ಗೌರಿಬಿದನೂರು: ತಾಲೂಕಿನ ಹೊಸೂರು ಹೋಬಳಿಯ ಜೋಡಿ ಬಿಸಲ ಹಳ್ಳಿಯ ರೈತ ಹೆಂಜಾರಪ್ಪ ತನ್ನ 2.5 ಎಕರೆ ಜಮೀನಿನಲ್ಲಿ ಪಪ್ಪಾಯ ಬೆಳೆದಿದ್ದು, ಉತ್ತಮ ಫಸಲು ಬೆಳೆದು ಲಾಭ ನೀಡಿದೆ. ಹೆಂಜಾರಪ್ಪ, ಬರಗಾಲದಲ್ಲೂ ಪಪ್ಪಾಯ ತೋಟ ಮಾಡಿದ್ದು, ತೋಟದೊಳಗೆ ಒಂದು ಸುತ್ತು ಹಾಕಿದರೆ ಕೈಗೊಂಡಿರುವ ಕ್ರಮಗಳು ಒಂದೊಂದಾಗಿ ಪರಿಚಯವಾಗುತ್ತವೆ.
ಹೆಂಜಾರಪ್ಪಗೆ ವ್ಯವಸಾಯದಲ್ಲಿ ಸತತ ನಷ್ಟವಾಗುತ್ತಿತ್ತು. ತೋಟಗಾರಿಕೆ ಬೆಳೆಗಳನ್ನು ಬೆಳೆಯಬೇಕೆಂದು ತೀರ್ಮಾನಿಸಿ ಇಲಾಖೆಯ ನರೇಗಾ ಯೋಜನೆಯ ಲಾಭ ಪಡೆದುಕೊಂಡು 2.5 ಎಕರೆಯಲ್ಲಿ ಪಪ್ಪಾಯ ಬೆಳೆಯಲು ತೀರ್ಮಾನಿಸಿದರು. ಪಪ್ಪಾಯ ನಾಟಿ ಮಾಡಿದ 11 ತಿಂಗಳಿಗೆ ಫಸಲು ಬರಲು ಪ್ರಾರಂಭವಾಗಿ ಸಮೃದ್ಧ ಇಳುವರಿ ಜೊತೆಗೆ ಉತ್ತಮ ಬೆಲೆಯೂ ನೀಡುತ್ತಿದೆ. ಹೆಂಜಾರಪ್ಪ ಮತ್ತು ಮಗ ನರಸಿಂಹಮೂರ್ತಿ ಕಳೆದ ಆಗಸ್ಟ್ ತಿಂಗಳಲ್ಲಿ 2500 ರೆಡ್‌ಲೇಡಿ ಪಪ್ಪಾಯ ಸಸಿಗಳನ್ನು ತಂದು 2 ಮೀಟರ್ 2 ಸಾಲಿನಿಂದ ಸಾಲಿಗೆ ಹಾಗೂ 2ರಿಂದ 2 ಮೀಟರ್ ಗಿಡದಿಂದ ಗಿಡಕ್ಕೆ ಅಂತರ ಮಾಡುವ ಮೂಲಕ ನಾಟಿ ಮಾಡಿದ್ದರು.
ತೋಟಕ್ಕೆ ಬಂತು ಮಾರುಕಟ್ಟೆ: ಈ ಹನ್ನೊಂದುತಿಂಗಳಲ್ಲಿ ಪಪ್ಪಾಯ ಕೃಷಿಗಾಗಿ, (ಸಸಿಗಳು, ಗೊಬ್ಬರ, ಔಷಧ, ಕೂಲಿ ಕಾರ್ಮಿಕರ ವೆಚ್ಚ ಸೇರಿ) 8.4 ಲಕ್ಷ ಲಾಭದಲ್ಲಿ 2 .2 ಲಕ್ಷ ಖರ್ಚಾಗಿದ್ದು 6.2 ಲಕ್ಷ ಲಾಭ ಬಂದಿದೆ ಎನ್ನುತ್ತಾರೆ ಹೆಂಜಾರಪ್ಪ ಅವರ ಮಗ ನರಸಿಂಹಮೂರ್ತಿ. ವ್ಯಾಪಾರಸ್ಥರು ಗಿಡದಲ್ಲಿರುವ ಹಣ್ಣಿನ ಗಾತ್ರದ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಒಮ್ಮೊಮ್ಮೆ ಒಂದು ಟನ್‌ಗೆ 12ರಿಂದ 20 ಸಾವಿರದ ವರೆಗೆ ಖರೀದಿಸುತ್ತಿದ್ದಾರೆ.
ಪಪ್ಪಾಯ ಉತ್ತಮ ತೋಟಗಾರಿಕೆ ಬೆಳೆಯಾಗಿದ್ದು, ಸೋಂಕುರೋಗಳು ಬಾರದಂತೆ ಮುನ್ನೆಚ್ಚರಿಕೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಕಾಲಕಾಲಕ್ಕೆ ಸಲಹೆ ಪಡೆಯುತ್ತಿದ್ದರೆ ಲಾಭ ನಿಶ್ಚಿತ. ಬಡ ರೈತರೂ ಸಹ ನರೇಗಾ ಯೋಜನೆಯನ್ನು ಬಳಸಿಕೊಂಡು ತೋಟಗಾರಿಕೆ ಬೆಳೆ ಬೆಳೆದು ಉತ್ತಮ ಲಾಭ ಪಡೆಯಬಹುದು.
-ರವಿಕುಮಾರ್, ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಗೌರಿಬಿದನೂರು
-ವಿ.ಡಿ.ಗಣೇಶ್, ಗೌರಿಬಿದನೂರು