ಹುಬ್ಬಳ್ಳಿ: ರಾಜ್ಯದಲ್ಲಿ ಮೈತ್ರಿ ಸರಕಾರ ತೆರಿಗೆ ಹಣ ಲೂಟಿ, ವರ್ಗಾವಣೆ ದಂಧೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದೆ. ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ಈ ಸರಕಾರ ರಾಜ್ಯದ ಅಭಿವೃದ್ಧಿಗೆ ಕಂಟಕವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಮ್ಮಿಶ್ರ ಸರಕಾರ ವಿರುದ್ಧ ವಾಗ್ಧಾಳಿ ನಡೆಸಿದರು.
ಅಪ್ಪ-ಮಕ್ಕಳಿಂದ ಮೋಸ: ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ನಾನು. 20 ತಿಂಗಳು ಅಧಿಕಾರ ನಡೆಸಲು ಎಲ್ಲಾ ರೀತಿಯಿಂದ ಸಹಕಾರ ನೀಡಿದ್ದೆ. ಆದರೆ ನನಗೆ ಅಧಿಕಾರ ಬಿಟ್ಟು ಕೊಡುವಾಗ ಹಲವು ಷರತ್ತುಗಳು ಹಾಕಿದರು.ಆ ಷರತ್ತುಗಳಿಗೆ ಒಪ್ಪಿಗೆ ನೀಡದೆ ಅಧಿಕಾರಕ್ಕೆ ಅಂಟಿಕೊಳ್ಳದೆ ರಾಜೀನಾಮೆ ನೀಡಿದೆ. ಅಪ್ಪ-ಮಕ್ಕಳು ಅಂದು ನನಗೆ ಮೋಸ ಮಾಡಿದರು. ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿ ಇಂದು ರಾಜ್ಯದ ರೈತರನ್ನು ವಂಚಿಸುತ್ತಿದ್ದಾರೆಂದು ಟೀಕಿಸಿದರು.
ಹಣ-ತೋಳ್ಬಲ ನಡೆಯಲ್ಲ: ಹಣ, ಅಧಿಕಾರ ಬಲದಿಂದ ಈ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಿಲ್ಲ. ಇದಕ್ಕೆ ನಾವು ಆಸ್ಪದ ಕೊಡಲ್ಲ. ಮೇಲಾಗಿ ಈ ಕ್ಷೇತ್ರದ ಜನರು ಪ್ರಬುದ್ಧರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ನೋಡಿ ಮತದಾರರು ಮತ ನೀಡುತ್ತಾರೆ. ರಾಜ್ಯದ ಅಭಿವೃದ್ಧಿ ಮರೆತಿರುವವರಿಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಯಾವ ನಾಯಕರು ಬಂದರೂ ಹಣ ಹಾಗೂ ಅಧಿಕಾರ ನಡೆಯಲ್ಲ ಎಂದರು.
ಚಿಕ್ಕನಗೌಡರ ಗೆಲುವು-ವಿಶ್ವಾಸ: ರಾಜ್ಯದಲ್ಲಿ 22 ಸಂಸದರು ಗೆಲವು ಸಾಧಿಸುವ ಮೂಲಕ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುವುದು ಖಚಿತ. ಲೋಕಸಭೆ ಚುನಾವಣೆ ಫಲಿತಾಂಶ ನಂತರ ಎರಡೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ನಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದರು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ಎಚ್.ಡಿ.ದೇವೇಗೌಡ, ಕೋಲಾರದಲ್ಲಿ ಕೆ.ಎಚ್.ಮುನಿಯಪ್ಪ, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಸೇರಿದಂತೆ ಪ್ರಮುಖ ನಾಯಕರು ಸೋಲುತ್ತಾರೆ. ಕುಂದಗೋಳದಲ್ಲಿ ಎಸ್.ಐ.ಚಿಕ್ಕನಗೌಡರ ಅವರು 25 ಸಾವಿರ ಮತಗಳಿಂದ ಗೆಲುವು ಸಾಧಿಸಲಿದ್ದಾರೆಂದು ಯಡಿಯೂರಪ್ಪ ಹೇಳಿದರು.
Advertisement
ಕುಂದಗೋಳದಲ್ಲಿ ರವಿವಾರ ನಡೆದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ನಾಯಕರು ಅಧಿಕಾರ ಹಪಾಹಪಿತನದಿಂದ ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ನಮ್ಮ ಆಡಳಿತಾವಧಿಯಲ್ಲಿ ಹಣಕಾಸು ತೊಂದರೆಯಾಗಲಿಲ್ಲ. ಆದರೆ ಇಂದಿನ ಸರಕಾರ ಆರ್ಥಿಕ ಕೊರತೆಯಿಂದ ಬಳಲುತ್ತಿದೆ. ತೆರಿಗೆ ರೂಪದಲ್ಲಿ ಸಾಕಷ್ಟು ಹಣ ಹರಿದು ಬರುತ್ತಿದ್ದು ಅದು ಅಧಿಕಾರ ನಡೆಸುತ್ತಿರುವವರ ಮನೆ ಸೇರುತ್ತಿದೆ. ಇದೊಂದು ಭ್ರಷ್ಟಾಚಾರ ಸರಕಾರವಾಗಿದೆ ಎಂದು ಆರೋಪಿಸಿದರು.
