Advertisement

ಫ‌ಲಾನುಭವಿಗಳ ಆಯ್ಕೆ ಜನರ ಮುಂದೆ ನಡೆಯಲಿ

04:21 PM Nov 04, 2020 | Suhan S |

ಕೋಲಾರ: ಸರ್ಕಾರದ ಯೋಜನೆಗಳ ಅನುಷ್ಠಾನ, ಫ‌ಲಾನುಭವಿಗಳ ಆಯ್ಕೆ ಪ್ರಕ್ರಿಯೆ ಗ್ರಾಪಂಅಧ್ಯಕ್ಷರ ಮನೆ ಬಾಗಿಲ ಮುಂದೆ ನಡೆಯದೇ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯಬೇಕು ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳಬೇಕುಎಂದು ಕೇಂದ್ರ ಯೋಜನೆಗಳ ಪರಿಶೀಲನಾ ತಂಡದ ನೇತೃತ್ವ ವಹಿಸಿರುವ ಮಹಾರಾಷ್ಟ್ರ ಮೂಲದ ಅನಿಲ್‌ ಗಾಯ್ಕವಾಡ್‌ ತಿಳಿಸಿದರು.

Advertisement

ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಯೋಜನೆಗಳ ಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡಿದ ಸಂದ ರ್ಭದಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಪುರಸ್ಕೃತ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿರುವ, ಮಾರ್ಗಸೂಚಿ ಪಾಲನೆ, ಪಾರದರ್ಶಕತೆ ಕಾಯ್ದುಕೊಂಡಿರುವ ಇನ್ನಿತರೆ ಅಂಶಗಳ ಕುರಿತು ಜಿಲ್ಲಾ ಪ್ರವಾಸದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಪಾರದರ್ಶಕತೆ ಪರಿಶೀಲನೆ: ಯೋಜನೆಗಳು ನಿಯಮಾನುಸಾರ ಹಾಗೂ ಮಾರ್ಗಸೂಚಿಯನ್ವಯ ಅನುಷ್ಠಾನಗೊಂಡಿರುವುದು, ಪಾರ  ದರ್ಶಕತೆ, ಗುಣಮಟ್ಟ ಕಾಯ್ದುಕೊಳ್ಳಲಾಗಿದೆಯೇ, ಯೋಜನೆಗಳಲ್ಲಿ ತರಬೇಕಾದ ಸುಧಾರಣೆ ಗಳೇನು ಎಂಬ ಬಗ್ಗೆ ಗ್ರಾಪಂ ಮಟ್ಟದಲ್ಲಿ ಕ್ಷೇತ್ರ ಭೇಟಿ ಸಂದರ್ಭದಲ್ಲಿ ಪರಿಶೀಲಿಸಲಾಗುವುದು ಎಂದು ನುಡಿದರು.

1785 ಮನೆ ನಿರ್ಮಾಣದ ಗುರಿ: ಕೇಂದ್ರದ ವಸತಿ ಯೋಜನೆಯಡಿ 1785 ಮನೆ ನಿರ್ಮಾಣದ ಗುರಿಗೆ 123 ಮನೆ ಅಡಿಪಾಯದ ಹಂತದಲ್ಲಿ, 52 ಲಿಂಟಲ್‌, 117 ಮನೆಗಳು ಚಾವಣಿ ಮಟ್ಟದಲ್ಲಿ ಹಾಗೂ 115 ಮನೆಗಳು ಪೂರ್ಣಗೊಂಡಿದೆ. ಜಿಪಿಎಸ್‌ ಆಧಾರಿತ ಮೇಲ್ವಿಚಾರಣೆ ನಡೆದು 4 ಹಂತಗಳಲ್ಲಿ 1.20 ಲಕ್ಷ ರೂ. ಫ‌ಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ ಈ ಮಾದರಿ ಇತರೆ ರಾಜ್ಯಗಳಲ್ಲೂ ಪಾಲಿಸಲಾಗುತ್ತಿದೆ ಎಂದರು.

