Advertisement

ಕೆಂಬಣ್ಣಕ್ಕೆ ತಿರುಗಿದ ಕೆಂಪುಹೊಳೆ

02:05 AM May 16, 2019 | Sriram |

ಸುಬ್ರಹ್ಮಣ್ಯ: ಸ್ಫಟಿಕದಂತೆ ಶುದ್ಧವಾಗಿ ಪಶ್ಚಿಮ ಘಟ್ಟ ಪ್ರದೇಶದಿಂದ ಹರಿದು ಬರುತ್ತಿದ್ದ ಕೆಂಪುಹೊಳೆ ನದಿ ನೀರು ಈಗ ಕೆಂಬಣ್ಣಕ್ಕೆ ಹರಿಯುತ್ತಿದೆ. ಇದಕ್ಕೆ ಕಾರಣ ಎತ್ತಿನಹೊಳೆ ಕಾರಣವೇ ಎಂಬ ಅನುಮಾನವಿದೆ. ನೀರಿನ ಗುಣಮಟ್ಟದ ಬಗ್ಗೆ ಆತಂಕ ಎದುರಾಗಿದ್ದು, ಈ ನೀರನ್ನೇ ಜೀವನಾಧಾರವಾಗಿ ಬಳಸುತ್ತಿರುವ ನದಿ ಪಾತ್ರದ ಜನತೆ ಆತಂಕಗೊಂಡಿದ್ದಾರೆ.

Advertisement

ಪಯಸ್ವಿನಿ ನೀರು ಕೂಡ ಕೆಂಪಾಗಿದ್ದು, ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ಕಾರಣ ಎನ್ನಲಾ ಗಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಭಾರೀ ಹೂಳು ವಿವಿಧ ವಿದ್ಯುತ್‌ ಘಟಕಗಳ ಡ್ಯಾಂನಲ್ಲಿ ಸಂಗ್ರಹಗೊಂಡಿದೆ. ಡ್ಯಾಂಗಳಲ್ಲಿ ನೀರಿನ ಮಟ್ಟಇಳಿಮುಖ ಗೊಂಡಿದ್ದು, ಹೂಳು ತುಂಬಿದ ಕೆಸರು ಮಿಶ್ರಿತ ನೀರನ್ನು ಕೆಳಕ್ಕೆ ಹರಿಯಬಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದೇ ಕಲುಷಿತ ನೀರು ಈಗ ಜಿಲ್ಲೆಯ ಪ್ರಮುಖ ನದಿಗಳನ್ನು ಸೇರುತ್ತಿದೆ.

ಮಿನಿ ವಿದ್ಯುತ್‌ ಘಟಕಗಳ ಹೆಸರಿನಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಹಲವೆಡೆ ಭೂಮಿಯನ್ನು ಅಗೆಯುವ ಕಾಮಗಾರಿ ನಡೆಯುತ್ತಿವೆೆ. ಶಿರಾಡಿ ಘಾಟಿಯ ಮಧ್ಯೆ ಹರಿಯುವ ಕೆಂಪು ಹೊಳೆಯ ನಡುವೆ ಎಂಟಕ್ಕೂ ಹೆಚ್ಚು ಕಡೆ ಕಿರು ಜಲ ವಿದ್ಯುತ್‌ ಘಟಕಗಳು ಕಾರ್ಯಾಚರಿಸುತ್ತಿವೆ. ಮತ್ತಷ್ಟು ಸೇರ್ಪಡೆಗೊಳ್ಳುತ್ತಿವೆ. ಎತ್ತಿನಹೊಳೆಯ ಕಾಮಗಾರಿಯ ಮಣ್ಣು, ಡ್ಯಾಂಗಳಿಂದ ಬಿಡುವ ನೀರು ಸೇರಿ ನದಿಯನ್ನು ಮಲಿನ ಗೊಳಿಸುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶದಿಂದ ಹರಿದು ಬರುವ ಕೆಂಪುಹೊಳೆ, ಹೊಂಗಡಹಳ್ಳ, ಅಡ್ಡಹೊಳೆ ಮೊದಲಾದ ಉಪನದಿಗಳು ಕುಮಾರಧಾರಾ, ನೇತ್ರಾವತಿ ನದಿಗಳನ್ನು ಸೇರುತ್ತಿವೆ. ಗುಂಡ್ಯ, ಉಪ್ಪಿನಂಗಡಿ, ಶಿರಾಡಿ ಮೊದಲಾದ ಭಾಗಗಳ ನದಿ ಪಾತ್ರದ ಜನತೆ ಕೊಳಚೆ ನೀರನ್ನೇ ಬಳಸುವ ಸ್ಥಿತಿಗೆ ತಲುಪಿದ್ದಾರೆ.

ಕ್ರಮ ಕೈಗೊಳ್ಳಬೇಕು
ಎತ್ತಿನಹೊಳೆ ಕಾಮಗಾರಿಯಿಂದ ಜಿಲ್ಲೆಯ ಜನತೆಗೆ ದ್ರೋಹವಾಗಿತ್ತು. ಈಗ ಕುಡಿಯುವ ನೀರಿಗೂ ವಿಷ ಬೆರೆಸಿ ಅನ್ಯಾಯ ಎಸಗುತ್ತಿದ್ದಾರೆ. ನದಿಗಳು ಕಲುಷಿತಗೊಂಡು ಬಳಕೆಯೇ ಸಾಧ್ಯವಾಗದ ಸ್ಥಿತಿ ಬಂದೊದಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದಲ್ಲಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ.
– ಕಿಶೋರ್‌ ಶಿರಾಡಿ, ಅಧ್ಯಕ್ಷರು, ಮಲೆನಾಡು ರೈತ ಹಿತರಕ್ಷಣ ವೇದಿಕೆ

Advertisement

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next