ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕುಡಿಯುವ ನೀರಿಗೆ ಪರದಾಟ ಆರಂಭವಾಗಿದೆ. 10 ದಿನ ಕಳೆದರು ನೀರು ಪೂರೈಸಲಾಗದ ಜಲಮಂಡಳಿ, ವಿದ್ಯುತ್ ಸರಬರಾಜು ವ್ಯತ್ಯಯದ ನೆಪವೊಡ್ಡಿದ್ದಾರೆ. ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದಿದ್ದು,
ಜಲಮಂಡಳಿ ಮತ್ತು ನಗರಸಭೆಯಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಗ ನಿಖೀಲ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಇನ್ನು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಇತ್ತ ಕ್ಷೇತ್ರದ ಮತದಾರರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ನೀರು ಬಂದರೂ ಕುಡಿಯುವ ಹಾಗಿಲ್ಲ!: ನಗರಕ್ಕೆ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಬಳಿಯಿಂದ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ದಿನ ನಿತ್ಯ 15 ರಿಂದ 16 ಎಂಎಲ್‌ಡಿ ಯಷ್ಟು ನೀರು ಅಗತ್ಯವಿದೆ. ಆದರೆ ಪೂರೈಕೆಯಾಗುತ್ತಿರುವುದು 6 ರಿಂದ 8 ಎಂ.ಎಲ್.ಡಿ ಮಾತ್ರ. ಕೊಳವೆ ಬಾವಿಗಳಿಂದ 3-4 ಎಂ.ಎಲ್.ಡಿ ನೀರು ಪೂರೈಕೆಯಾಗುತ್ತಿದೆ. ಈ ಕೊರತೆ ನೀಗಿಸಲು ಜಿಲ್ಲಾಡಳಿತ ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ ಆಗಾಗ್ಗೆ ನೀರು ಹರಿಸುತ್ತಿದೆ. ಈ ನೀರನ್ನು ಜಲಮಂಡಳಿ ರಾಮ ನಗರದ ಬಳಿ ಅರ್ಕಾವತಿ ನದಿಯಲ್ಲೇ ಶೇಖರಿಸಿ ಕೊಂಡು 1ನೇ ವಾರ್ಡಿನಿಂದ 10ನೇ ವಾರ್ಡಿನ ಮನೆಗಳಿಗೆ ಸರಬರಾಜು ಮಾಡುತ್ತದೆ. ಆದರೆ ಜಲ ಮಂಡಳಿಯೇ ನೀಡಿರುವ ಎಚ್ಚರಿಕೆಯಂತೆ ಈ ನೀರು ಕುಡಿಯಲು ಯೋಗ್ಯವಲ್ಲ! ಹೀಗಾಗಿ ಈ ಭಾಗದ ನಾಗರಿಕರು ಅಡುಗೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅವಲಂಭಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ.
ಪಾರದರ್ಶಕವಿಲ್ಲದ ಜಲಮಂಡಳಿ ಆಡಳಿತ!: ಕುಡಿಯಲು ಯೋಗ್ಯವಲ್ಲದ ನೀರಿಗೂ ಜಲಮಂಡಳಿ ಮಾಸಿಕ 218 ರೂ. ಶುಲ್ಕವನ್ನು ಈ ವಾರ್ಡುಗಳ ನಾಗರಿಕರಿಂದ ಪೀಕುತ್ತಿದೆ. ನಗರದಲ್ಲಿ ಸುಮಾರು 12 ಸಾವಿರ ನೀರಿನ ಸಂಪರ್ಕಗಳಿವೆ ಎಂದು ಗೊತ್ತಾಗಿದೆ.
ಕಳೆದ 10 ವರ್ಷಗಳಲ್ಲಿ ಒಮ್ಮೆಯಾದರೂ ಜಲ ಮಂಡಳಿ ತನ್ನ ಹಣಕಾಸಿನ ಶ್ವೇತ ಪತ್ರವನ್ನು ಹೊರೆಡಿಸಿಲ್ಲ.
