Advertisement

ಬಜೆಟ್‌ಗೆ ಸಲಹೆಗಳ ಮಹಾಪೂರ

10:46 AM Jan 04, 2019 | Team Udayavani |

ಹರಿಹರ: ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ 2ನೇ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಸಲಹೆಗಳ ಮಹಾಪೂರವೆ ಹರಿಯಿತು. ಬಹುತೇಕರು ನಗರಸಭೆ ಜನಸ್ನೇಹಿ ಆಗಬೇಕೆಂದು ಆಗ್ರಹಿಸಿದರು.

Advertisement

ಆರಂಭದಲ್ಲಿ ಮಾತನಾಡಿದ ಸದಸ್ಯ ನಾಗರಾಜ್‌ ಮೆಹರ್ವಾಡೆ ಗಾಂಧಿ ವೃತ್ತದ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣವನ್ನು ದುರಸ್ತಿ ಮಾಡಿ ಬಾಡಿಗೆಗೆ ನೀಡಬೇಕು. ಪಶು ಆಸ್ಪತ್ರೆ ಹಿಂಭಾಗದ ಮಳಿಗೆಗಳು, ದೊಡ್ಡಿ ಬೀದಿ ತರಕಾರಿ ಮಾರುಕಟ್ಟೆ ಮಳಿಗೆಗಳ ಬಾಡಿಗೆ ಬರುತ್ತಿಲ್ಲ. ನಗರಸಭೆ ಒಡೆತನದ ಆಸ್ತಿಗಳ ಬಾಡಿಗೆ ವಸೂಲಾತಿಗೆ ಆದ್ಯತೆ ನೀಡಿದರೆ ದೊಡ್ಡ ಆದಾಯ ದೊರೆಯುತ್ತದೆ ಎಂದರು.

ಹಿರಿಯ ಸದಸ್ಯ ಎ.ವಾಮನಮೂರ್ತಿ ಮಾತನಾಡಿ, ನಗರದ ತುಂಬಾ ಸಿಮೆಂಟ್‌ ರಸ್ತೆ ನಿರ್ಮಿಸುತ್ತಿರುವುದರಿಂದ ಅಂತರ್ಜಲ ಕುಸಿದು ಕೊರೆದ ಕೊಳವೆಬಾವಿಗಳು ವಿಫಲವಾಗುತ್ತಿದೆ. ಅಂತರ್ಜಲ ಹೆಚ್ಚಿಸುವ, ಪರಿಸರಕ್ಕೆ ಪೂರಕವಾದ ಡಾಂಬರು ರಸ್ತೆಗಳನ್ನು ನಿರ್ಮಿಸಬೇಕು. ಕವಲೆತ್ತು ಕುಡಿವ ನೀರಿನ ಜಾಕ್‌ವೆಲ್‌ಗೆ ಎಕ್ಸ್‌ಪ್ರೆಸ್‌ ವಿದ್ಯುತ್‌ ಸಂಪರ್ಕ ಕೆಲಸ 15 ವರ್ಷಗಳಿಂದ ನಡೆಯುತ್ತಲೇ ಇದ್ದು, ಇನ್ನಾದರೂ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ಸೈಯದ್‌ ಏಜಾಜ್‌ ಮಾತನಾಡಿ, ನಗರದ ರಸ್ತೆ ಅಂಚುಗಳಲ್ಲಿ ಶೇಖರವಾಗಿರುವ ಮಣ್ಣು ಸಂಗ್ರಹಿಸಿ ಸಾಗಿಸಲು ಖರೀದಿಸಿದ್ದ ಯಂತ್ರ ವಾಟರ್‌ ವರ್ಕ್ಸ್ ಆವರಣದಲ್ಲಿ ಕೊಳೆಯುತ್ತಿದ್ದು, ಅದನ್ನು ಬಳಕೆ ಮಾಡಬೇಕು. ನಗರದಲ್ಲಿನ ದಾವಣಗೆರೆ ಹಳೆ ನೀರು ಸರಬರಾಜು ಕೇಂದ್ರ ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದರು. 

