Advertisement

ಸಾವಯವ ಕೃಷಿಯನ್ನು ಬ್ರ್ಯಾಂಡ್‌ ಆಗಿಸಿದ ಪ್ರಾಧ್ಯಾಪಕ

02:31 PM Jul 30, 2020 | mahesh |

ಬೆಳ್ತಂಗಡಿ: ಎಂಜಿನಿಯರಿಂಗ್‌ ಪ್ರಾಧ್ಯಾಪಕರೊಬ್ಬರು ತರಕಾರಿ ಬೆಳೆಸಿರುವ ಬಗೆ ಹೇಗೆ, ಯಾರು ಬೆಳೆಸಿದ್ದು (ಬೆಳೆಸಿದವರನ್ನು ತಿಳಿದು ಕೋ) ಎಂಬ ಪರಿಕಲ್ಪನೆಯಡಿಯಲ್ಲಿ ಕೃಷಿಗೆ ಆಧುನಿಕತೆ ಮತ್ತು ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ವಿವಿಧ ರೀತಿಯ ತರಕಾರಿ, ಹಣ್ಣು ಹಂಪಲುಗಳನ್ನು ಪರಿಚಯಿಸಿದ್ದಾರೆ
ಉಜಿರೆ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಿಕ್‌ ಎಂಜಿನಿಯರ್‌ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ| ಸತ್ಯನಾರಾಯಣ ಭಟ್‌ ಅವರ ಕೃಷಿಪ್ರೇಮ ಯುವ ಸಮೂಹಕ್ಕೆ ಪ್ರೇರಣೆಯಾಗಿದೆ.

Advertisement

ಉಜಿರೆ ಸನಿಹ ಗುರಿಪಳ್ಳ ಎಂಬ ಗ್ರಾಮೀಣ ಪ್ರದೇಶದ ಒಂದು ಎಕ್ರೆ ಕೃಷಿಭೂಮಿಯಲ್ಲಿ ಲಾಕ್‌ಡೌನ್‌ನಿಂದಾಗಿ ಪೂರ್ಣ ಪ್ರಮಾಣದ ಕೃಷಿಕರಾಗಿದ್ದಾರೆ. ಮನೆ ಉಪಯೋಗಕ್ಕೆಂದು ತರಕಾರಿಗಳನ್ನು ಬೆಳೆಸಿದವರು, ಅದನ್ನೇ ಗಂಭೀರವಾಗಿ ಪರಿಗಣಿಸಿ ಸಾವಯವ ಕೃಷಿ ಮೂಲಕ ಮಾರುಕಟ್ಟೆಗೆ ತಮ್ಮದೇ ಬ್ರ್ಯಾಂಡ್‌ ಪರಿಚಯಿಸಿದ್ದಾರೆ.

ನಾವೇಕೆ ನಮ್ಮದೇ ಬ್ರ್ಯಾಂಡ್‌ ಪರಿಚಯಿಸ ಬಾರದು ಎಂಬುದನ್ನು ಮನದಲ್ಲಿಟ್ಟು ಕುಂಬಳಕಾಯಿ, ಮಟ್ಟುಗುಳ್ಳ, ಸೌತೇಕಾಯಿ ಆಧುನಿಕ ಶೈಲಿಯ ಮಾರಾಟದ ಕಲ್ಪನೆಯನ್ನು ಸಾಕಾರಗೊಳಿಸಿದರು. “ನಂದನ’ ಬ್ರ್ಯಾಂಡ್‌ನೊಂದಿಗೆ ಕಳೆದ ಎರಡು ವಾರಗಳ ಅವಧಿಯಲ್ಲಿ ಉಜಿರೆಯ ಸ್ಟೋರ್‌ ಒಂದಕ್ಕೆ 1.25 ಕ್ವಿಂ. ಸೌತೆಕಾಯಿ ಮಾರಾಟ ಮಾಡಿದ್ದಾರೆ.

ತರಕಾರಿಗಳನ್ನು ಸಾಂಪ್ರದಾಯಿಕ ವಿಧಾನಗಳಲ್ಲಿ ಸಾವಯವ, ಡಿ ಕಾಂಪೋಸ್ಟ್‌ ಗೊಬ್ಬರವನ್ನೇ ಬಳಸಿ ಬೆಳೆಸುತ್ತಿದ್ದಾರೆ. ಕೀಟ ನಾಶಕಗಳ ಬದಲಿಗೆ ಗೋಮೂತ್ರ ಸಿಂಪಡಣೆ, ಇನ್ನಿತರ ವಿಧಾನಗಳನ್ನು ನೆಚ್ಚಿಕೊಂಡಿದ್ದಾರೆ. ಐಟಿ, ಬಿಟಿಗಳಲ್ಲಿ ಉದ್ಯೋಗ ಕಳೆದುಕೊಂಡು ನಿರುತ್ಸಾಹಿಗಳಾಗಿ ಬದುಕುವುದಕ್ಕಿಂತ ಇರುವ ಕೃಷಿಭೂಮಿಯಲ್ಲಿ ಸಾವಯವ ಕೃಷಿಯೊಂದಿಗೆ ಜೀವನ ನಡೆಸಿ ಎಂಬ ಸಂದೇಶ ನೀಡಿದ್ದಾರೆ ಎಂಜಿನಿಯರ್‌ ಪ್ರಾಧ್ಯಾಪಕ ಡಾ| ಭಟ್‌.

 ಕ್ಯೂಆರ್‌ ಕೋಡ್‌
ಮುಂದಿನ ದಿನಗಳಲ್ಲಿ “ನಂದನ’ಕ್ಕೆ ಕ್ಯೂಆರ್‌ ಕೋಡ್‌ ಅಳವಡಿಸುವ ನಿರ್ಧಾರ ಮಾಡಿದ್ದೇನೆ. ಗ್ರಾಹಕರು ಆ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ನಮ್ಮ ಫೇಸ್‌ಬುಕ್‌ ಪುಟಗಳ ಮೂಲಕ ಖರೀದಿಸಿದ ತರಕಾರಿಯ ಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಇದು ಜನರಲ್ಲಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಈಗಾಗಲೇ ತರಕಾರಿ ಖರೀದಿಸಿದ ಗ್ರಾಹಕರು ದೂರವಾಣಿ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
– ಡಾ| ಸತ್ಯನಾರಾಯಣ ಭಟ್‌, ಕೃಷಿ ಪ್ರೇಮಿ, ಸಹಾಯಕ ಪ್ರಾಧ್ಯಾಪಕರು

Advertisement

 

Advertisement

Udayavani is now on Telegram. Click here to join our channel and stay updated with the latest news.

Next