Advertisement

ಕಾಂಗ್ರೆಸ್‌ ಸುಸ್ಥಿರ ಆಡಳಿತದಿಂದ ದೇಶ ಪ್ರಗತಿ

04:41 PM Sep 06, 2022 | Team Udayavani |

ಕೊಪ್ಪಳ: ದೇಶದಲ್ಲಿ ಸುದೀರ್ಘ‌ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷ ಸುಸ್ಥಿತರ ಆಡಳಿತ ನೀಡಿದ್ದರಿಂದಲೇ ದೇಶ ಪ್ರಗತಿ ಕಾಣಲು ಸಾಧ್ಯವಾಯಿತು. ಡ್ಯಾಮ್‌ಗಳನ್ನು ಕಟ್ಟಿದ್ದೇವೆ. ಆಸ್ಪತ್ರೆ ನಿರ್ಮಿಸಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್‌ ಪಕ್ಷದವರು ತ್ಯಾಗ, ಬಲಿದಾನ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹೇಳಿದರು.

Advertisement

ನಗರದದ ಶಿವಶಾಂತ ಮಂಗಲ ಭವನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ 56 ವರ್ಷಗಳ ಕಾಲ ಆಳ್ವಿಕೆ ನಡೆಸಿದೆ. ಉಳಿದ ಅವಧಿ ಬೇರೆಯವರು ಆಳ್ವಿಕೆ ನಡೆಸಿದ್ದಾರೆ. ಕಾಂಗ್ರೆಸ್‌ ಆಡಳಿತದಲ್ಲಿ ಶಾಲೆಗಳನ್ನು ಕಟ್ಟಿದ್ದು ಯಾರು? ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕಟ್ಟಿದ್ದು ಯಾರು? 2 ಸಾವಿರ ಜಲಾಶಯಗಳನ್ನು ನಿರ್ಮಿಸಿದ್ದು ಯಾರು ಎನ್ನುವುದನ್ನು ಹೇಳಲಿ. ಆಗ ಮೋದಿ ಅವರು ಬಂದು ಇವುಗಳೆಲ್ಲವನ್ನು ನಿರ್ಮಾಣ ಮಾಡಿದ್ದರಾ? 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. 56 ವರ್ಷದ ಆಳ್ವಿಕೆಯಲ್ಲಿ ನಾವು ಮಾಡಿದ್ದು ಅವರಿಗೆ ಕಾಣುತ್ತಿಲ್ಲವೇ ಹಿಂದೆ ಮಾಡಿದ ಡ್ಯಾಂಗಳನ್ನು ಮೋದಿ ಅವರು ನಿರ್ಮಿಸಿದ್ದರೇ ಎಂದು ವಾಗ್ಧಾಳಿ ಮಾಡಿದರು.

ಸ್ವಾತಂತ್ರ್ಯಕ್ಕೆ ಬಿಜೆಪಿ ಕೊಡುಗೆ ಏನಿದೆ ಎನ್ನುವುದನ್ನು ಹೇಳಲಿ. ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಹೋರಾಡಿಲ್ಲ. ವಿವಾದಿತ ವೀರ್‌ ಸಾರ್ವಕರ್‌ ಮೆರೆಸಲು ಬಿಜೆಪಿ ಮುಂದಾಗುತ್ತಿದೆ. ಅವರ ರಥ ಯಾತ್ರೆ ಮಾಡುತ್ತಾರೆ. ಆದರೆ, ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರ ನಾಯಕರು ಇವರಿಗೆ ಏಕೆ ನೆನಪಾಗುತ್ತಿಲ್ಲ ಎಂದರು. ಬಿಜೆಪಿಯವರು ಅಧಿ ಕಾರಕ್ಕೆ ಬರುವ ಮುನ್ನ ಅಚ್ಚೇ ದಿನ್‌ ಎಂದಿದ್ದರು. ಅವರು ಅಧಿಕಾರಕ್ಕೆ ಬಂದ ಮೇಲೆ ಕೆಟ್ಟ ದಿನಗಳೇ ಬಂದಿವೆ. ಹಾಲು, ಮೋಸರು, ಮಜ್ಜಿಗೆ, ಮಂಡಕ್ಕಿ ಸೇರಿದಂತೆ ಎಲ್ಲದಕ್ಕೂ ತೆರಿಗೆ ಹಾಕಿ ಜನರನ್ನು ಶೋಷಿಸುತ್ತಿದ್ದಾರೆ. ಇದೆಲ್ಲವನ್ನು ನೋಡಿದರೇ ಆ ನಮ್ಮ ಅವಧಿಯ ಕೆಟ್ಟದಿನಗಳೇ ಮರಳಿ ಕೊಟ್ಟುಬಿಡಿ ಎನ್ನುವಂತಾಗಿದೆ ಎಂದು ವ್ಯಂಗ ವಾಡಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ 169 ಭರವಸೆಗಳ ಪೈಕಿ 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿ ಏಷ್ಟು ಭರವಸೆ ಈಡೇರಿಸಿದೆ. ಅಂಬಾನಿ, ಅದಾನಿಯೇ ಇವರಿಗೆ ಎಲ್ಲಾ. ಜನ ಸಾಮಾನ್ಯರ ಸಮಸ್ಯೆ ಇವರಿಗೆ ಕಾಣುತ್ತಿಲ್ಲ. ನಮ್ಮ ಅವಧಿಯಲ್ಲಿ 15 ಲಕ್ಷ ಮನೆ ಕಟ್ಟಿದ್ದೇವೆ. ಆದರೆ ಇವರಿಂದ ಒಂದೇ ಒಂದು ಮನೆ ಕಟ್ಟಲು ಆಗಿಲ್ಲ ಎಂದರು.

