ಹೊಸದಿಲ್ಲಿ: ದೇಶಾದ್ಯಂತ ಪ್ರತಿ ಕೆಜಿ ಟೊಮೆಟೋ ದರ 150 ರೂ. ದಾಟಿರುವಂತೆಯೇ ಕೇಂದ್ರ ಸರಕಾರ ದರ ಇಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಆರಂಭಿಸಿದೆ. ಹೆಚ್ಚು ಟೊಮೆಟೋ ಬೆಳೆಯುವ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ ಬೆಳೆ ಖರೀದಿಸಿ ವಿತರಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ (ಎನ್‌ಸಿಸಿಎಫ್), ಭಾರತದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್- ಎನ್‌ಎಎಫ್ಇಡಿ)ಗಳಿಗೆ ಬುಧವಾರ ಸೂಚನೆ ನೀಡಿದೆ.
ಇದರಿಂದಾಗಿ ಶೀಘ್ರದಲ್ಲೇ ಗಗನಮುಖೀಯಾಗಿರುವ ಟೊಮೆಟೋ ದರ ಇಳಿಮುಖವಾಗಿರುವ ಸಾಧ್ಯತೆ ಇದೆ. ಜು.14ರಿಂದ ಅನ್ವಯವಾಗುವಂತೆ ದಿಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ವ್ಯಾಪ್ತಿ (ಎನ್‌ಸಿಆರ್) ವ್ಯಾಪ್ತಿಯಲ್ಲಿ ಎನ್‌ಸಿಸಿಎಫ್ ಮತ್ತು ನಾಫೆಡ್ ವತಿಯಿಂದ ಟೊಮೆಟೋವನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಬಗ್ಗೆ ಕೇಂದ್ರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಹೆಚ್ಚು ದರ ಏರಿಕೆಯಾಗಿದೆ, ಯಾವ ಭಾಗದಲ್ಲಿ ಹೆಚ್ಚು ಬೇಡಿಕೆ ಇದೆ ಎಂಬ ಆಧಾರದಲ್ಲಿ ಟೊಮೆಟೋ ಪೂರೈಸಬೇಕು ಎಂಬ ವಿಚಾರವನ್ನೂ ಗುರುತು ಮಾಡಿಕೊಳ್ಳಲಾಗಿದೆ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಅದನ್ನು ಬೆಳೆಯಲಾಗುತಿದ್ದರೂ, ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಒಟ್ಟು ಉತ್ಪಾದನೆಯ ಶೇ.56-ಶೇ.58 ಪ್ರಮಾಣವನ್ನು ಬೆಳೆಯಲಾಗುತ್ತದೆ. ಇದರ ಹೊರತಾಗಿಯೂ ಆಯಾ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಬೆಳೆಯುವ ಅವಧಿಯಲ್ಲೂ ಬದಲಾವಣೆ ಇದೆ.
ಸದ್ಯ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರದ ಸತಾರಾ, ನಾರಾಯಣಗಾಂವ್ ಮತ್ತು ನಾಸಿಕ್, ಆಂಧ್ರಪ್ರದೇಶದ ಮಂಡಲಪೇಟ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ದಿಲ್ಲಿ ಮತ್ತು ಎನ್‌ಸಿಆರ್‌ಗೆ ಕರ್ನಾಟಕದ ಕೋಲಾರ, ಹಿಮಾಚಲ ಪ್ರದೇಶದಿಂದ ಟೊಮೆಟೋ ಪೂರೈಕೆಯಾಗುತ್ತದೆ.
ಶೀಘ್ರವೇ ನಾಸಿಕ್‌ನಿಂದ ಹೊಸ ಬೆಳೆ ಪೂರೈಕೆಯಾಗಲಿದೆ. ಮುಂದಿನ ತಿಂಗಳು ನಾರಾಯಣಗಾಂವ್, ಔರಂಗಾಬಾದ್, ಮಧ್ಯಪ್ರದೇಶಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯಾಗುವ ವಿಶ್ವಾಸ ಸರಕಾರದ ಮುಂದಿದೆ.