Advertisement

ವಿದ್ಯಾದಾನ ಮನುಷ್ಯನ ಏಳಿಗೆಗೆ ಅತೀ ದೊಡ್ಡ ದಾನ: ರಾಜೇಂದ್ರ ಕುಮಾರ್‌

07:25 AM Dec 02, 2020 | Suhan S |

ಮುಂಬಯಿ, ಡಿ. 1: ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಐಕಳ ಹರೀಶ್‌ ಶೆಟ್ಟಿಯವರು ಅಧ್ಯಕ್ಷರಾದ ಮೇಲೆ ಹಲವು ಸಮಾಜಮುಖೀ ಕಾರ್ಯಗಳು ನಡೆದಿವೆ. ಸಮಾಜದ ಎಲ್ಲ ವರ್ಗಗಳ ಬಡವರನ್ನು ಗುರುತಿಸಿ ನೆರವು ನೀಡುವ ಕಾರ್ಯ ಪ್ರಶಂಸನೀಯವಾದುದು. ವಿದ್ಯಾದಾನ ಮನುಷ್ಯನ ಏಳಿಗೆಯಲ್ಲಿ ಪಾತ್ರ ವಹಿಸುವ ಅತೀ ದೊಡ್ಡ ದಾನವಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಡಿ. 1ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್‌ ಹಾಸ್ಟೆಲ್‌ನ ಗೀತಾ ಎಸ್‌. ಎಂ. ಶೆಟ್ಟಿ ಸಭಾಂಗಣದ ಬಳಿ ಜರಗಿದ ಬೃಹತ್‌ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ, ಒಕ್ಕೂಟದ ಕಾರ್ಯ ಚಟುವಟಿಕೆಗಳಿಗೆ ಪ್ರತಿವರ್ಷ 5 ಲಕ್ಷ ರೂ. ದೇಣಿಗೆಯನ್ನು ಪ್ರಕಟಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ಬಂಟರು ಪ್ರತಿಯೊಂದು ಸಮಾಜವನ್ನು ಪ್ರೀತಿಸಿದವರು, ಎಲ್ಲರೊಂದಿಗೆ ಬಾಳಿದವರು. ಹೀಗಾಗಿ ಸಮಾಜದ ಎಲ್ಲ ವರ್ಗಗಳ ಜನರ ಜತೆಗೆ ಬಂಟ ಸಮಾಜವಿದೆ ಎಂದು ತೋರಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೊಂದಿಗೆ ಬೆರೆಯುವ ಶಾಸಕ ಯು.ಟಿ. ಖಾದರ್‌, ಯುವ ನಾಯಕ ಮಿಥುನ್‌ ರೈ ನಮ್ಮ ಹೆಮ್ಮೆ. 50 ಲಕ್ಷ ರೂ. ವೈದ್ಯಕೀಯ ದೇಣಿಗೆ, ಬಡವರಿಗೆ ಮನೆ ನಿರ್ಮಿಸಲು 2.25 ಕೋಟಿ ರೂ., ಕ್ರೀಡಾ ಸಾಧಕರಿಗೆ 15 ಲಕ್ಷ ರೂ. ಸಹಾಯಧನ, ಬಡಕುಟುಂಬದ ಮದುವೆಗೆ 30 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮನುಷ್ಯ ತನ್ನನ್ನು ಮಾತ್ರ ನೋಡಿಕೊಳ್ಳುವುದಲ್ಲ, ಇಡೀ ಸಮಾಜವನ್ನು ನೋಡಿಕೊಳ್ಳಬೇಕು. ಅಂತಹ ಕೆಲಸವನ್ನು ಸಂಘದ ಮೂಲಕ ಐಕಳ ಹರೀಶ್‌ ಶೆಟ್ಟಿ  ಮಾಡುತ್ತಿದ್ದಾರೆ. ಮುಂಬಯಿ ಬಂಟರು ದೇಶದ ಆರ್ಥಿಕ ವ್ಯವಸ್ಥೆಯ ರಾಯಭಾರಿಗಳು. ಕೋವಿಡ ಮಹಾಮಾರಿ ಮಧ್ಯೆ ಕೂಡಾ ಇಷ್ಟು ದೊಡ್ಡ ಮೊತ್ತದ ದೇಣಿಗೆ ಸಂಗ್ರಹಿಸಿದ ಜಾಗತಿಕ ಬಂಟರ ಸಂಘ ಅಭಿನಂದನಾರ್ಹ. ಬಂಟರು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಇನ್ನೂ ಸಂಪೂರ್ಣ ಬಲಾಡ್ಯವಾಗಿಲ್ಲ. ಇದನ್ನು ಸರಿಪಡಿಸುವ ಕೆಲಸವನ್ನು ಜಾಗತಿಕ ಬಂಟರ ಸಂಘ ಮಾಡುತ್ತಿದೆ. ನಾವು ಯಾವ ಜಾತಿ-ಧರ್ಮದವರೇ ಆಗಿದ್ದರೂ ನಾವು ಮನುಷ್ಯರನ್ನು ಪ್ರೀತಿಸಬೇಕು, ದ್ವೇಷಿಸಬಾರದು. ಸಮಾಜಮುಖೀ ಸೇವೆಯಿಂದ ಎಲ್ಲರನ್ನೂ ಒಂದಾಗಿ ಕಂಡಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿ ನಿರ್ಮಾಣಕ್ಕೆ ನಿವೇಶನ ಮತ್ತು ಬಂಟ ಸಮುದಾಯವನ್ನು 3ಡಿ ಕೆಟಗರಿಯಿಂದ 2ಎ ವರ್ಗಕ್ಕೆ ಸೇರಿಸಲು ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಇದೇ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಒಕ್ಕೂಟದ ವತಿಯಿಂದ ಮನವಿ ಸಲ್ಲಿಸಿದರು.

