ಬೆಂಗಳೂರು: ಇದೇ ತಿಂಗಳಿನಲ್ಲಿ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಯಲಿದೆ. ಗಣ ಹೋಮ, ಮೃತ್ಯುಂಜಯ ಹೋಮ, ಅಶ್ಲೇಷ ಬಲಿ, ಸರ್ಪಶಾಂತಿ ಕೂ ಈ ಪೂಜೆಯಲ್ಲಿ ನಡೆಯಲಿದೆ.
ಈ ಪೂಜೆಯಲ್ಲಿ ಚಿತ್ರರಂಗದ ಬಹುತೇಕ ಕಲಾವಿದರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಈ ನಡುವೆ ನಟ ದರ್ಶನ್ ಜೈಲಿನಲ್ಲಿದ್ದು ಅವರ ಒಳಿತಿಗಾಗಿ ಈ ಪೂಜೆ ನಡೆಯುತ್ತಿದೆ ಎನ್ನುವ ಮಾತುಗಳು ಹರಿದಾಡಿತ್ತು.
ಇದೀಗ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh) ಸ್ಪಷ್ಟನೆ ನೀಡಿದ್ದಾರೆ. ಹಿರಿಯ ನಟ ದೊಡ್ಡಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಇದೇ ಆಗಸ್ಟ್ 13,14 ರಂದು ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಯಲಿದೆ. ಈ ದಿನ ಚಿತ್ರರಂಗದ ಒಳಿತಿಗಾಗಿ ಹೋಮ- ಹವನಗಳು ನಡೆಯಲಿದೆ” ಎಂದರು.
ದರ್ಶನ್ (Darshan) ಅವರಿಗಾಗಿ ಈ ಪೂಜೆ ನಡೆಯಲಿದೆ ಎನ್ನುವ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ರಾಕ್ ಲೈನ್ ಅವರು ಸ್ಪಷ್ಟನೆ ನೀಡಿದ್ದಾರೆ.
“ಈ ಪೂಜೆ ಚಿತ್ರರಂಗದ ಒಳಿತಿಗಾಗಿ ನಡೆಯುತ್ತಿದೆ. ದರ್ಶನ್ ಅವರಿಗಾಗಿ ಪೂಜೆ ಮಾಡಿಸಬೇಕು ಅಂದ್ರೆ ನಾನು 100 ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದೆ. ಇಲ್ಲೇ ಯಾಕೆ ಮಾಡಬೇಕು. ದರ್ಶನ್ ಮನೆಯಲ್ಲಿ ಅಥವಾ ನನ್ನ ಮನೆಯಲ್ಲಿ ಮಾಡಿಸುತ್ತಿದ್ದೆ. ದರ್ಶನ್ ಅವರನ್ನು ಸ್ನೇಹಿತನಾಗಿ ಫೀಲ್ ಮಾಡಿಕೊಳ್ಳುತ್ತೇನೆ. ಯಾಕೆ ಹೀಗೆ ಮಾಡಿದ್ರು ಅಂತ ಅಂದುಕೊಳ್ತೀನಿ. ದಯವಿಟ್ಟು ದರ್ಶನ್ ಅವರಿಗಾಗಿ ಈ ಪೂಜೆ ಮಾಡಿಸುತ್ತಿದ್ದೇವೆ ಅಂದುಕೊಂಡರೆ ಖಂಡಿತವಾಗಿ ಅಲ್ಲವೆಂದು” ಅವರು ಹೇಳಿದರು.
ಚಿತ್ರರಂಗದ ಏಳಿಗಿಗಾಗಿ ಈ ಪೂಜೆ ನಡೆಯುತ್ತಿದೆ. 13 ಮತ್ತು 14ನೇ ತಾರೀಕಿನಂದು ಅಂಬರೀಶ್ ಭವನದಲ್ಲಿ ಪೂಜೆ ನಡೆಯಲಿದೆ. ಕೋವಿಡ್ ಆದ್ಮೇಲೆ ಪೂಜೆ ಮಾಡ್ಬೇಕು ಅಂತಾ ಅನ್ಕೊಂಡಿದ್ವಿ. ಕಾರಣಾಂತರಗಳಿಂದ ಮಾಡೋಕೆ ಆಗ್ಲಿಲ್ಲ. ಈ ತಿಂಗಳು 14ಕ್ಕೆ ಒಳ್ಳೆಯ ದಿನವಿದೆ. ಇಡೀ ಚಿತ್ರರಂಗದ ಉಳಿವಿಗಾಗಿ ಈ ಹೋಮ ಹಾಗೂ ಪೂಜೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಇಡೀ ಚಿತ್ರರಂಗ ಭಾಗಿಯಾಗಬೇಕೆನ್ನುವುದು ನಮ್ಮ ಉದ್ದೇಶ” ಎಂದು ರಾಕ್ ಲೈನ್ ಹೇಳಿದರು.