ಮೂಡುಬಿದಿರೆ: ಕರಾವಳಿ ಹಾಗೂ ಒಳನಾಡಿನ ರೈತರು ಭತ್ತ, ತೆಂಗು, ಅಡಿಕೆಗಷ್ಟೇ ಸೀಮಿತವಾಗದೆ ನದಿ, ಹೊಳೆ ಮತ್ತು ನಿರುಪಯುಕ್ತವಾದ ಪ್ರದೇಶದಲ್ಲಿ ನ ಸಿಹಿನೀರು ಮೀನು ಸಾಕಾಣಿಕೆಯನ್ನು ಲಾಭದಾಯಕ ಕೃಷಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಮೇಶ್ ಟಿ.ಜೆ. ಹೇಳಿದರು.
ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ಪಶು ವೆ`ದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇವುಗಳ ವತಿಯಿಂದ ಪಣಪಿಲ ಶ್ರೀರಾಜ್ ಕೊಟ್ಟಾರಿಬೆಟ್ಟು ಆವರಣದಲ್ಲಿ ಶನಿವಾರ ನಡೆದ ಮೀನು ಕೃಷಿ ಕುರಿತು ತರಬೇತಿ ಹಾಗೂ ಕ್ಷೇತ್ರೋತ್ಸವ ಮತ್ತು ಮಾರಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ` ಸಾಂಪ್ರದಾಯಿಕ ಕೃಷಿಗಿಂತ ಐದಾರು ಪಟ್ಟು ಹೆಚ್ಚು ಲಾಭ ಸಿಗುವ ಪ್ರಾಣಿಗಳ ಸಾಕಾಣಿಕೆ ಅದರಲ್ಲಿಯೂ ಸಮಗ್ರ ಮೀನು ಕೃಷಿ ಮಾಡಿ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಿದೆ’ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕೆ.ವಿ.ಕೆ.ಯ ಮೀನುಗಾರಿಕಾ ವಿಜ್ಞಾನಿ ಡಾ. ಚೇತನ್ ಮಾತನಾಡಿ ಜಿಲ್ಲೆಯ ವಾತಾವರಣಕ್ಕೆ ಲಾಭದಾಯಕವಾಗಬಲ್ಲ ಮೀನು ಕೃಷಿಯ ಬಗ್ಗೆ, ವಿಜ್ಞಾನಿ ಡಾ.ಕೇದಾರನಾಥ ಬೆಳೆ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಿಹಿನೀರ ಮೀನು ಕೃಷಿಯನ್ನು ಸುಮಾರು ಮೂರು ಸೆಂಟ್ಸ್ ಜಾಗದಲ್ಲಿ , ಪ್ಲಾಸ್ಟಿಕ್ ಅಚ್ಛಾದಿತ ಎಪ್ಪತ್ತೈದು ಅಡಿ ಉದ್ದ, 55 ಅಡಿ ಅಗಲ, 50 ಅಡಿ ಆಳದ ಹೊಂಡದಲ್ಲಿ ನೀರು ತುಂಬಿ ನಡೆಸಲಾಗುತ್ತಿದೆ. ಯೋಜನಾ ವೆಚ್ಚ ಸುಮಾರು ರೂ. ಎರಡೂವರೆ ಲಕ್ಷ.
ಶ್ರೀರಾಜ್ ಕೊಟ್ಟಾರಿಬೆಟ್ಟು ಮನೆಯ ದೇವರಾಜ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷೆ ತುಳಸಿ, ಕೊಟ್ಟಾರಿಬೆಟ್ಟು ಹರಿಯಪ್ಪ ಕೋಟ್ಯಾನ್, ಕೃಷಿ ವಿಜ್ಞಾನಿ ಡಾ.ಮಲ್ಲಿಕಾರ್ಜುನ, ಬೆಳುವಾಯಿಯ ಚಂದನ ಬಯೊ ಲಿ. ಮುಖ್ಯಸ್ಥ ವಸಂತ್ ಉಪಸ್ಥಿತರಿದ್ದರು.
ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಗತಿಪರ ಕೃಷಿಕ ವಿಶ್ವನಾಥ ಕೋಟ್ಯಾನ್ ನಿರೂಪಿಸಿದರು.