Advertisement

ಪೊಲೀಸರಿಗೆ ವೃತ್ತಿಪರತೆ ಮುಖ್ಯ

11:53 AM Jun 27, 2018 | |

ಬೆಂಗಳೂರು: ಪೊಲೀಸರಿಗೆ ಕಾನೂನು ಜ್ಞಾನದ ಜತೆಗೆ ಜನಪರ ಮನೋಭಾವ ಇದ್ದಾಗ ಮಾತ್ರ ಯಾವುದೇ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸಬಹುದು ಎಂದು ನಿವೃತ್ತ ಪೊಲೀಸ್‌ ಮಾಹಾನಿರ್ದೇಶಕ ಡಾ.ಅಜಯ್‌ಕುಮಾರ್‌ ಸಿಂಗ್‌ ಹೇಳಿದ್ದಾರೆ.

Advertisement

ಪೊಲೀಸ್‌ ಮಹಾನಿರ್ದೇಶಕ ಕಚೇರಿಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ವಿರೋಧಿ ದಿನಾಚರಣೆ ಪ್ರಯುಕ್ತ ಪೊಲೀಸ್‌ ಅಧಿಕಾರಿಗಳಿಗಾಗಿ ಮಾದಕ ವಸ್ತುಗಳ ನಿರ್ಬಂಧ ಕಾನೂನು ಅನುಷ್ಠಾನ ಕುರಿತ ತರಬೇತಿ ಮತ್ತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ  ಮಾತನಾಡಿದರು. ಪೊಲೀಸರಿಗೆ ಕಾನೂನಿನ ಸೆಕ್ಷನ್‌ಗಳ ಅರಿವಿದ್ದರೆ ಸಾಲದು. ಕೆಲಸದಲ್ಲಿ ಬದ್ಧತೆಯೂ ಬೇಕು ಎಂದರು.

ಜಗತ್ತು ಬದಲಾದಂತೆ ತನಿಖಾ ವಿಧಾನವೂ ಬದಲಾಗಿದೆ. ಆರೋಪಿಗಳನ್ನು ಹೊಡೆದು-ಬಡಿದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಮನೋವಿಜ್ಞಾನ ಬಳಸಿಕೊಂಡು ಅವರ ಬಾಯಿ ಬಿಡಿಸಿ ತನಿಖೆಯಲ್ಲಿ ಪ್ರಗತಿ ಸಾಧಿಸಬಹುದು. ಇದಕ್ಕೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಮಾದಕ ವಸ್ತುಗಳ ದಾಸರಾಗುತ್ತಿರುವುದು ವಿಪರ್ಯಾಸ. ಹೀಗಾಗಿ ಮಾದಕ ವಸ್ತುಗಳ ವ್ಯಸನಿಗಳಾಗಿರುವ ಯುವಕರಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ರಾಜ್ಯ ಪೊಲೀಸ್‌ ಮಾಹಾನಿರ್ದೇಶಕಿ ನೀಲಮಣಿ ಎನ್‌.ರಾಜು ಮಾತನಾಡಿ, ರಾಜ್ಯ ಪೊಲೀಸರು ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಹೆಸರು ವಾಸಿಯಾಗಿದ್ದಾರೆ. ಮಾದಕ ವಸ್ತು ಜಾಲ ಪತ್ತೆ ಕಾರ್ಯದಲ್ಲೂ ಅದೇ ರೀತಿಯ ವೃತ್ತಿಪರತೆ ತೋರಿಸಿ ಯಸಸ್ವಿಯಾಗಬೇಕು ಎಂದು ಸಲಹೆ ನೀಡಿದರು.

