ಬೆಂಗಳೂರು: ಇದುವರೆಗೆ ಹೈಕಮಾಂಡ್ ನಿಂದ ಸಂಪುಟ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ದೆಹಲಿಗೆ ಹೋಗಿ ನಡ್ಡಾ ಮತ್ತು ಅಮಿತ್ ಷಾ ಅವರ ಭೇಟಿ ಮಾಡಿದರೆ ಆ ವಿಚಾರ ಬರಬಹುದು. ಆಗ ಅದರ ಬಗ್ಗೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂದು ಮಧ್ಯಾಹ್ನ ದೆಹಲಿಗೆ ಹೋಗುತ್ತಿದ್ದೇನೆ. ಸಂಜೆ ಜಲಶಕ್ತಿ ಸಚಿವರ ಭೇಟಿ ಮಾಡಿ ಮೇಕೆದಾಟು, ಮಹದಾಯಿ, ಅಪ್ಪರ್ ಕೃಷ್ಣ, ಅಪ್ಪರ್ ಭದ್ರ ಬಗ್ಗೆ ಚರ್ಚೆ ಮಾಡಿ, ಆಡಳಿತಾತ್ಮಕ ಕೆಲಸಗಳನ್ನು ಪೂರ್ಣಗೊಳಿಸುವ ಬಗ್ಗೆ ಒತ್ತಾಯ ಮಾಡುತ್ತೇನೆ ಎಂದರು.
ಜಿಎಸ್‍ಟಿ ಸಂಬಂಧ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಭೇಟಿ ಮಾಡುತ್ತೇನೆ. ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ವಿಚಾರವಾಗಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುತ್ತೇನೆ. ನಡ್ಡಾ, ಅಮಿತ್ ಷಾ ಭೇಟಿಗೂ ಅವಕಾಶ ಕೇಳಿದ್ದೇನೆ. ಅವರು ಅವಕಾಶ ಕೊಟ್ಟರೆ, ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ದೇವಸ್ಥಾನ, ಮಸೀದಿಗಳಲ್ಲಿ ಧ್ವನಿ ವರ್ಧಕ ಹಾಕುವುದರಿಂದ ಯಾರಿಗೆ ತೊಂದರೆ ಆಗಿದೆ?: ಸಿದ್ದರಾಮಯ್ಯ
ರಿಮೋಟ್ ಕಂಟ್ರೋಲ್ ಸಿಎಂ ಎಂಬ ಹೆಚ್.ಡಿ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ಪ್ರತಿಭಟನೆ ಮಾಡಲು ಅವರಿಗೆ ಹಕ್ಕು ಇದೆ. ಆದರೆ ಆಧಾರ ರಹಿತ ಆರೋಪಕ್ಕೆ ನಾನು ಉತ್ತರ ಕೊಡುವುದಿಲ್ಲ. ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಕರ್ನಾಟಕ ಜನತೆಯ ಆಶೀರ್ವಾದ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ಕೊಡುವ ವಿಶ್ವಾಸ ಇದೆ. ಕೆಲವು ಹೇಳಿಕೆಗಳಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದರು.