Advertisement

ಭೌತಶಾಸ್ತ್ರದಲ್ಲಿ 18 ಪುಸ್ತಕ ರಚಿಸಿದ ಪ್ರಾಧ್ಯಾಪಕ

06:21 PM Sep 19, 2022 | Team Udayavani |

ಬೀದರ: ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರೊಬ್ಬರು ಬೋಧನೆ ವೃತ್ತಿ ಜತೆಗೆ ಬರವಣಿಗೆಯ ಗೀಳು ಬೆಳೆಸಿಕೊಂಡು ಭೌತಶಾಸ್ತ್ರ (ಫಿಜಿಕ್ಸ್‌)ವಿಷಯಕ್ಕೆ ಸಂಬಂಧಪಟ್ಟಂತೆ 18 ಪುಸ್ತಕಗಳನ್ನು ರಚಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಿದ್ದಾರೆ.

Advertisement

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಡಾ|ರಾಜಕುಮಾರ ಹೊಸದೊಡ್ಡೆ ಎಂಬುವರೇ ಸದ್ದಿಲ್ಲದೇ ಸಾಧನೆ ಮಾಡಿದ ಪ್ರಾಧ್ಯಾಪಕರು. ವಿದ್ಯಾರ್ಥಿಗಳ ಬೋಧನೆ ಜತೆ ಜತೆಗೆ ಸಾಹಿತ್ಯ ಕೃಷಿಯಲ್ಲೂ ಸೈ ಎನಿಸಿದ್ದು, ಈ ಪ್ರದೇಶದಲ್ಲಿ ಒಂದೇ ವಿಷಯದಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ರಚಿಸಿದ ಮೊದಲಿಗರು ಎನಿಸಿದ್ದಾರೆ. ಕಠಿಣ ಎನಿಸಿರುವ ಭೌತಶಾಸ್ತ್ರ ವಿಷಯವನ್ನು ಸರಳೀಕರಣವಾಗಿಸಿ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಉದ್ದೇಶದಿಂದ ಈವರೆಗೆ 18
ಪುಸ್ತಕಗಳನ್ನು ಬರೆದಿದ್ದಾರೆ.

ಬಿಎಸ್‌ಸಿ ಪದವಿಯ ಒಟ್ಟು 6 ಸೆಮಿಸ್ಟರ್‌ ಗಳಿಗೆ 16 ಪುಸ್ತಕಗಳು, ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ಕ್ರಮದಂತೆ ಇನ್ನೆರಡು ಪುಸ್ತಕಗಳು ಸೇರಿ ಒಟ್ಟು 18 ಪುಸ್ತಕಗಳನ್ನು ಹೊರ ತಂದಿದ್ದು, ಬೀದರ ಒಳಗೊಂಡು ಬೇರೆ ಜಿಲ್ಲೆಗಳಲ್ಲಿನ ವಿವಿಧ ಕಾಲೇಜುಗಳಲ್ಲಿ ಈ ಪುಸ್ತಕಗಳನ್ನು ಪಠ್ಯವಾಗಿ ಬೋಧಿಸಲಾಗುತ್ತಿದೆ. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಹ ಡಾ|ಹೊಸದೊಡ್ಡಿ ಅವರ ಪುಸ್ತಕಗಳನ್ನು ಮೆಚ್ಚಿದ್ದಾರೆ.

2015ರಲ್ಲಿ ಮೊದಲ ಪುಸ್ತಕ ಹೊರ ತಂದಿದ್ದು, ಕಲ್ಬುರ್ಗಿಯ ಸಿದ್ಧಲಿಂಗೇಶ್ವರ ಪ್ರಕಾಶನದವರು ಪುಸ್ತಕಗಳ ಮುದ್ರಣದ ಜವಾಬ್ದಾರಿ ಹೊತ್ತಿದ್ದಾರೆ. ಬಿಎಸ್‌ಸಿ ಸೆಮಿಸ್ಟರ್‌ಗಳಿಗೆ ಅನುಗುಣವಾಗಿ ಮೆಕ್ಯಾನಿಕ್ಸ್‌, ಸೌಂಡ್ಸ್‌, ಹರ್ಟ್ಸ್ ಥ್ರೋ ಡೈನಾಮಿಕ್ಸ್‌, ಎಲೆಕ್ಟ್ರಿಸಿಟಿ ಆಂಡ್‌ ಮೆಕ್ಯಾನಿಸಂ, ನ್ಯೂಕ್ಲಿಯರ್‌ ಫಿಜಿಕ್ಸ್‌, ಸ್ಟೆಟಿಕಲ್‌ ಮೆಕ್ಯಾನಿಕ್ಸ್‌, ಎಲೆಕ್ಟ್ರಾನಿಕ್ಸ್‌, ಸಾಲಿಡ್‌ ಸ್ಟೇಟ್‌ ಫಿಜಿಕ್ಸ್‌ ಹೀಗೆ ವಿವಿ ವಿಷಯಗಳ ಮೇಲೆ ಪುಸ್ತಕಗಳು ರಚನೆಯಾಗಿವೆ.

