ಕುಮಟಾ: ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುತ್ತಿರುವುದು ತನ್ನ ಗಮನಕ್ಕೆ ಬಂದಿದ್ದು, ಅಭಿವೃದ್ಧಿಗೆ ಇಲಾಖೆಯಿಂದ ಯಾವುದೇ ಅಡ್ಡಿಯಾಗಬಾರದು. ಅಂತಹ ಘಟನೆ ಗಮನಕ್ಕೆ ಬಂದರೆ ಆ ಅಧಿಕಾರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಶಿವರಾಮ ಹೆಬ್ಟಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾ.ಪಂ ಸಭಾಭವನದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕುಡಿಯುವ ನೀರು, ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆಯಿಂದ ತೊಂದರೆಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಮ್ಮ ಜಿಲ್ಲೆಯ ವಾಸ್ಥವ ಸ್ಥಿತಿ ಅರಿತುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.
ಕತಗಾಲ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಧಿಕಾರಿಗಳ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ ವಲಯಾರಣ್ಯಾಧಿಕಾರಿ ಉಪಸ್ಥಿತರದ ಕಾರಣ ಕತಗಾಲ ವಲಯಾರಣ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಕನಿಷ್ಠ ಸೌಜನ್ಯವನ್ನು ನಿಮ್ಮ ಅಧಿಕಾರಿಗಳಿಗಿಲ್ಲವೇ ಎಂದು ಸಹಾಯಕ ಉಪಸಂರಕ್ಷಣಾಧಿಕಾರಿ ಪ್ರವೀಣಕುಮಾರ ಬಸ್ರೂರ ಅವರನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಇದು ಮುಂದುವರೆದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇನೆ ಎಂದರು. ಕೋವಿಡ್ 19 ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳಬಾರದು. ಪ್ರತಿ ತಾಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಜೂ.8-9 ರಂದು ಜಿಲ್ಲೆಯಲ್ಲಿ ಎಲ್ಲ ಚಟುವಟಿಕೆಗಳು ಆರಂಭವಾಗಲಿದೆ. ನಂತರ ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ವೇಗ ಹೆಚ್ಚಿಸಲಾಗುತ್ತದೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ತಾಲೂಕಿನ ವನ್ನಳ್ಳಿ, ಅಳ್ವೆàಕೋಡಿ ಹಾಗೂ ಗೋಕರ್ಣ ಭಾಗಗಳಲ್ಲಿ ಸಹಿ ಈರುಳ್ಳಿಯನ್ನು ಬೆಳೆಯುತ್ತಾರೆ. ಈ ವರ್ಷ ಕೊಳೆ ರೋಗ ಸೇರಿದಂತೆ ಇನ್ನಿತರ ಕಾರಣದಿಂದ ಸಂಪೂರ್ಣ ಬೆಳೆನಾಶವಾಗಿದೆ. ಅವರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ಪರಿಹಾರ ಮೊತ್ತ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರ ಬಳಿ ವಿನಂತಿಸಿದರು. ಕಳೆದ ವರ್ಷ ಭೀಕರ ಮಳೆಯಿಂದಾಗಿ ತಾಲೂಕಿನಲ್ಲಿ ಪ್ರವಾಹ ಉಂಟಾಗಿ ಮೀನುಗಾರರ ಬಲೆ ಹಾಗೂ ದೋಣಿಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಅವರಿಗೆ ಸರ್ಕಾರ ಆರ್ಥಿಕ ಸಹಾಯ ನೀಡಿದೆ. ಆದರೂ 37 ಮೀನುಗಾರರ ಬಲೆ ಹಾನಿಗೆ ಬರಬೇಕಿದ್ದು, ಅದನ್ನು ಆದಷ್ಟು ಶೀಘ್ರದಲ್ಲಿ ನೀಡುವ ವ್ಯವಸ್ಥೆಯಾಗಬೇಕು ಎಂದರು.
