ಬೆಂಗಳೂರು: ಪಾಕಿಸ್ತಾನ ಪರ ಘೋಷಣೆ ಕೂಗಿರುವ ಪ್ರಕರಣವನ್ನು ದೇಶದ್ರೋಹ ಎಂದು ಅತ್ಯಂತ ಗಂಭೀರವಾಗಿ ಸರ್ಕಾರ ಪರಿಗಣಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ವಿರುದ್ಧ ಹೇಳಿಕೆಯಾಗಲಿ, ಪಾಕ್ ಪರ ಹೇಳಿಕೆಯಾಗಲೀ ಯಾರೂ ಕೊಡಬಾರದು. ಇಂತಹ ಹೇಳಿಕೆಯನ್ನು ಯಾರೇ ಕೊಟ್ಟರೂ ಅವರನ್ನು ಗಡಿಪಾರು ಮಾಡಬೇಕು. ಕ್ರೂರ ಶಿಕ್ಷೆ ವಿಧಿಸಬೇಕು ಎಂದರು.
ಅಮೂಲ್ಯ ಹಿನ್ನಲೆ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ. ಮಾಹಿತಿ ಪಡೆಯುತ್ತಿರುವುದಾಗಿ, ದೇಶದ ವಿಚಾರದಲ್ಲಿ ಒಗ್ಗಟ್ಟು ಇರಬೇಕು. ಒಗ್ಗಟ್ಟು ಒಡೆಯುವ ಕೆಲಸ ಆಗಬಾರದು. ನಾನು ಅಮಾಯಕರು ಎಂದದ್ದು ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಮೃತರಾದವರು ಮತ್ತು ಜೈಲಿಗೆ ಸೇರಿದವರ ಬಗ್ಗೆ ಅದನ್ನು ಕೋರ್ಟ್ ಸಹ ಹೇಳಿದೆ. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿದರು.
ಅಮೂಲ್ಯಾ ಆಗಲಿ ಮತ್ಯಾರೋ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆಕೆ ಪಾಕ್ ಪರ ಘೋಷಣೆ ಕೂಗಿರುವ ಬಗ್ಗೆ ಹೆಚ್ಚಿನ ತನಿಖೆಯಾಗಲಿ. ದೇಶವಿರೋಧಿ ಚಟುವಟಿಕೆಗೆ ಯಾವುದೇ ವೇದಿಕೆಯಾಗಲಿ ದುರ್ಬಳಕೆ ಆಗಬಾರದು. ದೇಶ ಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯ ಒಂದೇ.
-ಡಿ.ಕೆ.ಶಿವಕುಮಾರ್, ಮಾಜಿ ಸಚಿವ.
ಇಲ್ಲಿನ ಸವಲತ್ತುಗಳನ್ನು ಪಡೆದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಕೆಟ್ಟ ಮನಸ್ಥಿತಿಯ ಎಲ್ಲರನ್ನೂ ದೇಶದಿಂದ ಗಡಿಪಾರು ಮಾಡಬೇಕು. ಬದುಕಿನ ಕೊನೆ ಉಸಿರಿರುವವರೆಗೂ ಪಶ್ಚಾತಾಪ ಪಡುವಂತೆ ಕಠಿಣ ಕ್ರಮ ಜರುಗಿಸಬೇಕು. ಇಂತವರಿಗೆ ಪ್ರಚೋದನೆ ನೀಡಿದರಿಗೂ ಶಿಕ್ಷೆ ಆಗಬೇಕು.
-ಎಸ್.ಆರ್.ಪಾಟೀಲ್, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ.