ಹುಬ್ಬಳ್ಳಿ: ನಗರದ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಆಡಳಿತ ಕಚೇರಿ (ಅಡ್ಮಿನಿಸ್ಟ್ರೇಟಿವ್ ಬ್ಲಾಕ್)ಯಾಗಿ ಪರಿವರ್ತಿಸುತ್ತಿರುವುದರಿಂದ ಕಾರ್ಗೋ ಘಟಕವಿಲ್ಲದೇ ಸರಕು ಸಾಗಾಟಕ್ಕೆ ತೊಂದರೆಯಾಗಿದೆ. ನಗರದಿಂದ ದೇಶದ ವಿವಿಧೆಡೆ ಸಾಗಾಟ ಮಾಡಲಾಗುತ್ತಿದ್ದ ಸರಕು-ಸಾಮಗ್ರಿಗಳನ್ನು ಇಡಲು ವ್ಯವಸ್ಥೆ ಇಲ್ಲದೆ ವಿಮಾನ ನಿಲ್ದಾಣ ಪ್ರಾಧಿಕಾರದ ಆದಾಯದಲ್ಲಿ ಕಡಿತವಾಗಿದೆ.
ಹೊಸ ಕಾರ್ಗೋ ನಿಲ್ದಾಣಕ್ಕೆ ಪ್ರಸ್ತಾಪ?: ಹಳೆಯ ನಿಲ್ದಾಣದ ಟರ್ಮಿನಲ್ ಅನ್ನು ಕಾರ್ಗೋ ವಿಮಾನ (ಸರಕು ಸಾಗಣೆ)ಗಳ ಬಳಕೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿತ್ತು. ನಂತರ ಅದನ್ನು ಆಡಳಿತ ಕಚೇರಿಯನ್ನಾಗಿ ಮಾಡಿ, ಹೊಸದಾಗಿ ಕಾರ್ಗೋ ವಿಮಾನ ನಿಲ್ದಾಣ ಮಾಡಲು ಮತ್ತೂಂದು ಪ್ರಸ್ತಾಪ ಸಲ್ಲಿಸಿದೆ ಎಂದು ಗೊತ್ತಾಗಿದೆ. ಇರುವ ಹಳೆಯ ಟರ್ಮಿನಲ್ ಕಟ್ಟಡವನ್ನೇ ಕಾರ್ಗೋಗೆ ಬಳಕೆ ಮಾಡಿದರೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ಆದಾಯವಾಗುತ್ತದೆ. ಅಲ್ಲದೆ ಈ ಭಾಗದ ರೈತರ ಹಾಗೂ ಉದ್ಯಮಿಗಳ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಅವರು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.
ಸರಕು ಸಾಗಾಟಕ್ಕೆ ಹಿಂದೇಟು: ಹೊಸ ವಿಮಾನ ನಿಲ್ದಾಣವು ಸುಮಾರು 3600 ಚದರಡಿ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ ಹೊಂದಿದೆ. ಅಲ್ಲಿ ಆಡಳಿತ ಕಚೇರಿ ಸೇರಿದಂತೆ ಅಗತ್ಯ ಎಲ್ಲ ಸೌಲಭ್ಯಗಳು ಇವೆ. ಕಾರ್ಗೋ ನಿಲ್ದಾಣ ಕಾರ್ಯಾರಂಭದಿಂದಾಗಿ ಈಗ ವಿಮಾನಯಾನ ಸೇವೆ ಸಲ್ಲಿಸುತ್ತಿರುವ ಕಂಪನಿಗಳು ತಮ್ಮ ವಿಮಾನಗಳಲ್ಲಿಯೇ ಮುಂಬಯಿ, ಬೆಂಗಳೂರು, ಅಹ್ಮದಾಬಾದ್, ಚೆನ್ನೈ, ಗೋವಾ, ಕೊಚ್ಚಿ, ಹೈದರಾಬಾದ್, ಪುಣೆ, ತಿರುಪತಿಗೆ ಸರಕು ಸರಬರಾಜು ಮಾಡುತ್ತಿದ್ದವು.
ಆದರೆ, ಈಗ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ದಲ್ಲಿ ಕಾರ್ಗೋ ಬದಲು ಆಡಳಿತ ಕಚೇರಿ ನಿರ್ಮಿಸುತ್ತಿರುವುದರಿಂದ ವಿಮಾನಯಾನ ಕಂಪನಿಗಳಿಗೆ ಗ್ರಾಹಕರಿಂದ ಬರುವ ಸರಕು ಇಟ್ಟುಕೊಳ್ಳಲು ಸ್ಥಳಾವಕಾಶ ಇಲ್ಲದಂತಾಗಿದೆ. ಅವರು ಗ್ರಾಹಕರಿಂದ ಸರಕುಗಳನ್ನು ಸಾಗಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸರಕು ಸಾಗಾಟ ಕುಂಠಿತಗೊಂಡಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರಕ್ಕೂ ಹಾಗೂ ವಿಮಾನಯಾನ ಕಂಪನಿಗಳಿಗೂ ಆದಾಯದಲ್ಲಿ ಕಡಿತ ಉಂಟಾಗುತ್ತಿದೆ ಎನ್ನಲಾಗಿದೆ.
Advertisement
ನಗರದ ವಿಮಾನ ನಿಲ್ದಾಣದಿಂದ ದೇಶದ ವಿವಿಧೆಡೆ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜೊತೆಗೆ ಸರಕು ಸಾಗಾಟವೂ ಹೆಚ್ಚಳವಾಗುತ್ತಿದೆ. ಆದರೆ ಇದುವರೆಗೆ ಕಾರ್ಗೋ ನಿಲ್ದಾಣವನ್ನಾಗಿ ಬಳಸಲಾಗುತ್ತಿದ್ದ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಆಡಳಿತ ಕಚೇರಿಯಾಗಿ ಪರಿವರ್ತಿಸಲಾಗುತ್ತಿದೆ. ಇದು ನಗರದಿಂದ ಸರಕು ಸಾಗಾಟ ಮಾಡುವ ವಿಮಾನಯಾನ ಕಂಪನಿಗಳಿಗೆ ದುಸ್ತರವಾಗಿದೆ.
Related Articles
ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ದಲ್ಲಿ ಆಡಳಿತ ಕಚೇರಿ ಇಲ್ಲವೇ ಕಾರ್ಗೋ ನಿಲ್ದಾಣ ಮಾಡುವ ವಿಚಾರವಿದೆ. ಈಗಾಗಲೇ ವಿಮಾನಯಾನ ಸಚಿವಾಲಯಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ವೇಳೆ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ದಲ್ಲಿ ಆಡಳಿತ ಕಚೇರಿ ಸ್ಥಾಪಿಸಿದರೆ, ಹೊಸದಾಗಿ ಕಾರ್ಗೋ ನಿಲ್ದಾಣ ಸ್ಥಾಪಿಸಲಾಗುವುದು. ಆದರೆ ನಮ್ಮ ಪ್ರಸ್ತಾವನೆಗೆ ಇದುವರೆಗೆ ವಿಮಾನಯಾನ ಸಚಿವಾಲಯದಿಂದ ಯಾವುದೇ ಪ್ರತ್ಯುತ್ತರ ಬಂದಿಲ್ಲ. • ಪ್ರಮೋದ ಕುಮಾರ ಠಾಕೂರ, ವಿಮಾನ ನಿಲ್ದಾಣ ನಿರ್ದೇಶಕ
ನಗರದ ಹಳೆಯ ವಿಮಾನ ನಿಲ್ದಾಣದ ಟರ್ಮಿನಲ್ದಲ್ಲಿ ಕಾರ್ಗೋ ಬದಲು ಆಡಳಿತ ಕಚೇರಿ ನಿರ್ಮಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಆದರೆ ಅದನ್ನು ಕಾರ್ಗೋ ಮಾಡಲು ಏನು ಅವಶ್ಯವೋ ಆ ಕುರಿತು ಪ್ರಯತ್ನ ಮಾಡುವೆ. ಯಾವ ತಾಂತ್ರಿಕ ಸಮಸ್ಯೆಯಿದೆಯೋ ಅದನ್ನೆಲ್ಲ ಉನ್ನತ ಮಟ್ಟದಲ್ಲಿ ಸರಿಪಡಿಸುವೆ. • ಪ್ರಹ್ಲಾದ ಜೋಶಿ,ಸಂಸದೀಯ ವ್ಯವಹಾರಗಳ ಸಚಿವ
•ಶಿವಶಂಕರ ಕಂಠಿ
Advertisement