ನಗರ ವ್ಯಾಪ್ತಿಯಲ್ಲಿ ಇರುವ ಅಧಿಕೃತ ಮತ್ತು ಅನಧಿಕೃತ ಸಂಪರ್ಕಗಳೆಷ್ಟು, ವಾಣಿಜ್ಯ ಮತ್ತು ಗೃಹಬಳಕೆ ಸಂಪರ್ಕಗಳೆಷ್ಟು, ವಸೂಲಾಗುತ್ತಿರುವ ಶುಲ್ಕ, ಸಿಬ್ಬಂದಿ ಎಷ್ಟು ಮಂದಿ, ಅವರಿಗೆಷ್ಟು ಸಂಬಳ, ನಿರ್ವಹಣಾ ವೆಚ್ಚ ಎಷ್ಟು , ವಿದ್ಯುತ್‌ಗಾಗಿ ಪಾವತಿಸುತ್ತಿರುವ ಹಣ ಎಷ್ಟು ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಜಲಮಂಡಳಿ ಒಮ್ಮೆಯಾದರೂ ಉತ್ತರ ನೀಡಿಲ್ಲ. ಜಲಮಂಡಳಿ ಅಧಿಕಾರಿಗಳ ಈ ಕಾರ್ಯವೈಖರಿಯ ವಿರುದ್ಧ ಆಗಾಗ್ಗೆ ಸಭೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಘರ್ಜಿಸಿ ಸುಮ್ಮನಾಗುತ್ತಿರುವುದು ಜನಸಾಮಾನ್ಯರಲ್ಲಿ ಸೋಜಿಗ ವ್ಯಕ್ತವಾಗಿದೆ.
ಖಾಸಗಿ ನೀರಿಗೆ ನಾಗರಿಕರ ಮೊರೆ: ಜಲಮಂಡಳಿ ಮತ್ತು ನಗರಸಭೆಯ ವಿರುದ್ಧ ಪ್ರತಿಭಟನೆ ನಡೆಸಿ ಹೈರಾಣಾಗಿರುವ ನಾಗರಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ತಮ್ಮ ಕುಟುಂಬಗಳಿಗೆ ಬೇಕಾದ ನೀರಿಗೆ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಿದ್ದಾರೆ. ಒಂದು ಟ್ಯಾಂಕರ್‌ಗೆ 300 ರಿಂದ 400 ರೂ. ಕೊಡುತ್ತಿದ್ದಾರೆ. ನಗರದಲ್ಲಿ ಸುಮಾರು 30 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಇವುಗಳಿಂದ
ನೀರು ಹೊತ್ತು ತರುವುದು ಬಹುತೇಕ ಪ್ರತಿಯೊಂದು ಕುಟುಂಬದ ಒಬ್ಬ ಸದಸ್ಯರ ನಿತ್ಯದ ಕಾಯಕವಾಗಿದೆ. ದುರಾದೃಷ್ಟವೆಂದರೆ ವಿದ್ಯುತ್ ಸಮಸ್ಯೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಗಂಟೆಗಟ್ಟಲೆ ಕೆಲಸ ಮಾಡುವುದೇ ಇಲ್ಲ. ಕೆಲವು ಘಟಕಗಳು ತಾಂತ್ರಿಕ ದೋಷದಿಂದಾಗಿ ಬಾಗಿಲು ಮುಚ್ಚಿರುತ್ತವೆ. ಇಂತಹ ಸಂದರ್ಭಗಳಲ್ಲಿ ಮತ್ತೂಂದು ಬಡಾವಣೆಯ ಘಟಕದಿಂದ ನೀರು ಹೊತ್ತು ತರಬೇಕಾದ ಅನಿವಾ ರ್ಯತೆ ಸೃಷ್ಟಿಯಾಗುತ್ತಿದೆ. ಜಿಲ್ಲಾ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದು ದಶಕ ಕಳೆದರೂ ಕುಡಿವ ನೀರಿನ ವಿಚಾರದಲ್ಲಿ ಪರಿಹಾರ ಕಾಣದ ನಾಗರಿಕರು ಚುನಾಯಿತ ಪ್ರತಿನಿಧಿಗಳ ಮೇಲೆ ಬೇಸರಗೊಂಡಿದ್ದಾರೆ .
.ಬಿ.ವಿ.ಸೂರ್ಯ ಪ್ರಕಾಶ್