Advertisement
ಬನಹಟ್ಟಿಯ ನಾವಲಗಿ ಗ್ರಾಮದ ಮಲ್ಲಿಕಾರ್ಜುನ ಹನುಮಂತ ಜನವಾಡರನ್ನು ನೋಡಿದರೆ ಖುಷಿಯಾಗುತ್ತದೆ. ಕಾರಣ ಇಷ್ಟೇ, ಅವರಿಗಿರುವ ಕೃಷಿ ಪ್ರೀತಿ. ಕಲ್ಲುಗುಡ್ಡುಗಳನ್ನು ಸಮತಟ್ಟು ಮಾಡಿ, ಕೃಷಿ ಜಮೀನಿಗೆ ಬೇಕಾದಂತೆ ಹದ ಮಾಡಿಕೊಂಡು ಇಲ್ಲೇ ಏನಾದರೂ ಬೆಳೆಯಬಹುದಲ್ಲಾ? ಅಂತ ಯೋಚಿಸಿದಾಗ ಅವರಿಗೆ ಹೊಳೆದದ್ದು ಬದನೆಕಾಯಿ ಬೇಸಾಯ.
ಮೊದಲು ಜಮೀನಿಗೆ ತಿಪ್ಪೆಗೊಬ್ಬರ, ಸರಕಾರಿ ಗೊಬ್ಬರ, ಬೇವಿನ ಹಿಂಡಿ 1.5 ಕ್ವಿಂಟಾಲ್, ಡಿಎಪಿ 1 ಬ್ಯಾಗ್, ಒಪಿ 1 ಬ್ಯಾಗ್, ಜಿಂಕ್ 10 ಕೆಜಿ, ಪ್ಯಾರಾಸ್ 10 ಕೆಜಿ, ಬೋರಾನ್ 2.5ಕೆಜಿ ಎಲ್ಲವನ್ನೂ ಹಾಕಿ ಬೆಡ್ ಮಾಡಿಕೊಂಡರು. ಮೂರು ಅಡಿ ಹೆಜ್ಜೆ ಅಂತರದಲ್ಲಿ ಒಂದು ಸಸಿಯಂತೆ 40,000 ಸಸಿಗಳನ್ನು ನಾಟಿ ಮಾಡಿದ್ದಾರೆ. ಹನಿ ನೀರಾವರಿ ಮೂಲಕ ನೀರು ಪೂರೈಸಲಾಗಿದ್ದು, ಇದಕ್ಕೆ ಬರುವ ರೋಗಗಳಿಗೆ ತಕ್ಕಂತೆ ಕೆಲವು ಸಿಂಪರಣೆ ಮಾಡಲಾಗಿದೆ. ಹುಳಗಳಿಂದ ರಕ್ಷಿಸಲು ಸೋಲಾರ್ ಲ್ಯಾಂಪ್‌ಗ್ಳನ್ನು ಅಳವಡಿಸಿದ್ದಾರೆ. ಬದನೆಕಾಯಿ, 6 ತಿಂಗಳ ಬೆಳೆಯಾಗಿದ್ದು, ನಾಟಿ ಮಾಡಿದ 60 ದಿನಗಳಲ್ಲಿ ಫಸಲು ಬಿಡಲಾರಂಭಿಸುತ್ತದೆ. ನಂತರದ ಎರಡೂವರೆ ತಿಂಗಳುಗಳ ಕಾಲ ಸತತವಾಗಿ ಬದನೆಕಾಯಿಗಳು ಬಿಡುತ್ತವೆ. ಒಂದು ಗಿಡ ಅಂದಾಜು 15 ರಿಂದ 17 ಕೆ.ಜಿಯವರೆಗೆ ಬದನೆ ನೀಡುತ್ತದೆ ಎನ್ನುತ್ತಾರೆ ಮಲ್ಲಿಕಾರ್ಜುನ.
Related Articles
Advertisement
ಆರು ತಿಂಗಳ ನಂತರ ಬದನೆ ಗಿಡಗಳನ್ನು ತೆಗೆದು ಅದೇ ಸ್ಥಳದಲ್ಲಿ ಸೌತೆ ಮತ್ತು ಹಿರೇಕಾಯಿಯನ್ನು ನಾಟಿ ಮಾಡುತ್ತಾರೆ. ಇದರಿಂದ ಆರಂಭದ ಹೂಡಿಕೆ ಮತ್ತಷ್ಟು ಕಡಿಮೆಯಾಗುತ್ತದೆ. ಜನವಾಡರ ತೋಟದಲ್ಲಿ 25ಕ್ಕಿಂತ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ವರ್ಷ ಪೂರ್ತಿ ಕೆಲಸ ಮಾಡುತ್ತಾರೆ.
– ಕಿರಣ ಶ್ರೀಶೈಲ ಆಳಗಿ