ಇಸ್ಲಾಮಾಬಾದ್ : ಒಂದು ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಪಾಕಿಸ್ಥಾನದ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ ಬಳಿಕ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ಥಾನದ ರಾಜಧಾನಿಯಲ್ಲಿ ವ್ಯಾಪಕ ಭದ್ರತಾ ಪಡೆಗಳನ್ನ ನಿಯೋಜಿಸಿ ಹಾಜರು ಪಡಿಸಲಾಗಿದೆ.
ಸುಪ್ರೀಂ ಕೋರ್ಟ್‌ನ ಹೊರಗೆ ಭದ್ರತೆಯನ್ನು ಹೆಚ್ಚಿಸಿ ರೇಂಜರ್ಸ್ ಮತ್ತು ಬಾಂಬ್ ನಿಷ್ಕ್ರಿಯ ದಳಗಳ ತುಕಡಿಗಳನ್ನು ಸಹ ನಿಯೋಜಿಸಲಾಗಿತ್ತು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಂದು(ಗುರುವಾರ) ಬಿಡುಗಡೆ ಮಾಡದಿದ್ದರೆ ಪಕ್ಷದ ಬೆಂಬಲಿಗರು ಇಸ್ಲಾಮಾಬಾದ್‌ಗೆ ಮೆರವಣಿಗೆ ನಡೆಸುವುದಾಗಿ ಪಿಟಿಐ ಮುಖಂಡ ಮುರಾದ್ ಸಯೀದ್ ಎಚ್ಚರಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ವಿಚಾರಣೆಯ ಆರಂಭದಲ್ಲಿ, ಇಮ್ರಾನ್ ಅವರ ವಕೀಲರಲ್ಲಿ ಒಬ್ಬರಾದ ಹಮೀದ್ ಖಾನ್ ಅವರು ತಮ್ಮ ಕಕ್ಷಿದಾರರು ಬಂಧನಕ್ಕೆ ಮುಂಚಿತವಾಗಿ ಜಾಮೀನಿಗಾಗಿ ಇಸ್ಲಾಮಾಬಾದ್ ಹೈಕೋರ್ಟ್ (ಐಹೆಚ್ ಸಿ ) ಅನ್ನು ಸಂಪರ್ಕಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ (ಎನ್‌ಎಬಿ)”ನ್ಯಾಯಾಲಯದ ನಿಂದನೆ” ಮಾಡಿದೆ ಎಂದು ಉನ್ನತ ನ್ಯಾಯಾಧೀಶರು ಹೇಳಿದ್ದಾರೆ. “ಅವರು ಬಂಧನಕ್ಕೂ ಮುನ್ನ ನ್ಯಾಯಾಲಯದ ರಿಜಿಸ್ಟ್ರಾರ್‌ನಿಂದ ಅನುಮತಿ ಪಡೆಯಬೇಕಿತ್ತು. ನ್ಯಾಯಾಲಯದ ಸಿಬಂದಿಯೂ ನಿಂದನೆಗೆ ಒಳಗಾಗಿದ್ದರು” ಎಂದು ಅವರು ಹೇಳಿದರು.