ರಾಮದುರ್ಗ: ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ತಾಲೂಕಿನ ರೈತರ ಹಾಗೂ ಸಾರ್ವಜನಿಕರ ಬದುಕು ಕಷ್ಟಕರವಾಗಿದ್ದು, ಕೃಷಿ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಬೆಳೆ ಹಾಗೂ ಬಿದ್ದ ಮನೆಗಳ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಸೂಚನೆ ನೀಡಿದರು.
ಸ್ಥಳೀಯ ತಾ.ಪಂ ಸಭಾಭವನದಲ್ಲಿ ಸೋಮವಾರ ಪ್ರವಾಹ ಪರಿಸ್ಥಿತಿ ಹಾಗೂ ಅತಿಯಾದ ಮಳೆಯಿಂದಾದಬೆಳೆ ಹಾನಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದಬಾರಿಯ ಸಮಸ್ಯೆಯನ್ನು ಅಧಿಕಾರಿಗಳು ಗಮನದಲ್ಲಿಟ್ಟುಕೊಂಡು ಜಾಗೃತಿಯಿಂದಕೆಲಸ ಮಾಡಬೇಕು. ಯಾವುದೇ ಬೆಳೆ ಇರಲಿ ಅದನ್ನು ಕಡ್ಡಾಯ ಡಾಟಾ ಎಂಟ್ರಿ ಮಾಡುವಲ್ಲಿ ಮುಂದಾಗಬೇಕು. ಒಂದು ವೇಳೆ ಬೆಳೆ ನಮೂದಿಸದೆ ಕೈತಪ್ಪಿ ಹೋಗಿದ್ದರೆ ಅದಕ್ಕೆ ಸಂಬಂಧಿ ಸಿದ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಬಾರಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಕೈಬಿಟ್ಟ ಹೋದ ಮನೆಗಳ ಹಾಗೂ ಅತಿಯಾದ ಮಳೆಯಿಂದ ಬಿದ್ದು ಹೋಗಿರುವ ಮನೆಗಳ ಸರ್ವೇ ಕಾರ್ಯವನ್ನು ಪ್ರಾಮಾಣಿಕತೆಯಿಂದ ನಡೆಸಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಸಾಕಷ್ಟುಸಮಸ್ಯೆಗಳನ್ನು ನಾವೆಲ್ಲಾ ಎದುರಿಸಬೇಕಾಗಿದೆ. ಎಷ್ಟೋ ಸಂತ್ರಸ್ತರಿಗೆ ಇನ್ನೂವರೆಗೂ ಮನೆ ಸಿಗದೆ ಗುಡಿ ಗುಂಡಾರಗಳಲ್ಲಿ ವಾಸಿಸುತ್ತಿದ್ದಾರೆ. ಇದರಿಂದಾಗಿ ಸಂತ್ರಸ್ತರು ಪ್ರತಿಭಟನೆ ನಡೆಸಿ ತಮ್ಮ ಗೋಳನ್ನು ತೋಡಿಕೊಳ್ಳುವಂತಹ ಪರಿಸ್ಥಿತಿ ಬಂದಿರುವದು ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ. ಈಗ ಅದು ಪುನರಾವರ್ತನೆ ಆಗಬಾರದು ಎಂದು ಖಡಕ್ ಸೂಚನೆ ನೀಡಿದರು.
ಅಲ್ಲದೇ ಕೃಷಿ ಇಲಾಖೆಯಿಂದ ಬಿತ್ತನೆಯಾದ ಪ್ರದೇಶ ಹಾಗೂ ಹಾಳಾದ ಬೆಳೆಯ ಮಾಹಿತಿಯನ್ನು ಪಡೆದುಕೊಂಡರು. ಹಾಗೂ ಸಂಬಂಧಿ ಸಿದ ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ತ್ವರಿತಗತಿಯಲ್ಲಿ ಕೆಲಸ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸೋಮಶೇಖರ ತಂಗೊಳ್ಳಿ, ತಾ.ಪಂ ಇಒ ಮುರಳಿಧರ ದೇಶಪಾಂಡೆ ಸೇರಿದಂತೆ ತಾಲೂಕಾ ಮಟ್ಟದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.