ಮಹಾನಗರ: ರೈಲಿನಿಂದ ಲಕ್ಷಾಂತರ ಮಂದಿಗೆ ಅನುಕೂಲ ವಾಗುತ್ತಿದ್ದರೆ, ಮತ್ತೂಂದೆಡೆ ರೈಲ್ವೇಗಾಗಿ ಭೂಮಿ ಬಿಟ್ಟುಕೊಟ್ಟ ರೈಲು ಹಳಿಯ ಅಕ್ಕಪಕ್ಕದ ಕೆಲವು ಮಂದಿ ಮಾತ್ರ ನಿತ್ಯ ಸಮಸ್ಯೆ ಅನುಭವಿಸುವ ಪರಿಸ್ಥಿತಿ ಬಹುತೇಕ ಭಾಗದಲ್ಲಿದೆ. ಇದರಂತೆ, ಮಂಗಳೂರು ಪಾಲಿಕೆ ವ್ಯಾಪ್ತಿಯ ಕುಡುಪು ಸಮೀಪದ ಮುಂಡ್ರೇಲ್, ಪಂಜಿರೇಲ್ ಭಾಗದ ಜನರು ಕೂಡ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ!
ಈ ವ್ಯಾಪ್ತಿಯಲ್ಲಿ ಹಾದುಹೋಗಿರುವ ರೈಲು ಹಳಿಯ ಸಮೀಪ ಸಮರ್ಪಕ ರಸ್ತೆ ಇಲ್ಲದೆ ಸ್ಥಳೀಯರಿಗೆ ಸಂಚಾರ ಸಮಸ್ಯೆ ಆಗಿದೆ. ಇರುವ ಒಂದು ಮಣ್ಣಿನ ರಸ್ತೆಯು ಮಳೆಗಾಲದಲ್ಲಿ ಕೆಸರುಮಯವಾಗುತ್ತದೆ. ರಸ್ತೆ ಅಭಿವೃದ್ಧಿ ಬಗ್ಗೆ ರೈಲ್ವೇ ತಕರಾರು ಮಾಡಿದರೆ ಸ್ಥಳೀಯಾಡಳಿತ ಕೂಡ ಏನೂ ಮಾಡಲಾಗದೆ ಮೌನಕ್ಕೆ ಜಾರಿದೆ. ಪರಿಣಾಮವಾಗಿ ಸ್ಥಳೀಯರಿಗೆ ಸಂಚಾರ ಸಮಸ್ಯೆ ಇಲ್ಲಿ ನಿತ್ಯದ ಪಾಡು!
ಪಂಜಿರೇಲ್ ಭಾಗದಿಂದ ಕುಡುಪುವಿಗೆ ತೆರಳಲು ಇರುವುದು ಸುಮಾರು 3 ಕಿ.ಮೀ. ಮಾತ್ರ. ಆದರೆ, ಇಲ್ಲಿ ರೈಲು ಹಳಿ ಇರುವ ಕಾರಣದಿಂದ ಕಾರು/ಘನ ವಾಹನ ಸಂಚರಿಸಲು ಆಗುವುದಿಲ್ಲ. ಬದಲಾಗಿ, ಅವರು ಶಕ್ತಿನಗರಕ್ಕೆ ತೆರಳಿ ಸುತ್ತುಬಳಸಿ ಕುಡುಪುವಿಗೆ ಬರಬೇಕು. ಮುಂಡ್ರೇಲ್ ಭಾಗದವರು ಶಕ್ತಿನಗರಕ್ಕೆ ಹೋಗಲು ಕೂಡ ಇದೇ ಪರಿಸ್ಥಿತಿ. ಸದ್ಯ ಇಲ್ಲೊಂದು ರೈಲ್ವೇ ಅಂಡರ್‌ಪಾಸ್ ಇದೆ. ಮಳೆ ನೀರು ಹರಿಯಲು ಇರುವ ಅಂಡರ್‌ಪಾಸ್‌ನಲ್ಲಿ ದ್ವಿಚಕ್ರ ವಾಹನಗಳು ಮಾತ್ರ ತೆರಳುತ್ತಿವೆ.