Advertisement

ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ 2013-14ನೇ ಸಾಲಿನಲ್ಲಿ 65 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗಿದ್ದು, 2019-20 ನೇ ಸಾಲಿನಲ್ಲಿ 20 ಕಾಮಗಾರಿಗೆ 160 ಕಿಮೀ ರಸ್ತೆ ಕಾಮಗಾರಿ 97 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ ಎಂದರು.

200 ದಿನಗಳಿಗೆ ಹೆಚ್ಚಿಸಲು ಮನವಿ: ಸಿಇಒ ರವಿಕುಮಾರ್‌ ಮಾತನಾಡಿ, ನರೇಗಾದಡಿ ವೈಯಕ್ತಿಕ ಕಾಮಗಾರಿಗೆ ಜಾಬ್‌ ಕಾರ್ಡ್‌ ಹೊಂದಿದ ವ್ಯಕ್ತಿಗೆ 100 ದಿನಗಳ ಕೆಲಸ ಮಾಡಲು ಅವಕಾಶವಿದೆ. ಆದರೆ ಅಂಗನವಾಡಿ ಮತ್ತು ಸರ್ಕಾರಿ ಕಚೇರಿಗಳಿಗೆ ಕಾಂಪೌಂಡ್‌ ನಿರ್ಮಿಸಲು ಅವಕಾಶ ಕಲ್ಪಿಸುವುದಾದಲ್ಲಿ ಜಾಬ್‌ ಕಾರ್ಡ್‌ ಹೊಂದಿರುವ ವ್ಯಕ್ತಿಗೆ ಹೆಚ್ಚುವರಿ ಮಾನವ ದಿನಗಳನ್ನು ಕಲ್ಪಿಸಿದರೆ ಸಾಧ್ಯವಾಗುತ್ತದೆ. ಬರಪೀಡಿತ, ಮಳೆ ಆಶ್ರಯ ಪ್ರದೇಶಗಳಲ್ಲಿ ಮಾನವ ದಿನಗಳನ್ನು 100 ದಿನಗಳ ಬದಲಿಗೆ 150ರಿಂದ 200 ದಿನಗಳಿಗೆ ಹೆಚ್ಚಿಸಬೇಕು ಎಂದು ಕೇಂದ್ರ ತಂಡದ ಅಧಿಕಾರಿಗಳನ್ನು ಒತ್ತಾಯಿಸಿದರು.

ಸಭೆಯಲ್ಲಿ ಕೇಂದ್ರ ತಂಡದ ಅಧಿಕಾರಿ ವಿನಯ್‌ ಗಾರ್ವಿಡೇ, ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಸೇರಿದಂತೆ ಕೃಷಿ, ತೋಟಗಾರಿಕೆ, ಆರ್‌ ಡಿಪಿಆರ್‌, ರೇಷ್ಮೆ ಮತ್ತಿತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

153 ಗ್ರಾಪಂಗೆ ಘನ-ದ್ರವ ತ್ಯಾಜ್ಯ ವಿಲೇವಾರಿಗೆ ನಿವೇಶನ :  ಸ್ವಚ್ಛ ಭಾರತ್‌ ಮಿಷನ್‌ ಅಡಿಯಲ್ಲಿ ಶೌಚಾಲಯ ರಹಿತ 1202 ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವ ಕಾರ್ಯ ನಡೆಯುತ್ತಿದ್ದು, 1168 ಪೂರ್ಣಗೊಂಡಿದೆ. 34 ಬಾಕಿ ಇದೆ ಎಂದು ಕೇಂದ್ರ ಯೋಜನೆಗಳ ಪರಿಶೀಲನಾ ತಂಡದ ನೇತೃತ್ವ ವಹಿಸಿರುವ ಮಹಾರಾಷ್ಟ್ರ ಮೂಲದ ಅನಿಲ್‌ ಗಾಯ್ಕವಾಡ್‌ ತಿಳಿಸಿದರು. ಸ್ವತ್ಛ ಸಂಕೀರ್ಣ ಯೋಜನೆಯಡಿ ಜಿಲ್ಲೆಯ 156 ಗ್ರಾಪಂಗಳ ಪೈಕಿ 153 ಗ್ರಾಪಂಗಳಿಗೆ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿಗೆ 3ರಿಂದ 10 ಎಕರೆವರೆಗೆ ಜಿಲ್ಲಾಧಿಕಾರಿಗಳು ನಿವೇಶನ ಮಂಜೂರು ಮಾಡಿದ್ದಾರೆ.  ಮತ್ತು ಬಂಗಾರಪೇಟೆಯ ತಲಾ ಒಂದು ಗ್ರಾಪಂಗಳಿಗೆ ಮುಂದಿನ ಮೂರು ದಿನದೊಳಗೆ ನಿವೇಶನ ಗುರುತಿಸಲಾಗುವುದು. 124 ಗ್ರಾಪಂಗಳ ಡಿಪಿಆರ್‌ನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, 102 ಮಂಜೂರಾತಿ ಆಗಿದೆ. ಉಳಿದವುಗಳ ಡಿಪಿಆರ್‌ ಶೀಘ್ರವೇ ಪೂಂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