Advertisement

ಪೊಲೀಸ್‌ ಇಲಾಖೆಯ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಗೋಪಾಲ್‌ ಸುವರ್ಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ವಾದ್ಯ ವಾದಕ ಲಿಂಗಪ್ಪ ಶೇರಿಗಾರ್‌ ಕಟೀಲು, ಅನಸ್ತೇಶಿಯಾ ವಿಭಾಗದಲ್ಲಿ ನಾಲ್ಕನೇ ರ್‍ಯಾಂಕ್‌ ಪಡೆದ ಅಕ್ಷತಾ ವಿಶ್ವನಾಥ್‌ ರೈ, ಕಾರ್ನಾಡ್‌ನ‌ ಮೈಮುನಾ ಫೌಂಡೇಶನ್‌ನ ಸ್ಥಾಪಕ ಮುಹಮ್ಮದ್‌ ಆಸೀಫ್‌ ಸಾಣೂರು, ಅಶೋಕ್‌ ಪಕ್ಕಳ ಮತ್ತು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸುರತ್ಕಲ್‌ ಬಂಟರ ಸಂಘ (ರಿ.) ವನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ವಿದ್ಯಾರ್ಥಿವೇತನ, ಬಡವರಿಗೆ ಮನೆ ನಿರ್ಮಾಣ, ಮನೆ ರಿಪೇರಿ, ವೈದ್ಯಕೀಯ, ಮದುವೆ ಸಮಾರಂಭಕ್ಕೆ ಆರ್ಥಿಕ  ನೆರವು, ಕ್ರೀಡಾಳುಗಳಿಗೆ ಸಹಾಯಧನ ವಿತರಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಿದರು. ದಾನಿ ಕೆ. ಎಂ. ಶೆಟ್ಟಿ ಮುಂಬಯಿ ಅವರು ಸಮಾಜ ಕಲ್ಯಾಣ ಕಾರ್ಯಕ್ರಮ ಉದ್ಘಾಟಿಸಿದರು.

