Advertisement

Bengaluru: ನಗರದಲ್ಲಿ ಏಕಕಾಲಕ್ಕೆ  200 ಗಣೇಶ ಮೂರ್ತಿಗಳ ಮೆರವಣಿಗೆ

12:21 PM Sep 16, 2024 | Team Udayavani |

ಬೆಂಗಳೂರು: ಅಲಂಕೃತಗೊಂಡ ದೊಡ್ಡ ದೊಡ್ಡ ಗಣಪತಿ ಮೂರ್ತಿಗಳು, ರಸ್ತೆ ತುಂಬೆಲ್ಲಾ ಜನಸಾಗರ, ಎಲ್ಲೆಂದರಲ್ಲಿ ಗಣಪತಿ ಬಪ್ಪಾ ಮೋರಿಯಾ ಜಯಘೋಷ, ಸಾಲು-ಸಾಲಾಗಿ 200ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಅದ್ಧೂರಿ ಮೈನವಿರೇಳಿಸುವ ಮೆರವಣಿಗೆ, ಕಿವಿಗಡಚ್ಚುವ ಡೊಳ್ಳು-ತಮಟೆ, ಡಿಜೆ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಯುವಕ-ಯುವತಿಯರ ದಂಡು, ಎತ್ತ ನೋಡಿದರೂ ಖಾಕಿ ಸರ್ಪಗಾವಲು…..

Advertisement

ಇದು ಶಿವಾಜಿನಗರದ ಶ್ರೀಮುತ್ಯಾಲಮ್ಮ ದೇವಿ ದೇವಸ್ಥಾನದ ಬಳಿ ಭಾನುವಾರ ಕಂಡು ಬಂದ ದೃಶ್ಯ. ಪ್ರತಿವರ್ಷದಂತೆ ಪುಲಕೇಶಿನಗರ, ಶಿವಾಜಿನಗರ ಸೇರಿದಂತೆ ಇಲ್ಲಿನ ಆಸು-ಪಾಸಿನಲ್ಲಿರುವ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಭಾನುವಾರ ಸಂಜೆ ಏಕಕಾಲದಲ್ಲಿ ವಿವಿಧ ಪ್ರದೇಶಗಳಿಂದ ನೂರಾರು ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌, ಕ್ರೇನ್‌ಗಳ ಮೂಲಕ ಮೆರವಣಿಗೆಯಲ್ಲಿ ಹಲಸೂರು ಕೆರೆಯ ಕಲ್ಯಾಣಿಗೆ ತಂದು ವಿಸರ್ಜಿಸಲಾಯಿತು.

ಸೆಂಟ್‌ಜಾನ್ಸ್‌ ಚರ್ಚ್‌ ರಸ್ತೆಯ ಮೂಲಕ ಸೆಪ್ಪಿಂಗ್ಸ್‌ ರಸ್ತೆ, ತಿಮ್ಮಯ್ಯ ರಸ್ತೆ, ನಾರಾಯಣ ಪಿಳ್ಳೆ ಸ್ಟ್ರೀಟ್‌, ಕಾಮರಾಜ ರಸ್ತೆ ಹಾಗೂ ಶಿವನ್‌ ಚೆಟ್ಟಿ ಗಾರ್ಡನ್‌ ರಸ್ತೆ ಹಾಗೂ ಕೆನ್ಸಿಂಗ್ಟನ್‌-ಮರ್ಫೀ ರಸ್ತೆ ಜಂಕ್ಷನ್‌ ಕಡೆಯಿಂದ ಎಂ.ಇ.ಜಿ ಮೂಲಕ- ಹಲಸೂರು ಲೇಕ್‌ವರಗೆ ಮೆರವಣಿಗೆಗಳು ಸಾಗಿದವು. ಮನೆ, ಅಂಗಡಿಗಳ ಬಳಿ ನಿಂತು ಗಣೇಶನ ಕೃಪೆಗೆ ಲಕ್ಷಾಂತರ ಜನ ಪಾತ್ರರಾದರು.

ಇನ್ನು ಒಂದು ವಾಹನಗಳಲ್ಲಿ ಗಣೇಶಮೂರ್ತಿಯಿದ್ದರೆ, ಅದರ ಮುಂದಿನ ಲಾರಿಗಳಲ್ಲಿ ಸೌಂಡ್‌ ಬಾಕ್ಸ್‌ ತುಂಬಿ ಜನಪ್ರಿಯ ಚಲನಚಿತ್ರಗಳ ಹಾಡುಗಳು ನೆರೆದಿದ್ದ ಜನರನ್ನು ನಿಂತಲ್ಲೇ ಹಜ್ಜೆ ಹಾಕುವಂತೆ ಮಾಡಿತ್ತು. ರಾಜ ಬೀದಿಗಳಲ್ಲಿ ಪಟಾಕಿ ಸಿಡಿಸುತ್ತಾ ಡಿ.ಜೆ ಸೌಂಡ್‌ ನೊಂದಿಗೆ ಸಾವಿರಾರು ಯುವಕ ಯುವತಿಯರು ಹಿರಿಯರು ಕುಣಿದು ಕುಪ್ಪಳಿಸಿದರು. ಅಲ್ಲಲ್ಲಿ ಜನರು ಗಣಪನಿಗೆ ವಿಶೇಷ ಪೂಜೆಯನ್ನುಸಲ್ಲಿಸಿದರು.

