ಗೋಕಾಕ: ಕಳೆದ ಆಗಸ್ಟ್ ತಿಂಗಳಿನಲ್ಲಿ ಪ್ರವಾಹದಿಂದ ತತ್ತರಿಸಿ ಬದುಕು ಕಟ್ಟಿಕೊಳ್ಳಲು 4 ತಿಂಗಳಿನಿಂದ ಹೆಣಗಾಡುತ್ತಿರುವ ನೆರೆ ಸಂತ್ರಸ್ತರ ಸಮಸ್ಯೆಗಳತ್ತ ಸರ್ಕಾರ ಮತ್ತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ಭಾರೀ ಮಳೆ ಹಾಗೂ ಪ್ರವಾಹದಿಂದ ಗೋಕಾಕ ನಗರದಲ್ಲಿ ಸಾವಿರಾರು ಮನೆ ನೀರು ಪಾಲಾಗಿ ತೀವ್ರ ಸಂಕಟದಲ್ಲಿ ಇರುವವರಿಗೆ ಮಾನವೀಯತೆ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ಅಧಿ ಕಾರಿಗಳು ಸಂತ್ರಸ್ತರ ನೆರವಿಗೆ ಧಾವಿಸುತ್ತಿಲ್ಲ. ಅಲ್ಲದೇ ನೆರೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಪರಿಹಾರ ಧನಕ್ಕಾಗಿ ದಿನನಿತ್ಯ ಅಧಿ ಕಾರಿಗಳ ಕಡೆಗೆ ಅಲೆಯುವಂತಾಗಿದೆ ಎಂದು ಸಂತ್ರಸ್ತರು ಅಳಲು ತೊಡಿಕೊಂಡಿದ್ದಾರೆ.
ಗೋಕಾಕ ನಗರದಲ್ಲಿ ಒಟ್ಟು 1538 ಮನೆಗಳು (ಅಧಿಕೃತ) ಬಿದ್ದ ಮನೆಗಳಾಗಿದ್ದು, ಇದರಲ್ಲಿ (ಅನಧಿಕೃತ) ಅಂದರೆ ಕೆಲ ದಾಖಲೆಗಳು ಇಲ್ಲದೇ ಬಿದ್ದ ಮನೆಗಳ ಸಂಖ್ಯೆ 143 ಇವೆ. ಎ ಕೆಟಗೇರಿ ಫಲಾನುಭವಿಗಳ ಸಂಖ್ಯೆ 841 ಇದೆ. ಅವರಿಗೆ 1 ಲಕ್ಷ ರೂ. ಹಾಗೂ ಬಾಡಿಗೆ ಹಣ 25 ಸಾವಿರ ರೂ. ಮತ್ತು ಬಿ ಕೆಟಗೇರಿ ಫಲಾನುಭವಿಗಳ ಸಂಖ್ಯೆ 79 ಇದ್ದು, ಅವರಿಗೆ 1 ಲಕ್ಷ ರೂ. ನೆರವು ಫಲಾನುಭವಿಗಳ ಖಾತೆಗೆ ಜಮೆಯಾಗಿವೆ. ಮತ್ತು ಸಿ ಕೆಟಗೇರಿ ಜನರಿಗೆ 50 ಸಾವಿರ ರೂ. ಇನ್ನೂ ಜಮಾ ಆಗಿಲ್ಲ. ಅದರಲ್ಲಿ 25 ಸಾವಿರ ರೂ. ಮಾತ್ರ ಬಿಡುಗಡೆ ಮಾಡಿದ್ದು, ನೆರೆ ಸಂತಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಒಟ್ಟು ಫಲಾನುಭವಿಗಳಲ್ಲಿ 287 ಜನರ ಹೆಸರುಗಳನ್ನು ವಿವಿಧ ಕಾರಣಗಳಿಂದ ಡಿಲೀಟ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರಿಗೆ ಸಿಎಂ ಮನವಿ: ಪ್ರವಾಹದಿಂದ ತೀವ್ರ ಹಾನಿಗೀಡಾದ ಎ ಮತ್ತು ಬಿ ವರ್ಗದ ಮನೆಗಳ ಪುನರ್ ನಿರ್ಮಾಣಕ್ಕೆ 5 ಲಕ್ಷ ರೂ.ಗಳ ನೆರವು ಸರ್ಕಾರ ಘೋಷಿಸಿದೆ. ಆದರೆ 5 ಲಕ್ಷದ ಪೈಕಿ 1 ಲಕ್ಷ ರೂ. ನೆರೆ ಸಂತ್ರಸ್ತರ ಖಾತೆ ಜಮೆಗೊಂಡರೂ ಅದರಲ್ಲಿ ಇನ್ನು ಶೇ. 30ರಷ್ಟು ನೆರೆ ಸಂತ್ರಸ್ತರ ಖಾತೆಗೆ ಹಣವೇ ಜಮೆ ಆಗಿಲ್ಲ. ಉಳಿದ 4 ಲಕ್ಷ ರೂ. ಅನುದಾನವನ್ನು ನಿರ್ಮಾಣವಾಗುತ್ತಿರುವ
ಮನೆಯ ಹಂತ ಹಂತವಾಗಿ ಜಿಪಿಎಸ್ ಛಾಯಾಚಿತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಈಗಾಗಲೇ ಶೇ. 50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದು, ಇನ್ನುಳಿದ ಜನರು ಮನೆ ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ. ಕಾರಣ ಈಗಾಗಲೇ ಕಟ್ಟಡಗಳನ್ನು ಕಟ್ಟುತ್ತಿರುವ ಮನೆಗಳ ಜಿಪಿಎಸ್ ಮಾಡದ ಅಧಿಕಾರಿಗಳು ಇನ್ನುಳಿದ ಅನುದಾನಬಿಡುಗಡೆಯಾಗುತ್ತದೆಯೋ ಅಥವಾ ಇಲ್ಲ ಎಂಬ ಸಂಶಯವನ್ನು ವ್ಯಕ್ತಪಡಿಸಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
-ಮಲ್ಲಪ್ಪ ದಾಸಪ್ಪಗೋಳ