Advertisement
ಕಾಸರಗೋಡು ಸಹಿತ ಹಳೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡದ ಪಂಡಿತ ಪರಂಪರೆಯೊಂದನ್ನು ಕಟ್ಟಿ ಬೆಳೆಸಲು ಕಾರಣರಾದ ಮೊದಲ ಪಾಳಿಯ ನಾಲ್ಕೈದು ಮಂದಿಯಲ್ಲಿ ಪೆರಡಾಲ ಕೃಷ್ಣಯ್ಯನವರೂ ಒಬ್ಬರು. ಅವರ ಶಿಷ್ಯ ಪ್ರೊ| ಪಿ. ಸುಬ್ರಾಯ ಭಟ್ಟರು ಮೂಲತಃ ಪಳ್ಳತ್ತಡ್ಕದವರು. ತಂದೆ ಕೇಶವ ಭಟ್ಟ, ತಾಯಿ ತಿರುಮಲೇಶ್ವರಿ. ಹುಟ್ಟಿದ್ದು 1922ರ ಮಾರ್ಚ್ 16ರಂದು.
Related Articles
Advertisement
ಸುಬ್ರಾಯ ಭಟ್ಟರ ಕಾಲಾವಧಿಯಲ್ಲಿ ಒಂಟಿ ಉಪನ್ಯಾಸಕನಿಂದ ಆರಂಭವಾದ ಕನ್ನಡ ವಿಭಾಗ, ಒಟ್ಟು ಎಂಟು ಮಂದಿ ಅಧ್ಯಾಪಕರಿರುವ ದೊಡ್ಡ ವಿಭಾಗವಾಗಿ ಬೆಳೆಯಿತು. 1977ರ ಮಾರ್ಚ್ 31ರಂದು ನಿವೃತ್ತರಾಗಬೇಕಾಗಿದ್ದ ಸುಬ್ರಾಯ ಭಟ್ಟರು 1976 ಅಗಸ್ಟ್ 26ರಂದು ಸ್ಕೂಟರ್ ಅಪಘಾತಕ್ಕೆ ಈಡಾಗಿ, ಚಿಕಿತ್ಸೆ ಫಲಿಸದೆ ದೈವಾಧೀನರಾದರು. ಒಂದು ವಿಭಾಗವನ್ನು ಕಟ್ಟಿ ಬೆಳೆಸಿದ, ಪಾಂಡಿತ್ಯದ ಘನತೆವೆತ್ತ ವ್ಯಕ್ತಿತ್ವವೊಂದನ್ನು ಕಳೆದುಕೊಂಡ ಕಾಸರಗೋಡು ಈ ಆಘಾತವನ್ನು ಮೌನವಾಗಿ ಸಹಿಸಿಕೊಂಡಿತು.
ಸುಬ್ರಾಯ ಭಟ್ಟರು ಅತ್ಯುತ್ತಮ ಅಧ್ಯಾಪಕರಾ ಗಿದ್ದರು ಎನ್ನುವುದಕ್ಕೆ ಅವರ ಅನಂತರದ ತಲೆಮಾರು ಅವರ ಬಗ್ಗೆ ಆಡಿಕೊಳ್ಳುವ ಮಾತುಗಳಿಗೂ ಮಿಕ್ಕ ನಿದರ್ಶನ ನಮ್ಮಲ್ಲಿಲ್ಲ. ಶಾಕುಂತಲಾ, ರಾಮಾಶ್ವಮೇಧ, ಗಿರಿಜಾಕಲ್ಯಾಣ, ಹರಿಶ್ಚಂದ್ರ ಕಾವ್ಯ, ಎಲ್ಲಕ್ಕಿಂತ ಹೆಚ್ಚಾಗಿ ರನ್ನನ ಗದಾಯುದ್ಧ ಅವರ ಕಂಠದಿಂದ ಮೂಡಿಬಂದ ಬಗೆಯ ಮೆಲುಕು ಅವರ ವಿದ್ಯಾರ್ಥಿಗಳನ್ನು ಯಾವಾಗಲೂ ರೋಮಾಂಚಿತರನ್ನಾಗಿ ಮಾಡುತ್ತದೆ ಎಂದಮೇಲೆ ಅವರ ಅಧ್ಯಾಪನದ ಶ್ರೀಮಂತಿಕೆಗೆ ಬೇರೆ ಮೆಚ್ಚುಗೆ ಪತ್ರದ ಆವಶ್ಯಕತೆಯೇ ಇಲ್ಲ. ಒಂದೊಂದು ಪದ್ಯವನ್ನೂ ಓದುವ ಕಂಚಿನ ಕಂಠದ ಅನುರಣನ, ಪದಚ್ಛೇದದ ಸೊಗಸು, ಅನ್ವಯದ ಬೆಡಗು, ಅರ್ಥ ವಿವರಣೆಯ ಚಮತ್ಕಾರ, ವಿಶ್ಲೇಷಣೆಯ ಪಾಂಡಿತ್ಯ, ಎಲ್ಲವೂ ಸೇರಿ ಆಗುವ ರಸಪಾಕದ ರುಚಿ ನಮ್ಮ ಕಲ್ಪನೆಗೆ ಮೀರಿದ್ದು. ಪಂಡಿತ ಪರಂಪರೆಯ ಕೊಂಡಿಯಾದ ಅವರೊಳಗೆ ಕವಿತ್ವದ ಸೃಜನತೆಯೂ ಜೀವಂತವಾಗಿತ್ತು. ಪಾತ್ರಗಳ ಒಳಹೊಕ್ಕು, ತಾವೇ ಪಾತ್ರವಾಗಿ, ಪಾತ್ರವನ್ನು ಅಭಿನಯಿಸುತ್ತ, ರಸತಾಣಗಳನ್ನೆಲ್ಲ ಒಂದಿಂಚೂ ಬಿಡದೆ ಗಾಢವಾಗಿ ತಬ್ಬಿ, ಹಾಗೆಯೇ ಹಿಡಿದೆತ್ತಿ ವಿದ್ಯಾರ್ಥಿಗಳ ಮನದಾಳದಲ್ಲಿ ನೆಟ್ಟ ಈ ಪ್ರಾಧ್ಯಾಪಕನ ಬಗ್ಗೆ ಒಬ್ಬೊಬ್ಬ ವಿದ್ಯಾರ್ಥಿಯೂ ಮನದಣಿಯೆ ಮಾತನಾಡುತ್ತಾರೆ.
1976ರಲ್ಲಿ ಅವರ ಗದಾಯುದ್ಧದರ್ಪಣ ಎಂಬ ಪ್ರೌಢ ಕೃತಿ ಪ್ರಕಟವಾಯಿತು. ಇದು ರನ್ನನಿಗೆ ಸಂಬಂಧಿಸಿದಂತೆ ಒಂದು ಉತ್ತಮ ಪರಾಮರ್ಶನ ಗ್ರಂಥವಾಗಿ ಜನಪ್ರಿಯವಾಗಿದೆ. ಹಾಗೆಯೇ ಪಂಪ ಭಾರತ ದೀಪಿಕೆಯ ಮೇಲೊಂದು ಕ್ಷಕಿರಣ ಎಂಬ ಸುದೀರ್ಘವಾದ ಅಪ್ರಕಟಿತ ಲೇಖನವೂ ಸುಬ್ರಾಯ ಭಟ್ಟರ ಪಾಂಡಿತ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ಮಾರ್ಜರಿ ಸೈಕ್ಸ್ ಎನ್ನುವವರು ರವೀಂದ್ರನಾಥ ಟಾಗೋರರ ಬಗ್ಗೆ ಇಂಗ್ಲಿಷಿನಲ್ಲಿ ಬರೆದ ಬರೆದ ಕೃತಿ ಯನ್ನು 1958ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಸಂಸ್ಕೃತದಲ್ಲಿ ರಚನೆಗೊಂಡ ಮಲಯಾಳದ ಪ್ರಾಚೀನ ಲಕ್ಷಣ ಗ್ರಂಥ ಲೀಲಾ ತಿಲಕಂ ಕೃತಿಯನ್ನು ಬಿ.ಕೆ. ತಿಮ್ಮಪ್ಪನವರ ಜತೆ ಸೇರಿ 1974ರಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ಸುಬ್ರಾಯ ಭಟ್ಟರ ಬಗ್ಗೆ ಬರೆಯುವಾಗ, ಅವರ ಕುರಿತು ಅವರ ವಿದ್ಯಾರ್ಥಿಗಳು ಭಾವುಕರಾಗಿ ಮಾತನಾಡುವಾಗ ಎರಡು ತಲೆಮಾರುಗಳ ಕೊಂಡಿಯಾಗಿ ನಿಂತ ಪಾಂಡಿತ್ಯದ ಆಳ ಅಗಲಗಳ ಅನುಭವ ಕಾಡತೊಡಗುತ್ತದೆ. ಒಂದು ವಿಭಾಗವನ್ನು ಕಟ್ಟಿ ಬೆಳೆಸಿದ ಮಹತ್ವದ ವ್ಯಕ್ತಿತ್ವವೊಂದರ ಶಿಲ್ಪ ಅನಾವರಣಗೊಳ್ಳುತ್ತದೆ. -ಡಾ| ರಾಧಾಕೃಷ್ಣ ಬೆಳ್ಳೂರು