ಕೆಲಸಕ್ಕೆ ಹೋಗುವವರಿಗೆಲ್ಲ ದಿನಕ್ಕಷ್ಟು ಎಂದು ಸಂಬಳ ನಿಗದಿಯಾಗುತ್ತದೆ. ತಿಂಗಳ ಕೊನೆಯಲ್ಲಿ, ಇಂತಿಷ್ಟು ದಿನ ದುಡಿದದ್ದಕ್ಕೆ ಇಷ್ಟು ಹಣ ಎಂದು ಸಂಬಳ ನೀಡಲಾಗುತ್ತದೆ. ರೈತರೂ ಹೀಗೆ ತಿಂಗಳ ಸಂಬಳ ಪಡೆಯಲು ಸಾಧ್ಯವಿಲ್ಲವೆ? ಶ್ರದ್ಧೆಯಿಂದ ಪಪ್ಪಾಯ ಬೆಳೆದರೆ, ಪ್ರತಿ ತಿಂಗಳೂ ಕಾಸು ಎಣಿಸಲು ಸಾಧ್ಯವೆಂದು ಶಿವಮೊಗ್ಗದ ರೈತ ಶಂಕರಗೌಡ ತೋರಿಸಿಕೊಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಾಡಗಳಲೆ ಗ್ರಾಮದ ಯುವ ರೈತ ಶಂಕರಗೌಡ ಪಪ್ಪಾಯಿ ಕೃಷಿ ನಡೆಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಗೌತಮಪುರ-ತ್ಯಾಗರ್ತಿ ಗ್ರಾಮ ಸಂಪರ್ಕ ರಸ್ತೆಯಲ್ಲಿರುವ ಇವರ ಜಮೀನು ಖುಷಿ¤ ಭೂಮಿಯಾಗಿದ್ದು ಇಳಿಜಾರಿನಿಂದ ಕೂಡಿದೆ. ಈ ಹೊಲದಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಅರ್ಧ ಎಕರೆ ವಿಸ್ತೀರ್ಣದ ಖುಷ್ಕಿ ಹೊಲದಲ್ಲಿ ರೆಡ್ ಲೇಡಿ ತಳಿಯ ಸೀಡ್‌ಲೆಸ್ ಪಪ್ಪಾಯ ಸಸಿ ಬೆಳೆಸುತ್ತಿದ್ದಾರೆ. ಇದಕ್ಕಾಗಿ 2018 ರ ಫೆಬ್ರವರಿ ತಿಂಗಳ 2 ನೇ ವಾರದಲ್ಲಿ ಜಮೀನು ಹದ ಗೊಳಿಸಿ ಪೊಪಾು³ ಸಸಿ ನಾಟಿ ಮಾಡಿದ್ದರು. ಇಲ್ಲಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 5 ಅಡಿ ಬರುವಂತೆ 500 ಪಪ್ಪಾಯಿ ಸಸಿ ಬೆಳೆಸಲಾಗಿದೆ. ಒಂದು ಅಡಿ ಆಳ, ಒಂದು ಅಡಿ ಅಗಲದ ಚಚ್ಚೌಕಾದ ಗುಂಡಿ ನಿರ್ಮಿಸಿ ಪಪ್ಪಾಯ ಸಸಿಯ ನಾಟಿ ಮಾಡಿದರು.
ಗಿಡ ನೆಟ್ಟು ಒಂದು ತಿಂಗಳ ನಂತರ ಪ್ರತಿ ಗಿಡಕ್ಕೆ 19:19 ಕಾಂಪ್ಲೆಕ್ಸ್ ಗೊಬ್ಬರ ಸರಾಸರಿ 25 ಗ್ರಾಂ.ನಷ್ಟು ನೀಡಿದರು. ನಂತರ, ಪ್ರತಿ ತಿಂಗಳಿಗೊಮ್ಮೆಯಂತೆ 20:20 ಕಾಂಪ್ಲೆಕ್ಸ್ ಗೊಬ್ಬರವನ್ನು ನೀಡಿದ್ದರಿಂದ ಪಪ್ಪಾಯ ಕಾಂಡಕ್ಕೆ ಕೊಳೆ ರೋಗ ಬರಲೇ ಇಲ್ಲ. 3 ತಿಂಗಳಿಗೆ ಗಿಡ ಹೂ ಬಿಡಲು ಆರಂಭಿಸಿತು. ಪ್ರತಿ 20 ದಿನಕ್ಕೆ ಒಮ್ಮೆಯಂತೆ ಮಿಡಿ ಮತ್ತು ಕಾಯಿಗೆ ಔಷಧ ಸಿಂಪಡಿಸಿದರು.
ಜುಲೈ ಕೊನೆಯವಾರದಿಂದ ಪಪ್ಪಾಯ ಫಸಲು ಮಾರಾಟಕ್ಕೆ ಸಿದ್ಧವಾಯಿತು. ಈಗ ವಾರಕ್ಕೆ ಒಮ್ಮೆ ಪಪ್ಪಾಯ ಫಸಲು ಕಟಾವು ಮಾಡುತ್ತಿದ್ದಾರೆ. ಶಿವಮೊಗ್ಗ, ಭದ್ರಾವತಿ, ಧಾರವಾಡ, ಶಿರಸಿಗಳಿಂದ ವ್ಯಾಪಾರಸ್ಥರು ಈ ಭಾಗಕ್ಕೆ ಆಗಮಿಸುತ್ತಾರೆ. ಹೊಲದಲ್ಲಿಯೇ ತೂಕಮಾಡಿ ಹಣ ನೀಡಿ ಕೊಂಡೊಯ್ಯುತ್ತಾರೆ. ಒಂದು ಪಪ್ಪಾಯ ಕಾಯಿ, ಎರಡು ಕಿ.ಲೋ ತೂಕವಿದೆ. ಪ್ರತಿ ಗಿಡದಿಂದ ವಾರಕ್ಕೆ 2 ಕಾಯಿಯಂತೆ, 500 ಗಿಡದಿಂದ ವಾರಕ್ಕೆ ಒಟ್ಟು 20 ಕ್ವಿಂಟಾಲ್ ಪಪ್ಪಾಯಿ ಮಾರಾಟವಾಗುತ್ತಿದೆ.
ಕೆ.ಜಿಗೆ 10ರೂ. ಅಂದರೂ ವಾರಕ್ಕೆ 20 ಸಾವಿರ, ತಿಂಗಳಿಗೆ 80 ಸಾವಿರ ಆದಾಯ ಬರುತ್ತಿದೆ. ಖರ್ಚು 30 ಸಾವಿರ ಅಂತಿಟ್ಟುಕೊಂಡರೂ, ಉಳಿಕೆ 50 ಸಾವಿರ ರುಪಾಯಿ ಲಾಭ. ಈಗ ಇವರ ಪಪ್ಪಾಯಿಗೆ 9 ತಿಂಗಳು. ಇನ್ನೂ ಎರಡು ವರ್ಷ ಇದೇ ರೀತಿ ಲಾಭ ತಂದುಕೊಡುತ್ತದೆ.
ರೈತರು ಮಂತ್ಲಿ ಇನ್‌ಕಮ್ ಮಾಡೋದು ಹೇಗೆ ಅಂತ ಶಂಕರಗೌಡ ತೋರಿಸಿದ್ದಾರೆ.
* ಎನ್.ಡಿ.ಹೆಗಡೆ ಆನಂದಪುರಂ