ಶಾಸಕರಾದ ಉಮಾನಾಥ ಎ. ಕೋಟ್ಯಾನ್‌, ರಾಜೇಶ್‌ ನಾೖಕ್‌, ಮಾಜಿ ಸಚಿವ ಅಭಯಚಂದ್ರ ಜೈನ್‌, ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ ಮೊದಲಾದವರು ಶುಭ ಹಾರೈಸಿದರು. ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್‌ ಅಡಪ ಸಂಕಬೈಲ್‌ ಉಪಸ್ಥಿತರಿದ್ದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್‌ ಶೆಟ್ಟಿ ಪ್ರಸ್ತಾವಿಸಿದರು. ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್‌ ಕಾರ್ಯಕ್ರಮ ನಿರ್ವಹಿಸಿದರು. ಯಕ್ಷಧ್ರುವ ಪಟ್ಲ ಸತೀಶ್‌ ಶೆಟ್ಟಿ ಅವರು ಪ್ರಾರ್ಥನೆಗೈದರು. ಬಂಟರ ಸಂಘ ಸುರತ್ಕಲ್‌ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಾರಂಭದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಷ್ಟದಲ್ಲಿರುವವರ ಸೇವೆ ಮಾಡುವುದು ದೇವರ ಕೆಲಸ. ಇದನ್ನು ಜಾಗತಿಕ ಬಂಟರ ಸಂಘ ಮಾಡುತ್ತಿದೆ. ನಿವೇಶನ ಗುರುತಿಸಿದಲ್ಲಿ ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಸರಕಾರದಿಂದ ಸಹಕಾರ ನೀಡಲಿದ್ದೇನೆ. ಬಂಟ ಸಮಾಜದ ಕೆಟಗರಿ ಬದಲಾವಣೆಗೂ ಮುಂಬಯಿ ಸಂಸದ ಗೋಪಾಲ ಶೆಟ್ಟಿ ಅವರೊಂದಿಗೆ ಚರ್ಚಿಸಿ ಶೀಘ್ರ ಪ್ರಯತ್ನ ಮಾಡುತ್ತೇನೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜಪರ ಕಾರ್ಯಕ್ರಮಗಳನ್ನು ಕಂಡಾಗ ಬಹಳಷ್ಟು ಸಂತೋಷವಾಗುತ್ತಿದೆ. ಒಕ್ಕೂಟಕ್ಕೆ ನನ್ನಿಂದಾಗುವ ಎಲ್ಲ ರೀತಿಯ ಸಹಾಯ, ಸಹಕಾರ ಸದಾ ಇದೆ. ನಳಿನ್‌ಕುಮಾರ್‌ ಕಟೀಲು  ರಾಜ್ಯಾಧ್ಯಕ್ಷರು, ಬಿಜೆಪಿ, ಕರ್ನಾಟಕ

ಇಂದು ಪ್ರಯೋಜನ ಪಡೆದ ಫಲಾನುಭವಿಗಳು ಮುಂದೆ ತಾವು ಆರ್ಥಿಕವಾಗಿ ಸಬಲರಾಗಿ ದೇಶಕ್ಕೆ ತಮ್ಮಿಂದಾದ ಕೊಡುಗೆ ಸಲ್ಲಿಸಬೇಕು. ಭವಿಷ್ಯದಲ್ಲಿ ಶಿಕ್ಷಣ ಪಡೆದು ಮುಂದೆ ಬಂದು ದೊಡ್ಡ ಸ್ಥಾನವನ್ನು ಪಡೆಯಬೇಕು. ದೇಶ ಬಲಿಷ್ಠವಾಗಲು ವಿದ್ಯಾರ್ಥಿಗಳು ಸತøಜೆಯಾಗಿ ಬಾಳಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಕೃತಿ, ಸಂಸ್ಕೃತಿಗೆ ಬಂಟರು ಮಾದರಿ. ಇಂತಹ ಕಾರ್ಯಕ್ರಮ ಇತರರಿಗೆ ಮಾದರಿಯಾಗಲಿ. ಕೊರೊನಾ ಸಮಯದಲ್ಲಿ ಮಾಡುವ ಈ ಕಾರ್ಯಕ್ರಮ ಸ್ತುತ್ಯರ್ಹವಾದುದು. ಕಷ್ಟದಲ್ಲಿರುವ ವ್ಯಕ್ತಿಯ ಕಣ್ಣೊರೆಸುವ ಬೆರಳು ಬಂಟ ಸಮಾಜ. ಯು. ಟಿ. ಖಾದರ್‌, ಮಂಗಳೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next