Advertisement
ಆಧಾರವೇ ಬೇಕುಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್, ಬ್ಯಾಂಕ್ ಖಾತೆ, ಮೊಬೈಲ್ ಸಿಮ್, ಪಡಿತರ ಚೀಟಿ, ಗ್ಯಾಸ್, ಮಕ್ಕಳ ಶಾಲೆ ಪ್ರವೇಶಾತಿ, ಪಾಸ್‌ಪೋರ್ಟ್, ಗುರುತಿನ ಚೀಟಿಗಳಿಗೆಲ್ಲ ಜೋಡಿಸಬೇಕಿದೆ. ಅಂದರೆ ಆಧಾರ್ ಕಾರ್ಡ್ ಆಧಾರದಲ್ಲೇ ಎಲ್ಲ ವ್ಯವಹಾರ ನಡೆಯುತ್ತದೆ. ಇಷ್ಟೆಲ್ಲ ಅತ್ಯಮೂಲ್ಯವಾದ ಆಧಾರ್ ಕಾರ್ಡ್ ಪಡೆಯಲು ಸಾರ್ವಜನಿಕರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.
ವಿಟ್ಲ ಮತ್ತು ಎಲ್ಲ ಆಧಾರ ಕೇಂದ್ರಗಳಲ್ಲಿ ಈ ಸಮಸ್ಯೆ ಮಾಮೂಲಿ. ಇಲಾಖೆಯು ಇತ್ತ ಗಮನಿಸುತ್ತಲೂ ಇಲ್ಲ. ವಿಟ್ಲದಲ್ಲಿ ನೆಮ್ಮದಿ ಕೇಂದ್ರವನ್ನು ಅಟಲ್ ಕೇಂದ್ರವೆಂದು ಹೆಸರು ಬದಲಾಯಿಸಲಾಗಿದೆ. ಆದರೆ ಸೇವೆ ಆರಂಭವಾದಂದಿನಿಂದ ನಾಗರಿಕರು ತೊಂದರೆ ಅನುಭವಿಸುತ್ತಲೇ ಇದ್ದಾರೆ. ಇಲ್ಲಿನ ಸೇವೆಯನ್ನು ಸರಿಪಡಿಸಲು ಇಲಾಖೆಯ ಮೇಲಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ನಾಗರಿಕರ ಟೀಕೆ.
Related Articles
‘ಆಧಾರ್ ಕಾರ್ಡ್ ಎಲ್ಲದಕ್ಕೂ ಆಧಾರ ಎಂದು ಎಲ್ಲೆಡೆ ಘೋಷಿಸಲಾಗಿದೆ. ಆದರೆ ಆಧಾರ್ ಕಾರ್ಡ್ ಪಡೆಯುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ. ನನ್ನ ಭಾವ ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರು. ಬಂದಿರಲಿಲ್ಲ : ಮತ್ತೆ ವಿಚಾರಿಸಿದೆ. ಸಿಗಲಿಲ್ಲ. ಈಗ ಒಂದು ವಾರದಿಂದ ವಿಟ್ಲ, ಪುತ್ತೂರು, ಬಿ.ಸಿ.ರೋಡ್‌ಗಳಿಗೆ ಅಲೆದಾಡಿದೆ. ಸೈಬರ್ ಸೆಂಟರ್, ಅಂಚೆ ಕಚೇರಿಗಳಿಗೆ ಅಡ್ಡಾಡಿದೆ. ಕಾರ್ಡ್ ಸಿಗಲಿಲ್ಲ. ಮತ್ತೆ ವಿಟ್ಲದಲ್ಲಿ ಪುನಃ ಹೊಸ ಅರ್ಜಿ ಸಲ್ಲಿಸುವುದಕ್ಕಾಗಿ ಸರದಿ ಸಾಲಲ್ಲಿ ನಿಂತೆ. ಟೋಕನ್ ನಂಬ್ರ 10 ಸಿಕ್ಕಿದೆ. ಮಧ್ಯಾಹ್ನ ವರೆಗೆ ನಾನೂ ಭಾವನೂ ಸರದಿ ಸಾಲಲ್ಲಿ ನಿಂತೆವು. ಆಗ ಕಂಪ್ಯೂಟರ್ ಸರಿಯಿಲ್ಲ ಎನ್ನಲಾಯಿತು’ ಎಂದು ಕಾರ್ಡ್ ಪಡೆಯುವ ತಮ್ಮ ಕಷ್ಟವನ್ನು ವಿವರಿಸಿದ್ದಾರೆ ಕುಕ್ಕೆ ಮನೆ ಶ್ರೀಧರ ಭಟ್.
