ಬೆಂಗಳೂರು: ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಉಪನ್ಯಾಸಕರ ವಿವಿಧ ಬೇಡಿಕ ಈಡೇರಿಸುವಂತೆ ಒತ್ತಾಯಿಸಿ ಮೇಲ್ಮನೆ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ರಾಜ್ಯ ಖಾಸಗಿ ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲಾ ಸಂಘಟನೆಗಳ ಒಕ್ಕೂಟ(ಕ್ಯಾಮ್ಸ್ ), ತಮ್ಮ ಸಮಸ್ಯೆಯ ಪಟ್ಟಿಯನ್ನು ಸದಸ್ಯರಿಗೆ ಸಲ್ಲಿಸಿದೆ.
ರಾಜ್ಯದ 18 ಸಾವಿರ ಖಾಸಗಿ ಶಾಲೆಗಳಲ್ಲಿ 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ಪ್ರಸ್ತುತ ಸ್ಥಿತಿಗತಿ ಆಧರಿಸಿ ಶುಲ್ಕ ಪರಿಷ್ಕರಣೆ ಮಾಡಬೇಕು, ನಿರ್ದಿಷ್ಟ ಸಮಯದೊಳಗೆ ಆರ್‌ಟಿಇ ಶುಲ್ಕ ಮರುಪಾವತಿ ಮಾಡಬೇಕು. ಹೊಸ ಶಾಲೆಗಳ ಪ್ರಸ್ತಾವನೆಯನ್ನು ನಿಯಮಾನುಸಾರವಾಗಿ ಪರಿಗಣಿಸಬೇಕೇ ಹೊರತು ಅವೈಜ್ಞಾನಿಕವಾಗಿ ಅನುಮತಿ ನೀಡಕೂಡದು. ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ರಾಜ್ಯಪಠ್ಯಕ್ರಮದ ಪುಸ್ತಕವನ್ನು ಪೂರೈಕೆ ಮಾಡಬೇಕು.
ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಇತ್ಯಾದಿ ಶಾಲೆಗಳಲ್ಲೇ ನೀಡುವ ಮಾದರಿಯಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗೂ ಈ ಅವಕಾಶ ನೀಡಬೇಕು.ಆರ್‌ಟಿಇ ಪಾಲಕ, ಪೋಷಕರ ಮತ್ತು ಸಂಘಟನೆಗಳ ಹೆಸರಿನಲ್ಲಿ ಖಾಸಗಿ ಶಾಲೆಗಳ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಬೇಕು. ಆರ್‌ಟಿಇ ಅನುದಾನ ಕಡಿತ ಮಾಡಬಾರದು.
ಖಾಸಗಿ ಶಾಲೆಗಳಲ್ಲಿ ಸಿಬ್ಬಂದಿಗೆ ಸರ್ಕಾರಿ ಉದ್ಯೋಗಿಗೆ ಸಮಾನಾದ ವೇತನ ನೀಡಬೇಕೆಂಬ ನಿರ್ಧಾರ ಸರಿಯಲ್ಲ. ಖಾಸಗಿ ಶಾಲೆಗಳ ನೋಂದಣಿ, ಮಾನ್ಯತೆ, ಮಾನ್ಯತೆ ನವೀಕರಣ ಆನ್‌ಲೈನ್‌ನಲ್ಲೇ ಮಾಡಬೇಕು ಮತ್ತು ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಸ್ತಕ್ಷೇಪ ನಿಲ್ಲಿಸವ ಬಗ್ಗೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲು ಕೋರಿಕೊಂಡಿದ್ದಾರೆ.