ಸಹಾಯಕ ಆಯುಕ್ತ ಎಂ.ಅಜಿತ ಮಾತನಾಡಿ, ಮಳೆಗಾಲದ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾ.ಪಂ ವ್ಯಾಪ್ತಿಯಲ್ಲಿ ಓರ್ವರಂತೆ 25 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕಳೆದ ವರ್ಷ 25 ಗಂಜಿ ಕೇಂದ್ರವನ್ನು ತೆರಯಲಾಗಿತ್ತು. ತಾಲೂಕಿನಲ್ಲಿ ಒಟ್ಟೂ 2396 ಮನೆಗಳಿಗೆ ಹಾನಿ ಸಂಭವಿಸಿತ್ತು. ಆ ಮನೆಗಳಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದ ಅವರು, 441.8 ಹೇಕ್ಟೇರ್ ಕೃಷಿ ಹಾಗೂ 716 ಹೆಕ್ಟೇರ್ ತೋಟಗಾರಿಕಾ ಬೆಳೆ ಬೆಳೆಯುವ ಪ್ರದೇಶಗಳಿಗೆ ಹಾನಿ ಸಂಭವಿಸಿತ್ತು. ಎಲ್ಲರಿಗೂ ಪರಿಹಾರ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾ.ಪಂ ಇಒ ಸಿ.ಟಿ.ನಾಯ್ಕ ಮಾತನಾಡಿ, ವಿವಿಧ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳ ಕುಟುಂಬದಲ್ಲಿರುವವರ ಹೆಸರು ಪಡಿತರ ಚೀಟಿಯಲ್ಲಿ ನೋಂದಣಿಯಾಗದ ಕಾರಣ ತಾಲೂಕಿನಲ್ಲಿ 66 ಆಶ್ರಯ ಮನೆಗಳು ಬಾಕಿ ಉಳಿದಿದೆ ಎಂದು ಸಭೆಗೆ ಮಾಹಿತಿ ನೀಡಿದಾಗ, ಆಕ್ರೋಶಗೊಂಡ ಸಚಿವ ಶಿವರಾಮ ಹೆಬ್ಟಾರ, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಈ ದಾಖಲಾತಿ ಅವಶ್ಯವಿಲ್ಲ. ಫಲಾನುಭವಿಯ ಆಧಾರ ಕಾರ್ಡ್, ಮನೆ ನಿರ್ಮಿಸಲು ಜಾಗ ಹಾಗೂ ಜಾಗದ ಜಿ.ಪಿ.ಎಸ್ ಇದ್ದರೆ ಸಾಕು. ಅನಗತ್ಯ ಕಾಗದ ಪತ್ರಗಳ ಅವಶ್ಯಕತೆಯಿಲ್ಲ. ಆ ಫಲಾನುಭವಿಗಳಿಗೆ ಆದಷ್ಟು ಶೀಘ್ರದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಹಕರಿಸಿ ಎಂದರು.
ಬಿಇಒ ಆರ್.ಎಲ್.ಭಟ್ಟ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗಿದ್ದು, 9 ಪರೀಕ್ಷಾ ಕೇಂದ್ರವನ್ನು ಗುರುತಿಸಲಾಗಿದೆ ಎಂದರು.
ತಾ.ಪಂ ಅಧ್ಯಕ್ಷೆ ವಿಜಯಾ ಪಟಗಾರ, ಜಿ.ಪಂ ಸದಸ್ಯರಾದ ಗಜಾನನ ಪೈ, ರತ್ನಾಕರ ನಾಯ್ಕ, ಪ್ರದೀಪ ನಾಯಕ ದೇವರಬಾವಿ, ಎಎಸ್‌ಪಿ ನಿಖೀಲ ಬುಳ್ಳಾವರ, ತಹಶೀಲ್ದಾರ್ ಮೇಘರಾಜ ನಾಯ್ಕ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಇದ್ದರು.