Related Articles
Advertisement
ಬಿಜೆಪಿ ಮುಖಂಡರಾದ ರೇಣುಕಾಚಾರ್ಯ, ಅಭಯ ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಕೋಟಾ ಶ್ರೀನಿವಾಸ ಪೂಜಾರ, ಪ್ರದೀಪ ಶೆಟ್ಟರ, ಮುಖಂಡರಾದ ಸಂಜಯ ಪಾಟೀಲ, ಮೋಹನ ಲಿಂಬಿಕಾಯಿ, ಮಹೇಶ ಟೆಂಗಿನಕಾಯಿ, ಈರಣ್ಣ ಜಡಿ, ಚೈತ್ರಾ ಶಿರೂರ ಇನ್ನಿತರರಿದ್ದರು.
ಕುಂದಗೋಳ ಕ್ಷೇತ್ರ ಅಭಿವೃದ್ಧಿ ಗೊಳಿಸಿ ಶಿವಳ್ಳಿ ಆತ್ಮಕ್ಕೆ ಶಾಂತಿ ಕೋರುತ್ತೇವೆ: ಈಶ್ವರಪ್ಪ
ಕಾಂಗ್ರೆಸ್ ಮಾತಿಗೆ ಮರುಳಾಗಬೇಡಿ:
ಹುಬ್ಬಳ್ಳಿ: ಕುಂದಗೋಳ ಕ್ಷೇತ್ರ ಅಭಿವೃದ್ಧಿಗೊಳಿಸುವ ಮೂಲಕ ಮಾಜಿ ಸಚಿವ ಸಿ.ಎಸ್.ಶಿವಳ್ಳಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಆದರೆ ಭಾವನಾತ್ಮಕವಾಗಿ ವಂಚಿಸುವ ಕಾಂಗ್ರೆಸ್ಸಿನವರ ಮಾತಿಗೆ ಕ್ಷೇತ್ರದ ಮತದಾರರು ಮಾರು ಹೋಗಬಾರದೆಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಕುಂದಗೋಳದಲ್ಲಿ ಬೂತ್‌ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಧರ್ಮ, ಜಾತಿಗಳೆನ್ನದೇ ಸರ್ವರ ಅಭಿವೃದ್ಧಿಗೆ ಬಿಜೆಪಿ ಶ್ರಮಿಸಿದೆ. ಎಲ್ಲಾ ಸಮಾಜಗಳಿಗೆ ಹಾಗೂ ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ನಮಗಿಂತ ಹೆಚ್ಚಿನ ಅನುದಾನ ನೀಡಿರುವುದನ್ನು ಕಾಂಗ್ರೆಸ್ ನಾಯಕರು ಬಹಿರಂಗಪಡಿಸಿದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಮಾತ್ರ ರೈತರ, ಬಡವರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡಿ ಒಂದು ಕಡೆ ಮೆನೆಗೆ ಕಳುಹಿಸಿದರು. ಇವರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ಸಿನಲ್ಲಿ ಕಸರತ್ತು ನಡೆದಿದೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಲು ಎಸ್.ಐ.ಚಿಕ್ಕನಗೌಡರ ಅವರನ್ನು ಗೆಲ್ಲಿಸಬೇಕು. ಕುರುಬರು ಕೈ ಹಿಡಿದರೆ ನಾನು ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳಿಕೊಂಡು ಸಿದ್ದರಾಮಯ್ಯ ಓಡಾಡುತ್ತಿದ್ದಾರೆ. ಕುರುಬರು ಹಿಂದೆ ನಿಮ್ಮ ಮಾತಿಗೆ ಮರುಳಾಗಿದ್ದ ನಿಜ. ಆದರೆ ಇದೀಗ ಕುರುಬ ಸಮಾಜ ಎಚ್ಚೆತ್ತುಕೊಂಡಿದ್ದಾರೆ. ನಿಮ್ಮ ಬಣ್ಣದ ಮಾತಿಗೆ ಮೋಸ ಹೋಗುವುದಿಲ್ಲ. ಹಿಂದುಳಿದ ವರ್ಗದ ನಾಯಕ ಎಂಬ ಡೋಂಗಿತನ ನಡೆಯೋದಿಲ್ಲ. ನಾನೂ ಹಿಂದುಳಿದ ನಾಯಕ. ಆದರೆ ಅವರಂಥ ಭಾಷೆ ಬಳಸಲು ಬರುವುದಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದು ಹೇಳಿದರು.