ಅಂಡರ್‌ಪಾಸ್ ಆದ ಬಳಿಕ ಎರಡು ಕಡೆಯಲ್ಲಿಯೂ ಎತ್ತರ-ತಗ್ಗು ರಸ್ತೆಯಿಂದ ಮಳೆಗಾಲದಲ್ಲಿ ಇಲ್ಲಿ ಸಂಚಾರವೂ ಸಂಕಷ್ಟ! ಕೃಷಿ ಪರಿಕರ ಕೊಂಡೊಯ್ಯಲು, ವಿದ್ಯಾರ್ಥಿಗಳು, ಹಿರಿಯರು ನಡೆದುಕೊಂಡು ಹೋಗಲು ಆಗದ ಪರಿಸ್ಥಿತಿ ಇಲ್ಲಿನದ್ದಾಗಿದೆ. ಮನವಿಗಳನ್ನು ನೀಡಿದರೂ ಇನ್ನೂ ಪರಿಹಾರ ದೊರೆತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಸಿರಿಲ್ ಫೆರ್ನಾಂಡಿಸ್.
“ಪಂಜಿರೇಲ್ ಭಾಗದಿಂದ ಗುಡ್ಡೆಚಾವಡಿ ಮನೆ ಇರುವ ಭಾಗದ 750 ಮೀ.ಉದ್ದದ ರಸ್ತೆಗೆ ಇನ್ನೂ ಡಾಮರು ಭಾಗ್ಯ ದೊರೆತಿಲ್ಲ. ಮಳೆಗಾಲದಲ್ಲಿ ಕೆಸರು ತುಂಬಿದ ರಸ್ತೆಯಲ್ಲಿ ಸಂಚರಿಸಲು ಆಗುವುದಿಲ್ಲ’ ಎನ್ನುತ್ತಾರೆ ಕುಡುಪು ದೇಗುಲದ ಪವಿತ್ರಪಾಣಿ ಬಾಲಕೃಷ್ಣ ಕಾರಂತ.
ಕುಡುಪು ಸಮೀಪದ ಮುಂಡ್ರೇಲ್, ಪಂಜಿರೇಲ್ ಭಾಗದಲ್ಲಿ ರೈಲ್ವೇಯಿಂದ ಕೆಲವೊಂದು ಸಮಸ್ಯೆಗಳಾಗಿದ್ದು, ಈ ಬಗ್ಗೆ ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿಗೂ ಸಮಸ್ಯೆಯಾಗಿದೆ. ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಕರೆತಂದು ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರ ನೀಡಲಾಗುವುದು. ಆ ಮೂಲಕ ರೈಲ್ವೇ ಅಧಿಕಾರಿಗಳ ಗಮನಸೆಳೆಯಲು ಪ್ರಯತ್ನಿಸಲಾಗುವುದು.
-ಭಾಸ್ಕರ್ ಕೆ., ಪಾಲಿಕೆ ಸದಸ್ಯರು, ಮನಪಾ
ಇಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಡುವಂತೆ ಹಾಗೂ ರೈಲ್ವೇಗಾಗಿ ಭೂಮಿ ಕೊಟ್ಟವರ ನಿತ್ಯದ ಸಮಸ್ಯೆಯನ್ನು ಸರಿಮಾಡಿಕೊಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರಬರೆಯಲಾಗಿದೆ. ರೈಲ್ವೇ ಇಲಾಖೆ ಯಿಂದ ಇದಕ್ಕೆ ಕೇವಲ ಪತ್ರದಲ್ಲಿ ಉತ್ತರ ಬಂದಿದೆ ಹೊರತು, ಪರಿಹಾರ ಇನ್ನೂ ಆಗಿಲ್ಲ. ಸ್ಥಳೀಯ ಆಡಳಿತ ವ್ಯವಸ್ಥೆ ಹಾಗೂ ರೈಲ್ವೇ ಇಲಾಖೆಯು ಸ್ಥಳೀಯರ ಸಮಸ್ಯೆಗೆ ಇನ್ನಾದರೂ ಕಿವಿಯಾಗಬೇಕಿದೆ.
-ಕೃಷ್ಣ ಕಾರಂತ, ಸ್ಥಳೀಯರು
-ದಿನೇಶ್ ಇರಾ