ಶಂಕರ್‌ ಖಟಾವ್‌ಕರ್‌ ಮಾತನಾಡಿ, ಶಿವಮೊಗ್ಗ ವೃತ್ತದಲ್ಲಿ ಸುಗಮ ವಾಹನ ಸಂಚಾರಕ್ಕೆ ಸಿಗ್ನಲ್‌ ಅಳವಡಿಸಬೇಕು. ಅಭಿವೃದ್ಧಿಗೊಂಡಿರುವ ಹಳೆ ಪಿ.ಬಿ.ರಸ್ತೆಯಲ್ಲಿ ಬೀದಿ ದೀಪ ಅಳವಡಿಸಬೇಕು ಎಂದರು. ಮೊಹ್ಮದ್‌ ಸಿಗ್ಬತ್‌ಉಲ್ಲಾ ಮಾತನಾಡಿ, ನಗರದಲ್ಲಿ ಹಾದು ಹೋಗಿರುವ ಹಳ್ಳಕ್ಕೆ ಅಲ್ಲಲ್ಲಿ ಸೇತುವೆ ನಿರ್ಮಿಇಸಿ ಎಂದರು.

Advertisement

ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಮಾತನಾಡಿ, ರೈಲ್ವೆ ನಿಲ್ದಾಣದ ರಸ್ತೆ ಬೀದಿ ವ್ಯಾಪಾರಿಗಳಿಂದ ಒತ್ತುವರಿಯಾಗಿದ್ದು, ಸಂಜೆ 4ರಿಂದ ವ್ಯಾಪಾರ ಮಾಡುವಂತೆ ಸೂಚಿಸಬೇಕು. ಗಾಂಧಿ ವೃತ್ತಕ್ಕೆ ಹೈಮಾಸ್ಟ್‌ ದೀಪ ಹಾಗೂ ಮೂರ್ತಿ ಪ್ರತಿಷ್ಠಾಪಿಸಬೇಕು. ಇದಕ್ಕೆ ತಾವು ಒಂದು ಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರು.

ಇಂಜಿನಿಯರ್ ಅಸೋಸಿಯೇಷನ್‌ನ ಕೆ. ಶಿವಪ್ರಕಾಶ ಶಾಸ್ತ್ರಿ ಮಾತನಾಡಿ, ಅಗಸನಕಟ್ಟೆ ಕೆರೆ ಅಭಿವೃದ್ಧಿ ಪಡಿಸಿ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿರ್ಲಾ ಕಲ್ಯಾಣ ಮಂಟಪದ ಹಿಂಭಾಗದ ನದಿ ದಡದಲ್ಲಿ ರಿವರ್‌ ವ್ಯೂ ಪಾರ್ಕ್‌ ನಿರ್ಮಿಸಬೇಕೆಂದರು. 

ಅಮರಾವತಿ ಹೌಸಿಂಗ್‌ ಕಾಲೋನಿ ಹಿತರಕ್ಷಣಾ ಸಮಿತಿಯ ಸಿ.ಪಿ.ಮಲ್ಲನಗೌಡ್ರು, ಟಿ.ವೆಂಕಟೇಶಪ್ಪ, ಎಸ್‌.ಬಿ.ಕರೂರ್‌ ಕಾಲೋನಿಗೆ ಮೂಲಸೌಕರ್ಯದ ಮನವಿ ಮಾಡಿದರು.

ನಗರಸಭಾ ಸದಸ್ಯರಾದ ಬಿ.ರೇವಣಸಿದ್ದಪ್ಪ, ಕೆ.ಮರಿದೇವ, ಸೈಯದ್‌ ಜಹೀರ್‌ ಅಲ್ತಮಶ್‌, ನಗೀನಾ ಸುಭಾನ್‌, ಎಸ್‌.ಎಂ.ವಸಂತ್‌, ಕಾರ್ಮಿಕ ಮುಖಂಡ ಎಚ್‌.ಕೆ.ಕೊಟ್ರಪ್ಪ, ನಿಂಗಪ್ಪ ಚಂದಾಪೂರ್‌, ಇಸ್ಮಾಯಿಲ್‌ ಜಬಿಉಲ್ಲಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next