ವಿವಿಧ ದೀಪಗಳಿಂದ ಅಲಂಕೃತಗೊಂಡಿದ್ದ ಪ್ರತಿಯೊಂದು ಗಣೇಶ ಮೂರ್ತಿಗಳು ಭಿನ್ನ ಹಾಗೂ ಸುಂದರವಾಗಿ ಕಂಗೊಳಿಸುತ್ತಿದ್ದವು. ಒಂದಕ್ಕಿಂತ ಒಂದು ಅದ್ಭುತವಾದ ಗಣೇಶ ಮೂರ್ತಿಗಳನ್ನು ಕಣ್ತುಂಬಿಕೊಳ್ಳಲು ಸೇರಿದ್ದ ಭಕ್ತಗಣ ಮೊಬೈಲ್‌ನಲ್ಲಿ ದೃಶ್ಯ ಸೆರೆ ಹಿಡಿದರೆ, ಬಹುತೇಕರು ಗಣೇಶನ ಮೂರ್ತಿಗಳ ಮುಂದೆ ಸೆಲ್ಫಿ ತೆಗೆದು ಸಂಭ್ರಮಿಸಿದರು.

Advertisement

ಕ್ರೇನ್‌ಗಳಲ್ಲಿ ಗಣೇಶ ಮೂರ್ತಿ:  10 ಅಡಿಗೂ ಎತ್ತರದ ಗಣೇಶ ಮೂರ್ತಿಗಳನ್ನು ಹಲವಾರು ಕ್ರೇನ್‌ಗಳಲ್ಲಿ ಒಂದೊಂದಾಗಿ ಹಲಸೂರು ಕರೆಯತ್ತ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಯ ಪೊಲೀಸ್‌ ಚೌಕಿ ಮುಂಭಾಗದಲ್ಲಿದ್ದ ಖಾಲಿ ಜಾಗದಲ್ಲಿ ಕ್ರೇನ್‌ನಲ್ಲಿ ಬೃಹತ್‌ ಆಕಾರದ ಗಣೇಶ ಮೂರ್ತಿಗಳನ್ನು ಒಂದಾದ ಮೇಲೊಂದರಂತೆ ಎತ್ತರಕ್ಕೆ ಎತ್ತಿ, ನಂತರ ಕೆಳಗಿಳಿಸುವ ದೃಶ್ಯ ಮೈನವಿರೇಳಿಸುವಂತಿದ್ದವು. ಇನ್ನು ಬಹುತೇಕ ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಸಾಲಾಗಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂತು.

ಸರ್ವಧರ್ಮಗಳ ಸಮಾಗಮ:  ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿಹಿಂದೂ ಮುಸಲ್ಮಾನರಲ್ಲದೆ ಬೇರೆ ಧರ್ಮಗಳ ಜನ ಸಹ ಸೇರಿದ್ದರು. ಇಲ್ಲಿನ ಗಣೇಶ ಚತುರ್ಥಿ ಮೆರವಣಿಗೆಯು ಸರ್ವಧರ್ಮಗಳ ಸಮಾಗಮಕ್ಕೆ ವೇದಿಕೆಯಾಗಿ ಗಣೇಶ ಉತ್ಸವದ ಮೆರಗು ಇನ್ನಷ್ಟು ಹೆಚ್ಚುವಂತೆ ಮಾಡಿತು. ದೊಡ್ಡ ದೊಡ್ಡ ಗಣಪತಿ ಮೂರ್ತಿಗಳ ಹೊತ್ತೂಯ್ಯುವ ರಸ್ತೆ ತುಂಬೆಲ್ಲಾ ಜನಸಾಗರ. ಮಹಿಳೆಯರು, ವಯಸ್ಕರು, ಮಕ್ಕಳು ಎನ್ನದೇ ಎಲ್ಲ ವಯೋಮಾನದ ಲಕ್ಷಾಂತರ ಭಕ್ತರು ಗಣೇಶೋತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ವಾರಾಂತ್ಯದ ಹಿನ್ನೆಲೆಯಲ್ಲಿ ಜನಸ್ತೋಮ ಅತ್ಯಧಿಕವಾಗಿತ್ತು. ಇನ್ನು ರಸ್ತೆಯುದ್ದಕ್ಕೂ ಅಲ್ಲಲ್ಲಿ ತಿಂಡಿ, ತಿನಿಸು, ಪಾನಿಯಗಳನ್ನು ನೀಡುತ್ತಿರುವ ದೃಶ್ಯವೂ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next