ನವದೆಹಲಿ: ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು-ಆಸ್ಪತ್ರೆಯ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಸೆ.06) ಬೆಳಗ್ಗೆ ಜಾರಿ ನಿರ್ದೇಶನಾಲಯ ಆರ್ ಜಿ ಕರ್ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ನಿಕಟವರ್ತಿ ಬಿಪ್ಲಾಬ್ ಸಿಂಗ್ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಪ್ರಕರಣದಲ್ಲಿ ಸಿಬಿಐ ಈಗಾಗಲೇ ಬಿಪ್ಲಾಬ್ ಸಿಂಗ್ ನನ್ನು ಬಂಧಿಸಿದೆ. ಕಳೆದ ತಿಂಗಳು ಆರ್ ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಘಟನೆ ನಡೆದಿದ್ದು, ಇದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಜಾರಿ ನಿರ್ದೇಶನಾಲಯ (ED) ಘೋಷ್ ಅವರ ಬೆಲಿಯಾಘಾಟಾ ನಿವಾಸ, ಹೌರಾ ಹಾಗೂ ಸುಭಾಸ್ ಗ್ರಾಮ್ ನಿವಾಸ ಮತ್ತು ಮೂವರು ನಿಕಟವರ್ತಿಗಳ ಮನೆ ಮೇಲೆ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಆಸ್ಪತ್ರೆಯ ಡಾಟಾ ಎಂಟ್ರಿ ನಿರ್ವಾಹಕ ಪ್ರಸೂನ್ ಚಟರ್ಜಿ ನಿವಾಸದ ಮೇಲೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಆಸ್ಪತ್ರೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಿಬಿಐ ಘೋಷ್ ಅವರನ್ನು ಬಂಧಿಸಿತ್ತು.
ತನಿಖೆಯ ವರದಿಯನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆ ಕೋಲ್ಕತಾ ಹೈಕೋರ್ಟ್ ಸಿಬಿಐಗೆ ಸೂಚನೆ ನೀಡಿದ್ದು, ಸೆಪ್ಟೆಂಬರ್ 17ರಂದು ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.