Advertisement

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

05:14 PM Apr 24, 2024 | Team Udayavani |

ಕೊಚ್ಚಿ: ಮಾಲಿವುಡ್‌ ಸಿನಿರಂಗದಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿರುವ ʼಮಂಜುಮ್ಮೆಲ್ ಬಾಯ್ಸ್ʼ ಶೀಘ್ರದಲ್ಲಿ ಓಟಿಟಿಗೆ ಎಂಟ್ರಿ ಆಗಲಿದೆ. ಮಲಯಾಳಂ ಸೇರಿ ತೆಲುಗಿನಲ್ಲಿ ಡಬ್‌ ಆಗಿ ರಿಲೀಸ್‌ ಆಗಿರುವ ಈ ಸಿನಿಮಾಕ್ಕೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

Advertisement

ಬಾಕ್ಸ್‌ ಆಫೀಸ್‌ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದ ʼಮಂಜುಮ್ಮೆಲ್ ಬಾಯ್ಸ್ʼ ಈಗ ಕಾನೂನು ಸಂಕಷ್ಟದಲ್ಲಿ ಸಿಲುಕಿದೆ.

ಚಿತ್ರದ ಹೂಡಿಕೆದಾರರು ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದರಿಂದ ಚಿತ್ರದ ನಿರ್ಮಾಪಕರಿಗೆ ಕಾನೂನು ಸಂಕಷ್ಟ ಎದುರಾಗಿದೆ.

ಸಿರಾಜ್ ವಲಿಯತ್ತರ ಹಮೀದ್ ಎನ್ನುವವರು ಚಿತ್ರದ ನಿರ್ಮಾಪಕರ ಮೇಲೆ ದೂರು ದಾಖಲಿಸಿದ್ದಾರೆ. ಚಿತ್ರತಂಡ ಸಿನಿಮಾದ ಲಾಭದ ಪಾಲು ತನಗೆ ನೀಡುತ್ತಾರೆ ಎಂದು ಭರವಸೆ ನೀಡಿದ್ದರು, ಆದರೆ ಅವರು ಭರವಸೆಯನ್ನು ಈಡೇರಿಸಲಿಲ್ಲ ಎಂದು ದೂರಿನಲ್ಲಿ ಹಮೀದ್‌ ಹೇಳಿದ್ದಾರೆ.

ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಚಿತ್ರದ ನಿರ್ಮಾಣ ಸಂಸ್ಥೆ ʼಪರವ ಫಿಲ್ಮ್ಸ್ʼ ಮತ್ತು ಅವರ ಪಾಲುದಾರ ಶಾನ್ ಆಂಟೋನಿ ವಿರುದ್ಧ ದೂರು ದಾಖಲಿಸಲು ಕೇರಳ ಪೊಲೀಸರಿಗೆ ಸೂಚನೆ ನೀಡಿದೆ ಎಂದು ʼದಿ ಹಿಂದೂʼ ವರದಿ ಮಾಡಿದೆ. ಚಲನಚಿತ್ರದಿಂದ ಗಳಿಸಿದ ಲಾಭದ 40% ಅನ್ನು ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Advertisement

ಪರವ ಫಿಲ್ಮ್ಸ್ ಚಿತ್ರದ ನಿರ್ಮಾಣ ವೆಚ್ಚವಾದ 22 ಕೋಟಿ ರೂ.ಗಳಲ್ಲಿ ಹೂಡಿಕೆ ಮಾಡಿದರೆ ಲಾಭವಾಗಿ 40% ಅನ್ನು ದೂರುದಾರರಿಗೆ ನೀಡುವುದಾಗಿ ಭರವಸೆ ನೀಡಿದ್ದರು. ನಂತರ ದೂರುದಾರರು ಪರವ ಫಿಲ್ಮ್ಸ್ ಖಾತೆಗೆ 5.99 ಕೋಟಿ ಮತ್ತು ಆಂಟನಿ ಖಾತೆಗೆ 50 ಲಕ್ಷ ರೂ.‌ ವರ್ಗಾವಣೆ ಮಾಡಿದ್ದರು.

ದೂರುದಾರರು ಒಂದು ಅವಧಿಯಲ್ಲಿ ನಿರ್ಮಾಣ ಸಂಸ್ಥೆಗೆ 51 ಲಕ್ಷ ರೂಪಾಯಿ ಸೇರಿ ಒಟ್ಟು 7 ಕೋಟಿ ರೂಪಾಯಿಗಳನ್ನು ನೀಡಿದ್ದರು ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಚಿತ್ರ ತಯಾರಕರು ಮೂಲ ಮೊತ್ತ ಮತ್ತು ಹೆಚ್ಚುವರಿ  40 ಕೋಟಿ ರೂ. ಲಾಭ-ಷೇರನ್ನು ಮರುಪಾವತಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.

ʼಮಂಜುಮ್ಮೆಲ್ ಬಾಯ್ಸ್ʼ ಸಿನಿಮಾವನ್ನು ಚಿದಂಬರಂ ನಿರ್ದೇಶಿಸಿದ್ದು, ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್ ಪೊದುವಾಲ್, ಲಾಲ್ ಜೂನಿಯರ್, ದೀಪಕ್ ಪರಂಬೋಲ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಮತ್ತು ಚಂದು ಸಲೀಂಕುಮಾರ್ ಮುಂತಾದ ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next