Advertisement

ಕುಂದೇಶ್ವರದಲ್ಲಿ ಚರಂಡಿ ನೀರು ಒಳಬರುವ ಆತಂಕ!

02:30 AM Jun 20, 2018 | Team Udayavani |

ಕುಂದಾಪುರ: ನಗರದ ಮುಖ್ಯರಸ್ತೆಯ ಬದಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ಅದೇ ಹೆಸರು ವಾರ್ಡ್‌ಗೆ ಇದೆ. ಆದರೆ ಮಳೆಗಾಲದ ಸಿದ್ಧತೆಗಳು ಇಲ್ಲಿ ನಡೆದಿಲ್ಲ.

Advertisement

ವಾರ್ಡ್‌ ವ್ಯಾಪ್ತಿ 
ಫಿಶ್‌ ಮಾರ್ಕೆಟ್‌ ರಸ್ತೆ, ಕನ್ವರ್‌ ಸಿಂಗ್‌ ರಸ್ತೆ ಹಾಗೂ ಕುಂದೇಶ್ವರ ದ್ವಾರದ ಎದುರಿನ ರಸ್ತೆಯ ಒಳಾವರಣದ ಮನೆಗಳು, ಅಂಗಡಿಗಳು, ಆಸ್ಪತ್ರೆಗಳು ಸರಕಾರಿ ಆಸ್ಪತ್ರೆ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ.

ಮರದ ಗೆಲ್ಲು ಕಡಿದಿಲ್ಲ
ಸರಿ ಸುಮಾರು 350ರಷ್ಟು ಮನೆಗಳು, 990ರಷ್ಟು ಮತದಾರರು ಇರುವ ಈ ವಾರ್ಡ್‌ನಲ್ಲಿ ರಸ್ತೆಗಳಿಗೆ ಕಾಂಕ್ರೀಟ್‌ ಕಾಮಗಾರಿಯಾಗಿದೆ. ಕೆಲವೆಡೆ ಇಂಟರ್‌ ಲಾಕ್‌ ಹಾಕಲಾಗಿದೆ. ಕೆಲವೆಡೆ ಒಳಚರಂಡಿ ವ್ಯವಸ್ಥೆ ಆಗಿಲ್ಲ. ಫಿಶ್‌ ಮಾರ್ಕೆಟ್‌ ರಸ್ತೆ ಮೂಲಕ ಸಾಗಿದಾಗ ನಾಗಬಬ್ಬರ್ಯ ದೇವಸ್ಥಾನಕ್ಕಿಂತ ಸ್ವಲ್ಪ ಮೊದಲು ದೊಡ್ಡ ಮರವಿದ್ದು, ಇದರ ಬಗ್ಗೆ ಜನರಿಗೆ ಆತಂಕವಿದೆ. ಪಕ್ಕದಲ್ಲೇ ಎಚ್‌ಟಿ ಲೈನ್‌ ಹಾದುಹೋಗುತ್ತಿದ್ದು, ಇದರಿಂದ ಮರದ ಗೆಲ್ಲಾದರೂ ಕಡಿಯಲಿ ಎಂಬುದು ನಿವಾಸಿಗಳ ಆಗ್ರಹವಾಗಿದೆ.

ಚರಂಡಿ ನೀರು ಮನೆಗೆ
ಕುಂದೇಶ್ವರ ದ್ವಾರದ ಎದುರು  ಮುಖ್ಯರಸ್ತೆಯ ಸರ್ವಿಸ್‌ ರಸ್ತೆಗೆ ಸಮೀಪ ಇರುವ ಮನೆಗಳಿಗೆ ಚರಂಡಿ ನೀರಿನ ಆತಂಕ  ಇದೆ. ಇಲ್ಲಿ ಸರ್ವಿಸ್‌ ರಸ್ತೆಯ ಕಾಮಗಾರಿ ಇನ್ನೂ ಪರಿಪೂರ್ಣವಾಗದ ಕಾರಣ ಈ ಭಾಗದಲ್ಲಿ ಚರಂಡಿ ಮಾಡಿದರೂ ಅದರ ನೀರು ಎಲ್ಲಿಗೆ ಬಿಡುವುದು ಎಂಬ ತಾಂತ್ರಿಕ ಸಮಸ್ಯೆಯಿದೆ. ಈ ಭಾಗದ ನಿವಾಸಿಗಳಿಗೆ ರಾ.ಹೆ. ಕಾಮಗಾರಿಯಿಂದ ಸಮಸ್ಯೆಯಾಗಿದ್ದು ಮಳೆಗಾಲವನ್ನು ಆತಂಕದಿಂದಲೇ ದೂಡಬೇಕಾಗಿದೆ. ಇಲ್ಲಿನ ವಾರ್ಡ್‌ ಸದಸ್ಯ ಸತೀಶ್‌ ಶೆಟ್ಟಿ ಅವರು ಈ ಬಾರಿ ಅನುದಾನ ಕಡಿಮೆ ಇದ್ದ ಕಾರಣ ಜನರ ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವಾಗಿಲ್ಲ ಎನ್ನುತ್ತಾರೆ. ಈ ಹಿಂದೆ ಒಳಚರಂಡಿ ಯೋಜನೆಗೆ ಅನುದಾನ ಬಂದಾಗ ವಾರ್ಡ್‌ನ ಎಲ್ಲ ಕಡೆ ಒಳಚರಂಡಿ ಕಾಮಗಾರಿ ನಡೆಸಲಾಗಿದೆ.