1.20 ಲಕ್ಷ ರೂ. ಸಾಲದು! :  ಜಿಲ್ಲಾಧಿಕಾರಿ ಸಿ ಸತ್ಯಭಾಮ ಮಾತನಾಡಿ, ವಸತಿ ಯೋಜನೆಯಡಿ ಕೇಂದ್ರ ನೀಡುವ ಘಟಕ ವೆಚ್ಚ 1.20 ಲಕ್ಷ ರೂ. ಯಾವುದಕ್ಕೂ ಸಾಲದು.ಘಟಕ ವೆಚ್ಚವನ್ನು ಹೆಚ್ಚಿಸಬೇಕು. ನರೇಗಾದಡಿ ಅಂಗನವಾಡಿಗೆ ಕಾಂಪೌಂಡ್‌ ಹಾಗೂ ಸರ್ಕಾರಿ ಕಚೇರಿಗಳಿಗೆ ಕಾಂಪೌಂಡ್‌ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು, ನರೇಗಾದಡಿ ಮೊದಲು ಪೂರ್ಣಗೊಳಿಸಿದ ವ್ಯಕ್ತಿಗೆ ಮೊದಲು ಹಣ ಪಾವತಿಸುವ ವ್ಯವಸ್ಥೆಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಕೋರಿದರು.

112 ಶೌಚಾಲಯ ದುರಸ್ತಿಗೆ 2.24 ಕೋಟಿ ಮಂಜೂರು :  ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಶೌಚಾಲಯ ಇದ್ದು, ಅವಶ್ಯವಿರುವ ಹೆಚ್ಚುವರಿ ಶೌಚಾಲಯ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತಿದೆ. 112 ಶೌಚಾಲಯಗಳ ದುರಸ್ತಿಗೆ 2.24 ಕೋಟಿ ರೂ. ಮಂಜೂರಾಗಿದ್ದು, 110 ಶೌಚಾಲಯಗಳ ದುರಸ್ತಿ ಮುಗಿದಿದೆ ಎಂದು ಅನಿಲ್‌ ಗಾಯ್ಕವಾಡ್‌ ತಿಳಿಸಿದರು. ಅಂಗನವಾಡಿ ಶೌಚಾಲಯ ನಿರ್ಮಾಣದ 248 ಭೌತಿಕ ಗುರಿಗೆ 244 ಪೂರ್ಣಗೊಂಡಿದೆ. 134 ಶೌಚಾಲಯಗಳ ದುರಸ್ತಿ ಪೈಕಿ 133 ಪೂರ್ಣಗೊಂಡಿದೆ. ಸಮುದಾಯ ಶೌಚಾಲಯ 100 ಗುರಿಗೆ 54 ಪ್ರಗತಿಯಲ್ಲಿದೆ. 45 ಪೂರ್ಣಗೊಂಡಿದೆ, ಒಂದು ಪ್ರಗತಿಯಲ್ಲಿದೆ. ಜಿಲ್ಲೆಯ ಎಲ್ಲ 156 ಗ್ರಾಪಂಗಳು ಗಣಕೀಕರಣಗೊಂಡಿದೆ ಎಂದರು.