ಎಂಎಸ್ಸಿ, ಎಂಫಿಲ್‌ ಮತ್ತು ಪಿಎಚ್‌ಡಿ ಅಧ್ಯಯನ ಮಾಡಿರುವ ಡಾ|ಹೊಸದೊಡ್ಡೆ ಅವರು 2000 ವರ್ಷದಿಂದ 2009ರವರೆಗೆ ಭಾಲ್ಕಿ ಸಿಬಿ ಕಾಲೇಜಿನಲ್ಲಿ ಬೋಧಕರಾಗಿ ನಂತರ 2009ರಿಂದ 2021ರವರೆಗೆ ಮನ್ನಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಮಾಡಿದ್ದು, ಈಗ ಸದ್ಯ ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ|ಹೊಸದೊಡ್ಡೆ ಅವರು “ಆನ್‌ ಎನಲೈಟಿಕಲ್‌ ಸ್ಟಡಿ ಆನ್‌ ಎಕ್ಸಪರಿಮೆಂಟಲಿ ಆಬ್ಸರ್ಡ್‌ ಇಂಟ್ರಿನಸಿಕ್‌ ಎಫೆಕ್ಟ್ ಆಫ್‌ ಸೈಜ್‌ ಡಿಪೆಂಡ್ಸ್‌ ಇನ್‌ ಥರ್ಮೋ ಎಲಾಸ್ಟಿಕ್ಸ್‌ ಪ್ರಾಪರ್ಟಿಸ್‌ ಆಫ್‌ ದಿ ನ್ಯಾನೋ ಮಟೇರಿಯಲ್‌ ವಿಷಯದ ಮೇಲೆ ಮಂಡಿಸಿದ
ಪ್ರಬಂಧಕ್ಕೆ ರಾಜಸ್ಥಾನದ ಓಪಿಜೆಎಸ್‌ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

Advertisement

ಪದವಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ವಿಷಯ ಕಠಿಣ ಎನಿಸಿದೆ. ಹಾಗಾಗಿ ಸಹಾಯಕ ಪ್ರಾಧ್ಯಾಪಕರಾಗಿರುವ ತಮಗೆ ಮಕ್ಕಳಿಗೆ ಭೌತಶಾಸ್ತ್ರ ಸರಳೀಕರಣವಾಗಿ ಮುಟ್ಟಿಸಿ ಅವರ ಕಲಿಕೆಗೆ ನೆರವಾಗಬೇಕೆಂಬ ಆಶಯ ಹುಟ್ಟಿಕೊಂಡಿತು. 2015ರಲ್ಲಿ ಪ್ರಥಮ ಪುಸ್ತಕ ಹೊರ ಬಂದಿದ್ದು, ಈವರೆಗೆ ಬಿಎಸ್‌ಸಿ ಪದವಿಯ 6 ಸೆಮಿಸ್ಟರ್‌ ಗಳಿಗೆ 18 ಪುಸ್ತಕಗಳನ್ನು ರಚಿಸಿದ್ದೇನೆ. ವಿವಿಧ ಕಾಲೇಜುಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ರೆಫರ್‌ ಮಾಡುತ್ತಿರುವುದು ಖುಷಿ ತಂದಿದೆ.
ಡಾ|ರಾಜಕುಮಾರ
ಹೊಸದೊಡ್ಡೆ, ಸಹಾಯಕ
ಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ
ಕಾಲೇಜು, ಬೀದರ.

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next