ತೆಕ್ಕಟ್ಟೆ: ಕೊರೊನಾ ಅಟ್ಟಹಾಸದಿಂದ ನಲುಗಿದ ಕಲಾ ಪ್ರಪಂಚದಿಂದಾಗಿ ಅದೆಷ್ಟೋ ಕಲಾವಿದರು ಸಂಕಷ್ಟ ಎದುರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು. ಈ ನಡುವೆ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಯಕ್ಷಗಾನ ಮೇಳ ಸೇರಿದಂತೆ ಕರಾವಳಿಯ ವೃತ್ತಿಪರ ಕಲಾವಿದರು ತಮ್ಮ ತಿರುಗಾಟ ಆರಂಭಿಸಿದ್ದಾರೆ.
ಹವಾಮಾನ ವೈಪರಿತ್ಯದಿಂದಾಗಿ ಸುರಿದ ಅಕಾಲಿಕ ಮಳೆಯ ನಡುವೆಯೂ ಕೂಡಾ ನ.15ರಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಸಭಾಗೃಹದಲ್ಲಿ ಯಕ್ಷಗಾನ ಕಲಾ ಪ್ರದರ್ಶನ ನೀಡಿದ್ದಾರೆ.
ಯಕ್ಷಗಾನ ಕಲಾ ಪ್ರದರ್ಶನಕ್ಕೆ ಆಧುನಿಕ ಸ್ಪರ್ಶ : ಕೋವಿಡ್ 19 ಪ್ರಹಾರಕ್ಕೆ ಸಿಲುಕಿ ನಲುಗಿದ ಗ್ರಾಮೀಣ ಭಾಗದ ಹವ್ಯಾಸಿ ಹಾಗೂ ವೃತ್ತಿಪರ ಯಕ್ಷಗಾನ ಕಲಾವಿದರು ಕಲಾ ಪ್ರದರ್ಶನ ನೀಡಲು ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಜಿಲ್ಲೆಯ ಯಕ್ಷಗಾನ ಕಲಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕವೇ (ಯೂಟ್ಯೂಬ್) ಆಯ್ದ ಪ್ರಸಂಗಗಳ ನೇರಪ್ರಸಾರದ ಪ್ರದರ್ಶನ ನೀಡಿ,ಯಕ್ಷ ಕಲಾ ರಸಿಕರ ಮನ ತಣಿಸುವಲ್ಲಿ ಸಂಘಟನೆಗಳು ಆಧುನಿಕ ತಂತ್ರಜ್ಞಾನದ ಮೊರೆ ಹೋಗುವಲ್ಲಿ ಸಂಪೂರ್ಣ ಯಶಸ್ವಿಯಾಗಿವೆ.
ಕಳೆದ ಎರಡು ವರ್ಷದಿಂದ ಕೊರೊನಾ ಎನ್ನುವ ಮಹಾಮಾರಿ ಇಡೀ ಜಗತ್ತಿಗೆ ವ್ಯಾಪಿಸಿ ಹಲವು ಉದ್ಯಮಗಳ ಮೇಲೆ ತೀವ್ರ ತೆರನಾದ ಪರಿಣಾಮ ಬೀರಿದ್ದು ಎಲ್ಲಾ ಕಲಾವಿದರಿಗೆ ಬದುಕನ್ನು ಕಟ್ಟಿಕೊಳ್ಳಲಾರದಷ್ಟು ಅವ್ಯವಸ್ಥೆಯನ್ನು ಮಾಡಿರುವುದು ವಾಸ್ತವ ಸತ್ಯ. ಈ ನಡುವೆಯೂ ಕೂಡಾ ಕರಾವಳಿ 38 ಕ್ಕೂ ಅಧಿಕ ಯಕ್ಷಗಾನ ವೃತ್ತಿಪರ ಮೇಳಗಳು ತಿರುಗಾಟಕ್ಕೆ ಹೊರಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ . ಅಕಾಲಿಕ ಮಳೆಯಿಂದ ಕೃಷಿ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಯಕ್ಷಗಾನ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತಿರುವುದು ಆತಂಕಕಾರಿ ವಿಷಯ.
– ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ವ್ಯವಸ್ಥಾಪಕರು, ಹಟ್ಟಿಯಂಗಡಿ ಯಕ್ಷಗಾನ ಮೇಳ.
ಕಳೆದ ಎಂಟು ವರ್ಷಗಳಿಂದಲೂ ಯಕ್ಷಗಾನ ಕಲಾಕ್ಷೇತ್ರದಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದೇನೆ. ಇತ್ತೀಚಿನ ಎರಡು ವರ್ಷದ ಬೆಳವಣಿಗೆಯಿಂದಾಗಿ 6 ತಿಂಗಳ ತಿರುಗಾಟದಲ್ಲಿ ಬರೇ 3 ತಿಂಗಳು ತಿರುಗಾಟ ಮಾಡಿದ್ದೇವೆ. ಕೊರೊನಾದಿಂದಾದ ಲಾಕ್‌ಡೌನ್‌ನ ಪರಿಣಾಮ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದ ಪ್ರದರ್ಶನವೂ ಇಲ್ಲದೇ ಕೇವಲ 2 ಆನ್‌ಲೈನ್ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿದ್ದೇನೆ. ಪ್ರಸ್ತುತ ತಿರುಗಾಟ ಆರಂಭವಾಗಿದ್ದು ಸಂತಸ ತಂದಿದೆ.
– ಶಿವಮೂರ್ತಿ ರಾವ್ ತಾರೆಕೊಡ್ಲು ಯಕ್ಷಗಾನ ಕಲಾವಿದರು.