ಶೇ.70ರಷ್ಟು ನೀಲಗಿರಿ ತೆರವು :  ಸಾಮಾಜಿಕ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ದೇವರಾಜ್‌ ಮಾತನಾಡಿ, ರಾಜ್ಯ ಸರ್ಕಾರ ನೀಲಗಿರಿ ಬೆಳೆಯುವುದನ್ನು ನಿಷೇಧಿಸಿದೆ. ಸರ್ಕಾರದ ಜಾಗದಲ್ಲಿದ್ದ ಶೇ.70ರಷ್ಟು ನೀಲಗಿರಿ ಮರಗಳನ್ನು ತೆರವು ಮಾಡಲಾಗಿದೆ. ರೈತರ ಜಮೀನಿನಲ್ಲಿ ಮರಗಳಿದ್ದು, ಉತ್ತಮ ಬೆಲೆ ಇಲ್ಲದ ಕಾರಣಕ್ಕೆ ರೈತರು ತೆರವು ಮಾಡುತ್ತಿಲ್ಲ. ನೀಲಗಿರಿ ಮರವನ್ನು ಬೇರು ಸಹಿತ ತೆರವುಗೊಳಿಸಲು ಎಕರೆಗೆ 30,000 ರೂ. ವೆಚ್ಚ ಬರುತ್ತದೆ. ನರೇಗಾದಡಿ ಇದಕ್ಕೆ ಅವಕಾಶ ಕಲ್ಪಿಸಬೇಕೆಂದು ರಾಜ್ಯ ಸರ್ಕಾರದಿಂದ ಕಳೆದ ವರ್ಷವೇ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ,. ಇದಕ್ಕೆ ಅನುಮತಿ ನೀಡಿದಲ್ಲಿ ನೀಲಗಿರಿ ಮರಗಳನ್ನು ತೆರವುಮಾಡಲು ರೈತರು ಮುಂದೆ ಬರುತ್ತಾರೆಂದರು.

ತೋಟಗಾರಿಕೆ ಗಿಡ ನೆಡಲು ಅವಕಾಶ :  ನೀಲಗಿರಿ ಮರ ತೆರವುಗೊಳಿಸಿದ ನಂತರ ಅರಣ್ಯ ಕೃಷಿ ಇಲ್ಲವೇ ತೋಟಗಾರಿಕೆ ಗಿಡಗಳನ್ನು ನೆಡಲು ತೋಟಗಾರಿಕೆ ಯೋಜನೆಯಡಿ ಅವಕಾಶ ಇದೆ. ನರೇಗಾದಡಿ ರೈತ ಕ್ರಿಯಾ ಯೋಜನೆಯಡಿ ಒಬ್ಬ ಫ‌ಲಾನುಭವಿಗೆ 2.50 ಲಕ್ಷ ರೂ.ವರೆಗಿನ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ಸಿಇಒ ರವಿಕುಮಾರ್‌ತಿಳಿಸಿದರು.

ದೀನ್‌ ದಯಾಳ್‌ ಅಂತ್ಯೋದಯ, ನರೇಗಾ, ಎನ್‌ಆರ್‌ಎಲ್‌ಎಂ, ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌, ಪ್ರಧಾನಮಂತ್ರಿ ಗ್ರಾಮ ಸಡಕ್‌, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಸಂಸದರ ಆದರ್ಶ ಗ್ರಾಮ ಯೋಜನೆ, ಗ್ರಾಪಂಗಳ ಮೂಲ ಸೌಕರ್ಯಗಳ ಪರಿಶೀಲನೆಗಾಗಿ ಕೇಂದ್ರ ನೇಮಿಸಿರುವ ಏಜೆನ್ಸಿ ಅಡಿ ಪರಿಶೀಲನೆಗೆ ಬಂದಿರುವೆ. ಅನಿಲ್‌ ಗಾಯ್ಕವಾಡ್‌, ಕೇಂದ್ರ ಯೋಜನೆಗಳ ಪರಿಶೀಲನಾ ತಂಡದ ನೇತೃತ್ವ ವಹಿಸಿದವರು

Advertisement

Udayavani is now on Telegram. Click here to join our channel and stay updated with the latest news.

Next