ಮನೆಯೊಳಗೆ ನೀರು
ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುವುದಿಲ್ಲ. ಮಳೆ ಬಂದರೆ ನೀರೆಲ್ಲ ಅಂಗಳದಲ್ಲಿ ಇರುತ್ತದೆ. ಮನೆಗೂ ಬರುತ್ತದೆ. 
– ಸಂಜೀವಿನಿ, ಮಕ್ಕಿಮನೆ

Advertisement

ಚರಂಡಿ ಹೂಳೆತ್ತಿಲ್ಲ
ಮನೆಗಳ ಪಕ್ಕ ಇರುವ ದೊಡ್ಡ ಗಾತ್ರದ ಮರದ ಕುರಿತು ಸದಾ ಆತಂಕ ಇದೆ. ಇದಕ್ಕೊಂದು ಪರಿಹಾರ ಬೇಕಿತ್ತು. ಚರಂಡಿ ಹೂಳೆತ್ತುವ ಕಾರ್ಯ ಸರಿಯಾಗಿ ನಡೆದಿಲ್ಲ. ಆಳವಾಗಿ ಹೂಳೆತ್ತದಿದ್ದರೆ ನೀರೆಲ್ಲ ರಸ್ತೆಯಲ್ಲಿರುತ್ತದೆ. 
– ನರಸಿಂಹ, ಮಾಣಿಮನೆ 

ಚರಂಡಿಗೆ ಜಾಗ ಇಲ್ಲ
ಕನ್ವರ್‌ಸಿಂಗ್‌ ರಸ್ತೆಯಲ್ಲಿ ಚರಂಡಿಯೇ ಇಲ್ಲ. ಚರಂಡಿ ಮಾಡಲು ಜಾಗವೂ ಇಲ್ಲ. ಸದಸ್ಯರಿಂದ ಉತ್ತಮ ಸ್ಪಂದನೆ ಇದೆ. ಆದರೆ ಕೆಲವು ಸಮಸ್ಯೆಗೆ ಪರಿಹಾರವೇ ಇಲ್ಲ.
– ನಾಗೇಶ್‌ ಕೆ., ಕನ್ವರ್‌ಸಿಂಗ್‌ ರಸ್ತೆ 

ಸಮಸ್ಯೆ ಇಲ್ಲ
ಅಂತಹ ದೊಡ್ಡ ಸಮಸ್ಯೆ ಇಲ್ಲ. ವಾರ್ಡ್‌ ಸದಸ್ಯರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ತತ್‌ಕ್ಷಣ ಸ್ಪಂದಿಸುತ್ತಾರೆ.
– ನರಸಿಂಹ ಶೇರೆಗಾರ್‌, ನಿವೃತ್ತ PWD ಅಧಿಕಾರಿ

ಸಾಧ್ಯವಾದಷ್ಟು ಮಾಡಿದ್ದೇನೆ
ನನ್ನಿಂದ ಸಾಧ್ಯವಾದಷ್ಟು ಮಾಡಿದ್ದೇನೆ. ಈ ಬಾರಿ ಅನುದಾನ ಕಡಿಮೆ ಇದ್ದ ಕಾರಣ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಹಾಗಿದ್ದರೂ ಜನರ ಶೇ.80ರಷ್ಟು ಬೇಡಿಕೆ ಈಡೇರಿಸಿದ ಸಮಾಧಾನ ಇದೆ. 
– ಸತೀಶ್‌ ಶೆಟ್ಟಿ, ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next