ಕೋಲಾರ: ತಾಲೂಕು ಪಂಚಾಯಿತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಸಕಾಲದಲ್ಲಿ ಸಂಬಳ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿಯ ಅಧ್ಯಕ್ಷ ಸೂಲೂರು ಎಂ. ಆಂಜಿನಪ್ಪ ತಿಳಿಸಿದರು. ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ರೇಷ್ಮೆ ಕೃಷಿ ಮತ್ತು ಹೈನುಗಾರಿಕೆಯೇ ಮುಖ್ಯ ಆದಾಯದ ಮೂಲಗಳಾಗಿವೆ ಎಂದು ತಿಳಿಸಿದರು. ರೇಷ್ಮೆ ಇಲಾಖೆಯಿಂದ ರೈತರಿಗೆ ಬಿಳಿ ರೇಷ್ಮೆ ಬೆಳೆಯುವುದಕ್ಕೆ ವಿಜ್ಞಾನಿಗಳ ಸಹಾಯ ಮತ್ತು ಅಗತ್ಯ ಸೌಲಭ್ಯ ಇಲಾಖೆಯಿಂದ ಉಚಿತವಾಗಿ ನೀಡಲಾಗುವುದು. ಇದನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೆಸರು ನೋಂದಾಯಿಸಿ: ಫೆಬ್ರವರಿ 11-12 ರಂದು ಸಿಬಿಐಟಿ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಅಯೋಜಿಸಲಾಗುತ್ತಿದ್ದು, ಎಲ್ಲಾ ಗ್ರಾಮೀಣ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಎಂದು ತಿಳಿಸಿದರು. ರಸ್ತೆ ಬದಿಯ ಸಣ್ಣ ವ್ಯಾಪಾರಿಗಳು ಸೂಕ್ತ ದಾಖಲೆ ನೀಡಿದರೆ ಅವರಿಗೆ ಸರ್ಕಾರದಿಂದ ಅಂಗಡಿ ನಿರ್ಮಿಸಿಕೊಡಲಾಗುವುದು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ನೌಕರರ ಸುರಕ್ಷತೆ, ವಿಮೆ ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ಗಮನ ಹರಿಸಬೇಕು ಎಂದು ಸೂಚಿಸಿದರು.
ಗಂಧದ ಮರ ನಿರ್ವಹಣೆ ಕಾರ್ಯಾಗಾರ: ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಫೆ.15 ರೊಳಗೆ ಪೂರ್ಣಗೊಳಿಸಬೇಕು. ರಾಗಿ ಬೆಳೆಗಾರರು ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಫೆ.5ರಂದು ಗಂಧದ ಗಿಡ ಮತ್ತು ರಕ್ತ ಚಂದನದ ಮರಗಳನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಟಿ.ಚನ್ನಯ್ಯ ರಂಗಮಂದಿರದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಕುಷ್ಠ ರೋಗ ಮುಕ್ತ ದೇಶವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರತಿಜ್ಞಾ ವಿಧಿಯನ್ನು ಇಒ ಬಾಬು ಬೋಧಿಸಿದರು. ತಾಪಂ ಉಪಾಧ್ಯಕ್ಷೆ ಸಿ.ಲಕ್ಷ್ಮೀ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ವಿ ಮಂಜುನಾಥ್, ಎ.ಒ.ರಘುನಾಥ್‌ರೆಡ್ಡಿ ಉಪಸ್ಥಿತರಿದ್ದರು.