Advertisement

ಕಲ್ಸಂಕ ತೋಡಿನ ಹೂಳು ತೆಗೆಯದೆ ಕೃತಕ ನೆರೆ ಹಾವಳಿ

02:15 AM Jun 02, 2018 | Karthik A |

ಉಡುಪಿ: ಮಳೆನೀರಿನ ಸುಗಮ ಹರಿವಿಗೆ ಅವಕಾಶ ಮಾಡಿಕೊಡುತ್ತಿದ್ದ ಕಲ್ಸಂಕ ತೋಡು ಈ ಬಾರಿ ಮುಂಗಾರು ಪೂರ್ವ ಮಳೆಗೇ ತನ್ನ ಪ್ರತಾಪ ತೋರಿಸಿದೆ. ಜತೆಗೆ ಮಳೆಗಾಲಕ್ಕೆ ಎಚ್ಚರ ಎಂಬ ಸಂದೇಶವನ್ನೂ ರವಾನಿಸಿದೆ. ಮಣಿಪಾಲದ ಮಣ್ಣಪಳ್ಳದಿಂದ ಮಲ್ಪೆ ಕಲ್ಮಾಡಿವರೆಗೆ ಸರಿಸುಮಾರು 10 ಕಿ.ಮೀ. ಉದ್ದಕ್ಕಿರುವ, ಉಡುಪಿಯ ರಾಜಕಾಲುವೆ ಎಂದೇ ಪರಿಗಣಿತವಾದ ಈ ತೋಡು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಸಮರ್ಪಕ ರೀತಿಯಲ್ಲಿ ಬೆಳೆದಿರುವ ನಗರ, ಸ್ಥಳೀಯಾಡಳಿತದ ನಿರ್ಲಕ್ಷ್ಯ, ಜನರ ಬೇಜವಾಬ್ದಾರಿಯಿಂದಾಗಿ ಕಲ್ಸಂಕ ತೋಡು ಕುಖ್ಯಾತಿಗೆ ಒಳಗಾಗುತ್ತಿದೆ.

Advertisement

ಮಣ್ಣಪಳ್ಳ ಕೆರೆಯಲ್ಲಿ ಹೊರಹರಿವು ಆರಂಭವಾಗಿ, ಆ ನೀರು ಹರಿಯುತ್ತಾ ಇಂದ್ರಾಳಿ- ಕುಂಜಿಬೆಟ್ಟು- ಕಲ್ಸಂಕ- ಮಠದಬೆಟ್ಟು- ನಿಟ್ಟೂರು- ಕೊಡವೂರು- ಕಲ್ಮಾಡಿ ಮೂಲಕ ಸಮುದ್ರ ಸೇರುತ್ತದೆ. ಹಿಂದೆಯೂ ಮಳೆನೀರು ಇದರಲ್ಲೇ ಹರಿಯುತ್ತಿದ್ದರೂ ಸಮಸ್ಯೆ ಗಂಭೀರವಾಗಿರಲಿಲ್ಲ. ಕಾರಣ ನೀರಿನೊಂದಿಗೆ ಈಗ ತ್ಯಾಜ್ಯವೂ ಸೇರಿಕೊಂಡು ಸಮಸ್ಯೆಯಾಗುತ್ತಿದೆ. ಕಲ್ಸಂಕಕ್ಕಿಂತ ಮೊದಲು ಮೂರ್‍ನಾಲ್ಕು ಕಿರು ತೋಡುಗಳು ಇದನ್ನು ಕೂಡಿಕೊಳ್ಳುತ್ತಿದ್ದು, ಅವುಗಳಲ್ಲಿ ಹೆಚ್ಚಾಗಿ ಕೊಳಚೆ ನೀರೇ ಬರುತ್ತದೆ.


ಸ್ವಚ್ಛ ನೀರು ಮಲಿನಯುಕ್ತ!

ಇಂದ್ರಾಳಿಯ ಅನಂತರ ಕಲ್ಸಂಕ ತೋಡಿನ ನೀರು ಮಲಿನಗೊಳ್ಳಲು ಆರಂಭಿಸುತ್ತದೆ. ಬೈಲಕೆರೆ, ರಾಜಾಂಗಣ ಪರಿಸರದ ಬಳಿಕ ನೀರಿನ ಬಣ್ಣವೇ ಬದಲಾಗುವಷ್ಟು ಕಲುಷಿತವಾಗುತ್ತದೆ. ತ್ಯಾಜ್ಯ ಸೇರಿಕೊಂಡು ಸಾಮಾನ್ಯ ಮಳೆಗಿಂತ ತುಸು ಹೆಚ್ಚು ಮಳೆಬಂದರೂ ತೋಡಿನ ನೀರು ಪಕ್ಕದ ಮನೆಗಳಿಗೆ ಪ್ರವಹಿಸುತ್ತದೆ. ಕಲ್ಸಂಕ ಸೇತುವೆ ಮುಂದೆ ಗುಂಡಿಬೈಲಿನಲ್ಲಿ ಕುದುರೆ ಕಲ್ಸಂಕ ಎಂಬ ಇನ್ನೊಂದು ತೋಡು ಕೂಡ ಕಲ್ಸಂಕ ತೋಡನ್ನು ಸೇರುತ್ತದೆ. ಇದು ಕೂಡ ಸ್ವಚ್ಛವಾಗಿಲ್ಲ.

