Advertisement

ಕಾಡಾನೆ ಹಾವಳಿ: ಗ್ರಾಮಸ್ಥರ ಆತಂಕ

03:07 PM Jul 21, 2019 | Team Udayavani |

ಮೂಡಿಗೆರೆ: ತಾಲೂಕಿನ ಗುತ್ತಿಹಳ್ಳಿ ಮತ್ತು ಮೂಲರಹಳ್ಳಿ ಭಾಗಗಳಲ್ಲಿ ಕೆಲ ದಿನಗಳಿಂದ ನಾಲ್ಕು ಕಾಡಾನೆಗಳು ಬೀಡು ಬಿಟ್ಟಿದ್ದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಗ್ರಾಮದ ಮನೆಗಳ ಮೇಲೆ ದಾಳಿ ನಡೆಸಲು ಮುಂದಾಗಿರುವುದರಿಂದ ಸ್ಥಳೀಯರು ಕಂಗಾಲಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಕೂಡಲೇ ಇಲ್ಲಿಂದ ಸ್ಥಳಾಂತರಿಸಿ ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕೆಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕರು, ಕಳೆದ ಕೆಲವು ವರ್ಷಗಳಿಂದ ಅತಿವೃಷ್ಟಿ ಪೀಡಿತವಾದ ಈ ಭಾಗಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಹಾಗಾಗಿ, ಸರಿಯಾದ ಬೆಳೆ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೇ, ಇಲ್ಲಿ ಸಂಜೆ 6ಗಂಟೆ ನಂತರ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಕೃಷಿ ಕಾರ್ಯದಲ್ಲಿ ತೊಡಗಿದ್ದ ಇದೇ ಗ್ರಾಮದ ಯುವಕ ಸುನೀಲ್ನನ್ನು ಆನೆ ಹತ್ಯೆ ಮಾಡಿದ ಘಟನೆ ನಡೆದಿದೆ. ಹೀಗಾಗಿ, ಗ್ರಾಮಸ್ಥರು ಈ ಹಿಂದೆ ಅರಣ್ಯ ಇಲಾಖೆ ಮುಂದೆ ಆನೆ ಸ್ಥಳಾಂತರಿಸಲು ಆಗ್ರಹಿಸಿ ಧರಣಿ ನಡೆಸಿದ್ದರು ಎಂದು ತಿಳಿಸಿದರು.

ಆನೆ ಸ್ಥಳಾಂತರಿಸಬೇಕಾದ ಅರಣ್ಯ ಇಲಾಖೆಯವರು, ಧರಣಿ ನಡೆಸಲು ಬಂದಿದ್ದ ರೈತರ ಮೇಲೆ ಕೇಸು ದಾಖಲಿಸಿದ್ದರು. ನಂತರ ಕೇಸು ಹಿಂಪಡೆಯುವುದಾಗಿ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ರೈತರು ಪ್ರತಿಭಟನೆ ನಡೆಸದಂತೆ ಒತ್ತಡ ಹೇರಿದ್ದಲ್ಲದೇ ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದರು.

Advertisement

ಕಳೆದ ಮೂರ್‍ನಾಲ್ಕು ದಿನಗಳಿಂದ ಕಾಡಾನೆಗಳು ಗ್ರಾಮಕ್ಕೆ ಬಂದು ಮನೆಗಳಿಗೆ ಲಗ್ಗೆಯಿಟ್ಟು ಊರಿಗೆ ದಿಗ್ಬಂಧನ ಹಾಕಿವೆ. ಆದ್ದರಿಂದ, ಕೂಡಲೇ ಆನೆಗಳಿಂದ ಗ್ರಾಮಸ್ಥರಿಗೆ ಮುಕ್ತಿ ನೀಡಬೇಕೆಂದು ಆಗ್ರಹಿಸಿದರು.

ಮನೆ ಧ್ವಂಸ ಮಾಡಿದ ಕಾಡಾನೆಗಳು: ಗುತ್ತಿಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಗುರುವಾರ ಮತ್ತು ಶುಕ್ರವಾರ ರಾಮೇಗೌಡ, ಚಂದ್ರೇಗೌಡ ಮತ್ತು ಮಂಜುನಾಥ ಗೌಡರ ಮನೆಗಳಿಗೆ ನುಗ್ಗಿ, ಛಾವಣಿಗೆ ಹಾನಿ ಮಾಡಿವೆ. ಸುತ್ತಲಿನ ನಾಯಿ ಗೂಡು, ನೀರಿನ ತೊಟ್ಟಿ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿವೆ. ರಾತ್ರಿ ಸಮಯದಲ್ಲಿ ದೀಪ ಬೆಳಗಿಸಿದ ಕೂಡಲೇ ದಾಳಿ ಇಡುತ್ತಿದ್ದು, ಕಳೆದ ರಾತ್ರಿ ಚಂದ್ರೇಗೌಡರ ಆರ್‌ಸಿಸಿ ಮನೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸಿವೆ. ಹಾಗಾಗಿ, ಜೀವ ಭಯದಿಂದ ಊರನ್ನೇ ತೊರೆಯಬೇಕಾದ ಪರಿಸ್ಥಿತಿ ಬಂದಿದೆ. ಕಾಫಿ, ಅಡಕೆ, ಕಾಳುಮೆಣಸು, ಭತ್ತದ ಗದ್ದೆಗಳನ್ನು ಈಗಾಗಲೇ ಸಂಪೂರ್ಣ ನಾಶಪಡಿಸಿವೆ. ಮಳೆ ಮತ್ತು ಕಾಡುಪ್ರಾಣಿಗಳಿಂದ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಆದ್ದರಿಂದ, ಕಾಡಾನೆಗಳನ್ನು ಸ್ಥಳಾಂತರಿಸಿ, ಸರ್ಕಾರ ಸೂಕ್ತ ನಷ್ಟ ಪರಿಹಾರ ನೀಡಬೇಕು. ಆನೆಗಳಿಂದ ಕೂಡಲೇ ಮುಕ್ತಿ ನೀಡಬೇಕೆಂದು ಗ್ರಾಮಸ್ಥರಾದ ಗಿರೀಶ್‌ ಹಳ್ಳಿಬೈಲು, ವಿನಯ್‌, ಶಿವಕುಮಾರ್‌, ಸದಾಶಿವ, ವಿಜಯ್‌ ಮತ್ತಿತರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next