್ಶಕ ಆಡಳಿತ ಎಂಬುದರ ಅರ್ಥವೇನು? ಅಮೂಲ್ಯವಾದ ಮತ ನೀಡಿದ ಜನರ ಪ್ರತಿನಿಧಿ ಯಾಗಿ ಆಯ್ಕೆ ಮಾಡಿದ ಮತದಾರರಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಿಳಿದುಕೊಳ್ಳುವ ಹಕ್ಕಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಪ್ರಗತಿ ಪರಿಶೀಲನಾ ಸಭೆ ಬಳಿಕ ಶಾಸಕಿ ಅನಿತಾ ಕುಮಾರಸ್ವಾಮಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಜೆಡಿಎಸ್ ಮುಖಂಡರ ನಡುವೆ ವಾಗ್ವಾದ ನಡೆ ಯಿತು. ಸಭೆ ಬಳಿಕ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಅನೇಕ ಸಾರ್ವಜನಿಕರು, ಶಾಸಕಿ ಅನಿತಾ ಅವರ ಬಳಿ ತಮ್ಮ ಅಹವಾಲು ಸಲ್ಲಿಸಿದರು.
ಶಾಸಕಿ ಅನಿತಾ ಮಾತನಾಡಿ. ರಾಮನಗರ ವಿಧಾನಸಭಾ ಕ್ಷೇತ್ರದ ಕಸಬಾ, ಕೈಲಂಚ, ಹಾರೋ ಹಳ್ಳಿ, ಮರಳವಾಡಿ ಹೋಬಳಿ ವ್ಯಾಪ್ತಿಗೆ 9 ಕೋಟಿ ಅನುದಾನ ತಂದಿದ್ದೇವೆ. ಇನ್ನು 15 ದಿನದೊಳಗೆ ಕೆಲಸ ಆರಂಭವಾಗಲಿದೆ. ಹಾರೋಹಳ್ಳಿ ಭಾಗದಲ್ಲಿ ಒಳ ಚರಂಡಿ ವ್ಯವಸ್ಥೆ ಸಂಪರ್ಕ ಕಾಮಗಾರಿಯಿಂದ ರಸ್ತೆ ಹಾಳಾಗಿದೆ. ಪಪಂ ಅನುದಾನದಲ್ಲಿ ರಸ್ತೆ ಅಭಿವೃದ್ಧಿ, ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಿದ್ದೇವೆ ಎಂದರು. ಇಒ ಮಧು ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಹಾರೋಹಳ್ಳಿ, ಮರಳವಾಡಿ ಹೋಬಳಿಯ ಗ್ರಾಪಂ ಪಿಡಿಒಗಳು ಹಾಜರಿದ್ದರು.