ಧಾರವಾಡ: ಖಾಸಗಿ ಆಸ್ಪತ್ರೆಗಳು ತಪಾಸಣೆಗೆ ವಿಧಿಸುವ ಶುಲ್ಕ ಭರಿಸಲು ಸಾಧ್ಯವಾಗದ ರೋಗಿಗಳ ಸ್ವ್ಯಾಬ್ ಸಂಗ್ರಹಿಸಿ ಸರ್ಕಾರದ ಕಿಮ್ಸ್ ಮತ್ತು ಡಿಮ್ಹಾನ್ಸ್ ಪ್ರಯೋಗಾಲಯಗಳಿಗೆ ಕಳುಹಿಸಿದರೆ ಉಚಿತವಾಗಿ ಪರೀಕ್ಷಿಸಿ ವರದಿ ನೀಡಲು ಕ್ರಮ ವಹಿಸಲಾಗಿದೆ ಎಂದು ಡಿಸಿ ನಿತೇಶ್ ಕೆ. ಪಾಟೀಲ ಹೇಳಿದರು.
ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗುವ ಒಳರೋಗಿಗಳು ಹಾಗೂ ಎಲ್ಲ ಹೊರ ರೋಗಿಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು. ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಯ ಜೀವಗಳು ಅಮೂಲ್ಯವಾಗಿರುವುದರಿಂದ ಇದು ಉತ್ತಮ ಕ್ರಮವಾಗಲಿದೆ. ಸೋಂಕಿನ ತ್ವರಿತ ಪತ್ತೆ ಮತ್ತು ಚಿಕಿತ್ಸೆಯಿಂದ ಕೋವಿಡ್ ಮರಣ ಪ್ರಮಾಣ ಇಳಿಮುಖಗೊಳಿಸಬಹುದು ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಸ್ವ್ಯಾಬ್ ಸಂಗ್ರಹಣೆ ಸಂದರ್ಭದಲ್ಲಿಯೇ ವ್ಯಕ್ತಿಗಳ ಸಮರ್ಪಕ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಜಿಲ್ಲೆಯ ಹೆಸರನ್ನು ನಿಖರವಾಗಿ ದಾಖಲಾಗಿಸಬೇಕು. ಅನ್ಯ ಜಿಲ್ಲೆಗಳ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಬೇಕು. ಆದರೆ ಧಾರವಾಡ ಜಿಲ್ಲೆಯ ಹೆಸರಲ್ಲಿ ನೋಂದಾಯಿಸಬಾರದು. ಅವರ ಸ್ವಂತ ಜಿಲ್ಲೆಯ ಹೆಸರಿನಲ್ಲಿಯೇ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮತ್ತು ಎಸ್‌ಆರ್‌ಎಫ್ ಸಂಖ್ಯೆ ಹಂತದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಐಸಿಯುನಲ್ಲಿರುವ ಎಲ್ಲಾ ರೋಗಿಗಳ ಆ್ಯಂಟಿ ಬಯೋಗ್ರಾಮ್ ಮಾಡುವುದು ಕಡ್ಡಾಯವಾಗಿದೆ. ಸೋಂಕಿತ ರೋಗಿಗಳ ಪ್ರಾಥಮಿಕ ಸಂಪರ್ಕದಲ್ಲಿರುವವರು ಹಾಗೂ ಕುಟುಂಬದ ಸದಸ್ಯರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಯಶವಂತ ಮದೀನಕರ್ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಓರ್ವ ಪ್ರಯೋಗಾಲಯ ತಂತ್ರಜ್ಞರನ್ನು ಒದಗಿಸಿದರೆ, ಸರ್ಕಾರದಿಂದಲೇ ಡಾಟಾ ಎಂಟ್ರಿ ಆಪರೇಟರುಗಳು, ವಿಟಿಎಂ ಹಾಗೂ ಇತರೆ ಪರೀಕ್ಷಾ ಕಿಟ್‌ಗಳನ್ನು ಉಚಿತವಾಗಿ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ಎಸಿ ಡಾ| ಗೋಪಾಲಕೃಷ್ಣ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಮಹಾನಗರಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಹೆಸ್ಕಾಂ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಮೈಗೂರ ಇನ್ನಿತರರಿದ್ದರು.