Advertisement

ಮಾಜಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶೇ. 2ರಷ್ಟು ಮತಗಳು ಅಧಿಕ ಬಂದಿವೆ. ಕಾಂಗ್ರೆಸ್‌ ನೆಲೆ ಇಲ್ಲ ಎನ್ನುವವರು ಒಮ್ಮೆ ದಾಖಲೆಗಳನ್ನು ನೋಡಿ ಮಾತನಾಡಲಿ. ವಾಜಪೇಯಿ ಅವರು ಕಾಂಗ್ರೆಸ್‌ ಆಡಳಿತ ಅನುಸರಿಸಿದ್ದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾವನಾತ್ಮಕವಾಗಿಯೇ ಆಡಳಿತ ಮಾಡುತ್ತಿದ್ದಾರೆ. ಹಣ, ಜಾತಿಯ ಮೂಲಕ ಬಿಜೆಪಿ ರಾಜಕೀಯ ವ್ಯವಸ್ಥೆ ಹಾಳು ಮಾಡಿದೆ. ಕೊಪ್ಪಳ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲಲಿದ್ದೇವೆ ಎಂದರು.

ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಮಾಜಿ ಸಂಸದ ಶಿವರಾಮಗೌಡ, ಮಲ್ಲಿಕಾರ್ಜುನ ನಾಗಪ್ಪ, ಜಿಪಂ ಮಾಜಿ ಸದಸ್ಯ ಮುಕುಂದರಾವ್‌ ಭವಾನಿಮಠ, ಮಾಲತಿ ನಾಯಕ, ಎಸ್‌.ಬಿ. ನಾಗರಳ್ಳಿ, ಕೃಷ್ಣ ಇಟ್ಟಂಗಿ, ಕೃಷ್ಣಾರಡ್ಡಿ ಗಲಬಿ, ಎಚ್‌. ಎಲ್‌. ಹಿರೇಗೌಡ್ರ, ಗೂಳಪ್ಪ ಹಲಿಗೇರಿ, ಜುಲ್ಲು ಖಾದ್ರಿ, ರಾಜು ನಾಯಕ, ರಾಮಣ್ಣ ಸಾಲಭಾವಿ, ಶಿವಗಂಗಾ ಹಿರೇಗೌಡ್ರ, ಅಮ್ಜದ್‌ ಪಟೇಲ್‌ ಸೇರಿ ಇತರರಿದ್ದರು.

ಬಿಜೆಪಿ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ. ಆದರೆ ಯಾವುದೇ ಭರವಸೆ ಈಡೇರಿಸಿಲ್ಲ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳನ್ನು ಕೊಟ್ಟಿದೆ. ಈ ಬಾರಿ ಬಿಜೆಪಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಶಾಸಕ ಬಸವರಾಜ ದಢೇಸುಗೂರು ಅವರನ್ನು ಬಂಧಿಸಿ, ತನಿಖೆಗೆ ಒಳಪಡಿಸಲಿ. –ಶಿವರಾಜ ತಂಗಡಗಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ನಾವು ಲಿಂಗಾಯತರನ್ನು ದೂರ ಇಟ್ಟಿಲ್ಲ. ನಾವು ಲಿಂಗಾಯತರನ್ನು ಈಗಲೂ ತಲೆಯ ಮೇಲೆ ಹೊತ್ತುಕೊಂಡಿದ್ದೇವೆ. ಆದರೆ, ಲಿಂಗಾಯತ ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆದಿದೆ. ಈ ಬಗ್ಗೆ ಜಾಗೃತರಾಗಬೇಕಿದೆ. ಕಾಂಗ್ರೆಸ್‌ ಪಕ್ಷ ಯಾವತ್ತು ಲಿಂಗಾಯತರನ್ನು ಬಿಟ್ಟಿಲ್ಲ. ಆದರೆ ತಪ್ಪಾಗಿ ಅರ್ಥೈಸಿ, ದಾರಿ ತಪ್ಪಿಸುತ್ತಿದ್ದಾರೆ. ಈಗ ಎಂ.ಬಿ. ಪಾಟೀಲ್‌ ಅವರು ಇದೆಲ್ಲವನ್ನು ಅರ್ಥ ಮಾಡಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಕಿವಿ ಕಚ್ಚುವವರು ಇದ್ದಾರೆ. ಅವರ ಮಾತು ಕೇಳಬೇಡಿ. ಅವರು ಇಲ್ಲದ್ದನ್ನೇ ಹೇಳುತ್ತಾರೆ. ಒಂದೇ ಒಂದು ಸದಸ್ಯತ್ವ ಮಾಡಿಸದಿದ್ದರೂ ಕಿವಿ ಕಚ್ಚುವುದು ಬಹಳ. ಅಂತಹವರ ಮಾತು ಕೇಳಬೇಡಿ. ಕೆಲವರು ಕಾಂಗ್ರೆಸ್‌ ಪಕ್ಷದಲ್ಲಿದ್ದರೂ ದುಡಿಯುವುದು ಮಾತ್ರ ಬಿಜೆಪಿಯವರಿಗೆ. ಅಂತಹವರ ಬಗ್ಗೆಯೂ ಎಚ್ಚರ ಇರಬೇಕು. –ಇಕ್ಬಾಲ್‌ ಅನ್ಸಾರಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next