ಬೆಂಗಳೂರು: ನಮ್ಮ ವೈರಿ ರಾಷ್ಟ್ರ ಪಾಕಿಸ್ಥಾನ ಪರ ಘೋಷಣೆ ಕೂಗಿರುವವರನ್ನು ಅಂಡಮಾನ್ ಸೆಲ್ಯೂಲಾರ್ ಜೈಲಿಗೆ ಕಳುಹಿಸಿ, ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಯಾವುದೇ ವ್ಯಕ್ತಿ ನಮ್ಮ ವೈರಿ ರಾಷ್ಟ್ರ ಪಾಕಿಸ್ಥಾನ ಪರ ಜೈಕಾರ ಹಾಕುವುದು ಅಕ್ಷಮ್ಯ ಅಪರಾಧ. ಯಾವುದೇ ಭಾರತೀಯರು ಇದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಆಕೆ ಮಾತನಾಡುವ ಧಾಟಿ ನೋಡಿದರೆ ಯೋಚನೆ ಮಾಡಿಯೇ ಮಾತನಾಡಿದಂತಿದೆ. ಹುಬ್ಬಳ್ಳಿಯಲ್ಲಿ ನಡೆದ ಘಟನೆ ಮತ್ತು ಬೆಂಗಳೂರಿನಲ್ಲಿ ನಡೆದ ಘಟನೆಗಳನ್ನು ಕಾಂಗ್ರೆಸ್ ಖಂಡಿಸುತ್ತದೆ. ಪೊಲೀಸರು ತತ್‌ಕ್ಷಣ ಸ್ಪಂದಿಸಿ ಆಕೆಯನ್ನು ದಸ್ತಗಿರಿ ಮಾಡಿ, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿರುವುದು ಸ್ವಾಗತಾರ್ಹ ಎಂದರು.
ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪಿಸಿ ಶೀಘ್ರ ತೀರ್ಪು ನೀಡುವಂತಾಗಬೇಕು. ನಮಗೆ ದೇಶ ಮೊದಲು ಅನಂತರ ಪಕ್ಷ. ನಮ್ಮ ಶತ್ರು ರಾಷ್ಟ್ರಗಳ ಪರ ಘೋಷಣೆ ಕೂಗುವವರಿಗೆ ಭಾರತದಲ್ಲಿ ಸ್ಥಾನ ಇಲ್ಲ ಎಂದರು.
ಕಾಂಗ್ರೆಸ್ ಯಾವತ್ತೂ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲ ಸೂಚಿಸಿಲ್ಲ. ನಮಗೆ ದೇಶ ಮುಖ್ಯ. “ಫ್ರೀ ಕಾಶ್ಮೀರ್’ ಎಂದರೆ ಅಲ್ಲಿ ತಡೆ ಹಿಡಿದಿದ್ದ ಇಂಟರ್‌ನೆಟ್ ಮತ್ತು ಬೇರೆ ಸೌಲಭ್ಯಗಳನ್ನು ನೀಡುವಂತೆ ಒತ್ತಾಯ ಮಾಡಿದ್ದು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.ನಾವು ಸ್ಟಂಟ್ ಮಾಡಲು ಕಾಶ್ಮೀರ ಪರವಾಗಿಲ್ಲ.ಬಿಜೆಪಿಯವರು ಈಗಲೂ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದಿಲ್ಲ. ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತೂ ಆಟ ಆಡುವುದಿಲ್ಲ. ನಾವು ಬಿರಿಯಾನಿ ತಿನ್ನಲು, ಜರತಾರಿ ಸೀರೆ ಕೊಡಲು ಪಾಕಿಸ್ಥಾನಕ್ಕೆ ಹೋಗಿಲ್ಲ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.