ಮನೆ ಕೊಳಚೆ ತೋಡಿಗೆ
ತೋಡಿನ ಅಕ್ಕಪಕ್ಕದ ಕೆಲವು ಮನೆಗಳು, ವಸತಿ ಸಂಕೀರ್ಣಗಳ ಕೊಳಚೆ ನೀರನ್ನು ಕೂಡ ತೋಡಿಗೆ ಬಿಡಲಾಗುತ್ತದೆ ಎಂಬ ಆರೋಪಗಳಿವೆ. ಆದರೆ ‘ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಕಟ್ಟಡಗಳ ಕೊಳಚೆ ನೀರು ಸಂಪರ್ಕವನ್ನು ಒಳಚರಂಡಿಗೆ ನೀಡಲಾಗಿದೆ. ಮಳೆನೀರು ಹರಿಯುವ ಚರಂಡಿಯ ಕೆಲಸವನ್ನು ನಡೆಸಲಾಗುತ್ತಿದೆ. ಬೈಕ್‌, ವಾಹನಗಳಲ್ಲಿ ಬರುವ ಕೆಲವರು ಗೋಣಿ ಚೀಲಗಳಲ್ಲಿಯೇ ಕಸ ತಂದು ಹಾಕುತ್ತಾರೆ’ ಎನ್ನುತ್ತಾರೆ ಸ್ಥಳೀಯ ನಗರಸಭಾ ಸದಸ್ಯರು. ರಾಜಾಂಗಣ ಪಾರ್ಕಿಂಗ್‌ ಪ್ರದೇಶ, ವಿದ್ಯೋದಯ, ಬೈಲಕೆರೆ ಭಾಗದಲ್ಲಿ ಕೃತಕ ನೆರೆಯಾಗಲು ವಿಠ್ಠಲ ಮೇಸ್ತ್ರಿ ಅವರ ಮನೆಯ ಹಿಂಭಾಗದಿಂದ ಮುಕುಂದಕೃಪಾವರೆಗಿನ ಮಳೆ ನೀರು ಹರಿಯುವ ಚರಂಡಿ ಸರಿಪಡಿಸದಿರುವುದು ಕಾರಣವಾಗಿದೆ. ಅಲ್ಲಿಂದ ಕಲ್ಸಂಕ ತೋಡಿಗೆ ಸಂಪರ್ಕ ಸರಿಯಾಗಬೇಕು ಎನ್ನುತ್ತಾರೆ ಸ್ಥಳೀಯರು.


ಹೂಳೆತ್ತಿಲ್ಲ, ಸ್ವಚ್ಛ ಮಾಡಿಲ್ಲ 

ಪ್ರತಿ ವರ್ಷ ಕಲ್ಸಂಕ ತೋಡಿನಲ್ಲಿ ಹಿಟಾಚಿಯ ಮೂಲಕ ಹೂಳೆತ್ತುವ ಕೆಲಸ ನಡೆಯುತ್ತಿತ್ತು. ಅದು ಅಷ್ಟು ಸಮರ್ಪಕವಾಗಿ ನಡೆಯುತ್ತಿಲ್ಲವಾದರೂ ಕೆಲವು ಕಡೆ ನೀರು ಹರಿಯಲು ಇದ್ದ ತಡೆಗಳನ್ನಾದರೂ ತೆರವುಗೊಳಿಸುತ್ತಿತ್ತು. ಈ ಬಾರಿ ತೋಡನ್ನು ಸ್ವಚ್ಛಗೊಳಿಸುವ ಕೆಲಸವೇ ನಡೆದಿಲ್ಲ. ಅದರ ಪರಿಣಾಮದಿಂದ ಅಲ್ಲಲ್ಲಿ ಬ್ಲಾಕ್‌ ಆಗುತ್ತಿದೆ.
– ವಿಶ್ವನಾಥ್‌, ಸ್ಥಳೀಯ ನಿವಾಸಿ 