ಪುಲ್ವಾಮಾದಲ್ಲಿ ನಮ್ಮ 40 ಯೋಧರನ್ನು ಹತ್ಯೆಗೈದ 12 ನೇ ದಿನಕ್ಕೆ ನೂರಾರು ಉಗ್ರರನ್ನು ಬಲಿ ತೆಗೆದುಕೊಂಡ ಜನ ನಾವು. ಇನ್ನೂ ಸಿದ್ದರಾಮಯ್ಯ ನಮಗೆ ಯಾವ ಲೆಕ್ಕಾರೀ. 500 ಕೋಟಿ ರೂ. ಬೇನಾಮಿ ಆಸ್ತಿ ಮಾಡಿ ಅಲೆದಾಡುತ್ತಿರುವ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಮತ ಹಾಕಬೇಕಾ. ನಾನು ಈ ಕ್ಷೇತ್ರದ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಈ ಕ್ಷೇತ್ರದ ಜನರು ಬಹಳ ಪ್ರಬುದ್ಧರಾಗಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಾಯಕರ ಬಣ್ಣದ ಮಾತಿಗೆ ಮರಳಾಗುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.
ಮತ್ತೆ ಜಗದೀಶ ಶೆಟ್ಟರ ಕಡೆಗಣನೆ?:
ಪ್ರತಿ ಬೂತ್‌ಗಳಲ್ಲಿ ನಮಗೆ ಬಾರದ 10-15 ಮತಗಳನ್ನು ಬಿಜೆಪಿ ಬರುವಂತೆ ನೋಡಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಹೊಂದಿರುವ ಎಸ್.ಐ.ಚಿಕ್ಕನಗೌಡರ ಅವರನ್ನು ಆಯ್ಕೆ ಮಾಡಬೇಕು. ಪ್ರತಿ ಮತವೂ ಮುಖ್ಯವಾಗಿದೆ. ಹಿಂದಿನ ಚುನಾವಣೆಯಲ್ಲಿ ಸ್ವಲ್ಪ ಮೈ ಮರೆತಿದ್ದಕ್ಕೆ ಅಲ್ಪ ಮತಗಳ ಅಂತರದಿಂದ ಸೋಲಬೇಕಾಯಿತು. ಈ ಸೋಲು ಕಂಡ ಎಸ್.ಐ. ಚಿಕ್ಕನಗೌಡರ ಬಗ್ಗೆ ಕ್ಷೇತ್ರದ ಜನರಲ್ಲಿ ಅನುಕಂಪವಿದೆ ಎಂದು ಯಡಿಯೂರಪ್ಪ ಹೇಳಿದರು.ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ದುರಹಂಕಾರ ಹೆಚ್ಚಾಗಿದೆ. ಜನರ ಬಗ್ಗೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಜನ ನನಗೆ ಮತ ಹಾಕಿಲ್ಲ. ಆದ್ದರಿಂದ ಅವರಿಗೆ ನನ್ನನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಹೇಳಿದರೆ, ಕರಾವಳಿ ಜನರಿಗೆ ತಿಳಿವಳಿಕೆ ಕಡಿಮೆಯಿದೆ. ನಾನು ಮುಖ್ಯಮಂತ್ರಿಯಾಗಿರುವುದಕ್ಕೆ ಕಾರಣ ರಾಹುಲ್ ಗಾಂಧಿ. ನನ್ನ ನಿಷ್ಠೆ ಏನಿದ್ದರೂ ರಾಹುಲ್ ಗಾಂಧಿಗೆ ಮಾತ್ರ ಎಂದು ಕುಮಾರಸ್ವಾಮಿ ಹೇಳಿದ್ದಾರೆಂದು ಬಿ.ಎಸ್.ಯಡಿಯೂರಪ್ಪ ಹೇಳಿದರು. ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸುವ ಮುನ್ನ ನಂತರ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ ಇಬ್ಬರೂ ಮಾತನಾಡುತ್ತಾರೆ ನಂತರ ಪ್ರಶ್ನೆ ಕೇಳಿ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಕುರಿತಾಗಿ ಏನನ್ನೂ ಹೇಳಲಿಲ್ಲ. ಕಾರಜೋಳ, ಈಶ್ವರಪ್ಪ ಮಾತು ಮುಗಿಸಿದ ನಂತರ ಜಗದೀಶ ಶೆಟ್ಟರ ಸ್ವಯಂ ಪ್ರೇರಿತರಾಗಿ ಈಶ್ವರಪ್ಪ ಅವರಿಂದ ಮೈಕ್ ಪಡೆದುಕೊಂಡು ಮಾತನಾಡಿದರು. ಹಿಂದೆ ಪ್ರಧಾನಿ ನರೇಂದ್ರ ಮೋದಿ ನಗರಕ್ಕಾಗಮಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಎರಡನೇ ಸಾಲಿನಲ್ಲಿ ಆಸೀನರಾಗುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.