Advertisement
‘ತಹಶೀಲ್ದಾರ್, ಆರ್‌ಐ ಅವರಿಗೆಲ್ಲ ಕರೆ ಮಾಡಿದೆ. ಎಲ್ಲರೂ ಗೊಣಗಲು ಆರಂಭಿಸಿದರು. ಕಂಪ್ಯೂಟರ್ ಸರಿಯಿಲ್ಲವೆಂದಾದಲ್ಲಿ ಏನು ಮಾಡಲು ಸಾಧ್ಯ? ಎಂಬ ಉತ್ತರ ಸಿಕ್ಕಿದೆ. ನಾಳೆ ಮತ್ತೆ ಸರದಿ ಸಾಲಲ್ಲಿ ನಿಲ್ಲಬೇಕು. ಮತ್ತೆ ಹೊಸ ಟೋಕನ್ ಪಡೆಯಬೇಕು. ಅಲ್ಲದೇ ಇಡೀ ದಿನ ಕಳೆಯಬೇಕು. ನನ್ನಂತೆ ನೂರಾರು ಜನ ಹಲವಾರು ದಿನಗಳಿಂದ ಆಧಾರ್ ಕಾರ್ಡ್‌ಗಾಗಿ ಹೀಗೆ ದಿನಗಟ್ಟಲೆ ಪರದಾಡುತ್ತಿದ್ದಾರೆ. ಈ ನಷ್ಟಗಳಿಗೆ ಯಾರು ಪರಿಹಾರ ಕೊಡುತ್ತಾರೆ ?’ ಎಂದು ಕೇಳುತ್ತಾರೆ ಅವರು. ಇದು ಒಬ್ಬರ ಕಷ್ಟವಲ್ಲ: ಹಲವರದ್ದು. ಇಲಾಖೆಯ ಕಚೇರಿಯಲ್ಲೂ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ, ಸಮಸ್ಯೆ ಬಿಗಡಾ ಯಿಸಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ವ್ಯವಸ್ಥೆಯನ್ನು ಸರಿಪಡಿಸಿ ಸೌಲಭ್ಯ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹ.
ಟೋಕನ್ ಸಮಸ್ಯೆಆಧಾರ್ ಕೇಂದ್ರಗಳಲ್ಲಿ ಪ್ರಜೆಗಳ ಪಾಡು ಹೇಳತೀರದು. ವಿಟ್ಲದಲ್ಲಿ ಪ್ರತಿದಿನ 30 ಆಧಾರ್ ಕಾರ್ಡ್ ಅರ್ಜಿದಾರರನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ 30 ಮಂದಿಗೆ ಮಾತ್ರ ಟೋಕನ್ ನೀಡಲಾಗುತ್ತದೆ. 10 ಗಂಟೆಗೆ ಕಚೇರಿ ತೆರೆಯುವುದಾದರೆ ಬೆಳಗ್ಗೆ 6.30ಕ್ಕೇ ನಾಗರಿಕರು ಸರದಿ ಸಾಲಲ್ಲಿ ನಿಲ್ಲುತ್ತಾರೆ. ಸರದಿ ಸಾಲಲ್ಲಿ ನಿಂತವರಲ್ಲಿ 30 ಮಂದಿ ಟೋಕನ್ ಪಡೆಯುತ್ತಾರೆ. ಆ ದಿನ ಕಾರಣಾಂತರದಿಂದ ಅವರ ಅರ್ಜಿ ಸ್ವೀಕರಿಸಲಾಗದೇ ಇದ್ದಲ್ಲಿ ಮರುದಿನ ಮತ್ತೆ ಸರದಿ ಸಾಲಲ್ಲಿ ನಿಂತು ಹೊಸ ಟೋಕನ್ ಪಡೆದುಕೊಳ್ಳಬೇಕು. ಅಧಿಕಾರಿಗಳ ಹೇಳಿಕೆ ಪ್ರಕಾರ ನಾಗರಿಕರು 10 ಗಂಟೆ ಬಳಿಕವೇ ಸರದಿ ಸಾಲಲ್ಲಿ ನಿಂತು ಟೋಕನ್ ಪಡೆದುಕೊಳ್ಳಬೇಕು. ಆದರೆ ಸಿಗುವ ಸಂಖ್ಯೆ ಕಡಿಮೆಯಿರುವುದರಿಂದ ಜನರು ಮುಗಿಬೀಳುವುದು ಕೂಡಾ ಅನಿವಾರ್ಯವಾಗಿದೆ. ಇದೆಲ್ಲ ಕಾರಣಗಳಿಂದ ಬಳಲಿ ಬೆಂಡಾಗಿರುವ ನಾಗರಿಕರು ಆಧಾರ್ ಕಾರ್ಡ್ ಒದಗಿಸಲು ಸರಕಾರ ಗಂಭೀರ ಕ್ರಮಕೈಗೊಳ್ಳದೇ ಇದ್ದಲ್ಲಿ ಅನೇಕ ಮಂದಿ ಜತೆಗೂಡಿ ಪ್ರತಿಭಟನೆಗೆ ಸಿದ್ಧ ಎಂದು ಉದಯವಾಣಿಗೆ ತಿಳಿಸಿದ್ದಾರೆ. ಸರ್ವರ್ ಸಮಸ್ಯೆ
ಸೋಮವಾರ ಸರ್ವರ್ ಸಮಸ್ಯೆ ಆರಂಭವಾಯಿತು. ಇತ್ತೀಚೆಗೆ ಇದನ್ನೆಲ್ಲ ಸರಿಪಡಿಸಲಾಗಿದೆ. ಮತ್ತೆ ಸಮಸ್ಯೆ ಆರಂಭವಾಗಿದೆ. ಸರ್ವರ್ ಸಮಸ್ಯೆ ಪರಿಹಾರವಾದ ತತ್‌ಕ್ಷಣ ನಾಗರಿಕರಿಗೆ ಅವಶ್ಯವಾದ ಕ್ರಮಕೈಗೊಳ್ಳಲಾಗುತ್ತದೆ.
– ದಿವಾಕರ ರೆವಿನ್ಯೂ ಅಧಿಕಾರಿ – ಉದಯಶಂಕರ್ ನೀರ್ಪಾಜೆ