Advertisement

ಅಂತರ್ಜಲ ಸಂರಕ್ಷಣೆಗೆ ಮುಂದಾಗಿ

01:16 PM Feb 05, 2018 | |

ಚಡಚಣ: ಅಂತರ್ಜಲ ಎನ್ನುವುದು ಬ್ಯಾಂಕ್‌ನ ಉಳಿತಾಯ ಖಾತೆ ಇದ್ದಂತೆ. ಖಾತೆಗೆ ಆಗಾಗ ಹಣ ಜಮೆ ಮಾಡುತ್ತಿದ್ದರೆ ಮಾತ್ರ ಖಾತೆಯಿಂದ ಹೇಗೆ ಹಣ ಬಳಸಿಕೊಳ್ಳಬಹುದೋ ಹಾಗೆಯೇ ಅಂತರ್ಜಲ ಎಂಬ ಖಾತೆಯನ್ನು ಮರುಪೂರಣ ಮಾಡುವ ಕೆಲಸ ಆಗಬೇಕಾಗಿದೆ ಎಂದು ವಿಜಯಪುರ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಿರ್ದೇಶಕ ಡಾ| ಬಾಬು ಸಜ್ಜನ ಹೇಳಿದರು.

Advertisement

ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ ಹಾಗೂ ಅಂತರ್ಜಲ ನಿರ್ದೇಶನಾಲಯಗಳ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಅಂತರ್ಜಲ ಕುರಿತು ಮಕ್ಕಳಿಗೆ ಹಮ್ಮಿಕೊಂಡಿದ್ದ ಜಾಗೃತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.

ನಾವೀಗ ಅಂತರ್ಜಲ ಎಂಬ ಖಾತೆಯನ್ನು ಬರಿದು ಮಾಡುವುದರಲ್ಲಿ ನಿರತರಾಗಿದ್ದೇವೆ. ಮರುಪೂರಣದ
ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲ ಬಳಸಿಕೊಂಡಿದ್ದೇವೆ, ಈಗಲೂ ಬಳಸಿಕೊಳ್ಳುತ್ತಿದ್ದೇವೆ. ಅದರ ಕಹಿ ಫಲಗಳು ನಮ್ಮೆಲ್ಲರ ಅನುಭವಕ್ಕೆ ಬಂದಿದ್ದು, ಎಷ್ಟೋ ಕಡೆ ಸದ್ಯ ಸಾವಿರ ಅಡಿ ಆಳ ಭೂಮಿ ಕೊರೆದರು ನೀರು ದೊರಕುತ್ತಿಲ್ಲ ಎಂದು ಹೇಳಿದರು. 

ನೆಲದಾಳಕ್ಕೆ ಹೋದಂತೆ ನೀರಿನ ಗುಣಮಟ್ಟ ಕೂಡ ವಿಷಮಿಸುತ್ತದೆ.  ಕುಡಿಯಲು ಮತ್ತು ಬಳಸಲು ಯೋಗ್ಯವಲ್ಲದ ನೀರಿನಿಂದ ಅಪಾಯವೇ ಹೆಚ್ಚು. ಆದ್ದರಿಂದ ಅಂತರ್ಜಲದ ಮರು ಭರ್ತಿ ನಮ್ಮೆಲ್ಲರ ನಿತ್ಯ ಬದುಕಿನ ಒಂದು ಭಾಗವಾಗಬೇಕು. ಇಲ್ಲದೆ ಹೋದರೆ, ಪಾತಾಳಕ್ಕಿಳಿದರೂ ನಮಗೆ ನೀರು ದೊರಕದ ಪರಿಸ್ಥಿತಿ ಎದುರಾದಿತು ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕಿ ವಿಮಲಾ ಹಂದಿಗೋಳ ಹಾಗೂ ಮನಗೂಳಿ ಗ್ರಾಮದ ಪಪೂ
ಮಹಾವಿದ್ಯಾಲಯದ ಪ್ರಾಚಾರ್ಯ ಆರ್‌. ಕೆ. ಹನನಗಂಡಿ ಉಪನ್ಯಾಸ ನೀಡಿದರು. 

Advertisement

ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಶಿಕ್ಷಣ ಸಂಸ್ಥೆಯ
ನಿರ್ದೇಶಕಿ ನಾಗಮ್ಮ ಅಂಕದ, ಮುಖ್ಯಗುರು ಎಚ್‌.ಆರ್‌. ಬಗಲಿ, ಐಆರ್‌ಡಿ ಸಂಸ್ಥೆ ಸಿಬ್ಬಂದಿಗಳಾದ ದಶರಥ ಬನಸೋಡೆ, ಬಿ.ಎಫ್‌. ನಾಯ್ಕರ ಸೇರಿದಂತೆ ಮತ್ತಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next