Advertisement

ಶಾಲಾ, ಕಾಲೇಜು ವ್ಯಾಪ್ತಿಗಳಲ್ಲಿ ಮಾದಕ ದ್ರವ್ಯ ಮಾರಾಟ ತಡೆಯಲು ಸೂಕ್ತ ಕ್ರಮಕ್ಕೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಈ ಹಿಂದಿನ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದ್ದರು. ಹೀಗಾಗಿ ಮಾದಕ ವಸ್ತು ಮಾರಾಟ ಜಾಲವನ್ನು ಪತ್ತೆ ಹಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪೊಲೀಸ್‌ ಇಲಾಖೆಯ “ಮಾದಕ ವಸ್ತು ಕಾನೂನು ಜಾರಿ’ ಕೈಪಿಡಿ ಬಿಡುಗಡೆ ಮಾಡಲಾಯಿತು. ಮಾದಕ ವಸ್ತು ನಿಯಂತ್ರಣ ಘಟಕ(ಎನ್‌ಸಿಬಿ) ಅಧಿಕಾರಿ ರತನ್‌ ಮಾದಕ ವಸ್ತುಗಳ ಕುರಿತು ಮಾಹಿತಿ ನೀಡಿದರು. ಅಪರಾಧ ವಿಭಾಗದ ಎಡಿಜಿಪಿ ಎಂ.ಎ.ಸಲೀಂ, ಮೂರ್ತಿ, ಎಐಜಿಪಿ ಅಶ್ವಿ‌ನಿ, ಎಸ್ಪಿ ಇಶಾ ಪಂಥ್‌ ಸೇರಿದಂತೆ ನಗರದ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ ಮತ್ತು ಎಸಿಪಿಗಳು ಉಪಸ್ಥಿತರಿದ್ದರು.

ಮಾಧ್ಯಮದವರ ವಿರುದ್ಧ ಹರಿಹಾಯ್ದ ಡಿಜಿಪಿ: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಕುರಿತ ಪ್ರತಿಕ್ರಿಯೆ ಕೇಳಿದ ಮಾಧ್ಯಮದವರ ಮೇಲೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌.ರಾಜು ಹರಿಹಾಯ್ದ ಪ್ರಸಂಗ ನಡೆಯಿತು.

2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದಾಗ ಅವರಿಗೆ ಒದಗಿಸಬೇಕಾದ ಭದ್ರತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಕುರಿತು ಡಿಜಿಪಿ ಕಚೇರಿಯಲ್ಲಿ ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮ ಪ್ರತಿನಿಧಿಗಳನ್ನು ಕಂಡ ಅವರು, ನಿಮ್ಮನ್ನು ಯಾರು ಇಲ್ಲಿಗೆ ಕಳುಹಿಸಿದ್ದು, ಎಂದು ಸಿಬ್ಬಂದಿಗೆ “ಸೆಂಡ್‌ ದೆಮ್‌ ಔಟ್‌’ ಎಂದರು.

ಇದಕ್ಕೂ ಮೊದಲು ಡಿಜಿಪಿ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದ ನೀಲಮಣಿ ಎನ್‌.ರಾಜು ಅವರನ್ನು ಮಾಧ್ಯಮ ಪ್ರತಿನಿಧಿಗಳು, ಪ್ರಧಾನಿ ಭದ್ರತೆ ಸಂಬಂಧ ಪ್ರತಿಕ್ರಿಯೆ ನೀಡಲು ಕೋರಿದರು. ಕೆಲ ಸಮಯದ ಬಳಿಕ ಡಿಜಿಪಿ ಕಚೇರಿ ಮಾಧ್ಯಮ ಸಂಪರ್ಕಾಧಿಕಾರಿಗಳು ಡಿಜಿಪಿ ಮಾತನಾಡಲು ಬರುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದರು.

ಅದರಂತೆ ಮಾಧ್ಯಮದವರು ಡಿಜಿಪಿ ಕೊಠಡಿಗೆ ಹೋದಾಗ  ನೀವು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಾ? ನಿಮ್ಮನ್ನು ಒಳಗೆ ಬಿಟ್ಟವರು ಯಾರು? ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಏರುಧ್ವನಿಯಲ್ಲಿ ಕೂಗಾಡಿದರು. ನಮ್ಮನ್ನು ಕೇಳಲು ನೀವು ಯಾರು? ನಾವೇನು ಹೇಳುತ್ತೇವೋ ಆ ಮಾಹಿತಿ ಪಡೆದುಕೊಂಡು ಹೋಗಬೇಕಷ್ಟೇ ಎಂದು ತಾಕೀತು ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next