Advertisement

ನೀರು ವಾಪಸ್ಸಾಗುವ ಆತಂಕ 
ಕಲ್ಸಂಕ ತೋಡನ್ನು ಸರಿಯಾಗಿಟ್ಟುಕೊಂಡರೆ ಅಷ್ಟು ಸಮಸ್ಯೆಯಾಗದು. ರಾಜಾಂಗಣ ಪಾರ್ಕಿಂಗ್‌, ವಿದ್ಯೋದಯ ಬಳಿ ಸಮಸ್ಯೆಯಾಗಲು ಅಸಮರ್ಪಕ ಕಟ್ಟಡ ಕಾಮಗಾರಿಗಳು, ಮಳೆನೀರು ಚರಂಡಿಯನ್ನು ಸರಿಪಡಿಸದಿರುವುದು ಕಾರಣ.  ಮಳೆನೀರು ಚರಂಡಿಗಳನ್ನು ಕಾಂಕ್ರೀಟ್‌ನಿಂದ ನಿರ್ಮಿಸಿ ಅದಕ್ಕೆ ಸ್ಲಾéಬ್‌ ಹಾಕುವುದೇ ಉತ್ತಮ. ಬಡಗುಪೇಟೆ ಭಾಗದಲ್ಲಿ ಚರಂಡಿಗಳನ್ನು ಗುಂಡಿ ಮಾಡಿದರೆ ಕಲ್ಸಂಕ ತೋಡಿನ ನೀರೇ ವಾಪಸ್ಸು ಬರುವ ಆತಂಕವಿದೆ. ಹಾಗಾಗಿ ಕಲ್ಸಂಕ ತೋಡನ್ನೆ ಸರಿಪಡಿಸಬೇಕು. 
– ಶ್ಯಾಮ್‌ಪ್ರಸಾದ್‌ ಕುಡ್ವ,  ನಗರಸಭೆ ಸದಸ್ಯರು ತೆಂಕಪೇಟೆ ವಾರ್ಡ್‌

ಈಗ ನೆರೆ, ಬೇಸಗೆಯಲ್ಲಿ ಸೊಳ್ಳೆ
ಕಲ್ಸಂಕ ತೋಡಿನ ಆಚೆ ಈಚೆ ಇರುವ ತೋಡುಗಳು ಬ್ಲಾಕ್‌ ಆಗಿವೆ. ಎಲ್ಲರೂ ಖುಷಿಬಂದಂತೆ ಕಟ್ಟಡ ಮಾಡುತ್ತಾರೆ. ಮಳೆಗೆ ಇಲ್ಲಿ ನೀರು ತುಂಬುತ್ತದೆ. ಬೇಸಗೆಯಲ್ಲಿ ಸೊಳ್ಳೆಯ ತೊಂದರೆ. ಗಲೀಜು ಮಾಡುವವರು, ತೋಡು ಬಂದ್‌ ಮಾಡಲು ಕಾರಣ ಆಗಿರುವವರ ವಿರುದ್ಧವೂ ಕ್ರಮ ಆಗಬೇಕು.
– ಸುಶೀಲಾ, ಸ್ಥಳೀಯ ನಿವಾಸಿ

ತೋಡು ಕ್ಲೀನ್‌: ನೀತಿ ಸಂಹಿತೆ ಅಡ್ಡಿ 
ಹಿಂದೆ ಇಷ್ಟು ಮನೆ, ಕಟ್ಟಡಗಳು ಇರಲಿಲ್ಲ. ಹಾಗಾಗಿ ಕೆಲವು ಕಡೆ ನೀರಿಗೆ ತಡೆಯಾಗಿದೆ. ಕಲ್ಸಂಕ ತೋಡಿನ ಸೇತುವೆ ಬಳಿ ಈ ಬಾರಿ ಕೆಲಸ ಮಾಡಿದ್ದರಿಂದ ಬೈಲಕೆರೆಯಲ್ಲಿ ನೆರೆ ಹಾವಳಿ ಸ್ವಲ್ಪವಾದರೂ ಕಡಿಮೆಯಾಯಿತು. ಚುನಾವಣಾ ನೀತಿ ಸಂಹಿತೆಯಿಂದಾಗಿ ಈ ಬಾರಿ ಹಿಟಾಚಿಯಿಂದ ತೋಡು ಕ್ಲೀನ್‌ ಮಾಡಿಸಲು ಆಗಲಿಲ್ಲ. ಆದರೂ ಸಾಧ್ಯವಾದಷ್ಟು ಕಾರ್ಮಿಕರಿಂದ ಮಾಡಿಸಿದ್ದೇವೆ. ಕಲ್ಸಂಕದಿಂದ ಶಾರದಾ ಮಂಟಪ ಸೇತುವೆಯವರೆಗೆ 2 ಕೋ.ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವ ಕಾಮಗಾರಿ ಮಂಜೂರಾಗಿದೆ.
– ಶಶಿರಾಜ್‌ ಕುಂದರ್‌, ನಗರಸಭೆ ಸದಸ್ಯರು ತೆಂಕಪೇಟೆ ವಾರ್ಡ್‌

— ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next